ಮಂಗಳವಾರ, ಜೂನ್ 22, 2021
27 °C
ಮಹಿಳಾ ಕ್ರಿಕೆಟ್: ಡಬ್ಲ್ಯು.ವಿ.ರಾಮನ್ ತೆಗೆದುಹಾಕಲು ವೈಯಕ್ತಿಕ ಹಿತಾಸಕ್ತಿ ಕಾರಣವಾಯಿತೇ?

ಭಾರತ ಮಹಿಳಾ ಕ್ರಿಕೆಟ್ ತಂಡ: ಕೋಚ್ ಆಯ್ಕೆಯಲ್ಲಿ ಪಕ್ಷಪಾತ?

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಡಬ್ಲ್ಯು.ವಿ.ರಾಮನ್ ಅವರನ್ನು ತೆಗೆದುಹಾಕಿದ್ದಕ್ಕೆ ಸಂಬಂಧಿಸಿ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಮತ್ತು ಆಯ್ಕೆ ಸಮಿತಿಯ ಪ್ರಮುಖರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಟೀಕೆಗೆ ಒಳಗಾಗುವ ಸಾಧ್ಯತೆ ಇದೆ.

ಭಾರತ ಕಂಡ ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರು ಎಂದು ಹೇಳಲಾಗುವ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ರಾಮನ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುರುವಾರ ಅವರನ್ನು ಕೋಚ್ ಹುದ್ದೆಯಿಂದ ತೆಗೆದುಹಾಕಿ ರಮೇಶ್ ಪೊವಾರ್‌ಗೆ ಆ ಸ್ಥಾನ ನೀಡಲಾಗಿತ್ತು.

ಮದನ್‌ ಲಾಲ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಮತ್ತು ನೀತು ಡೇವಿಡ್ ಮುಂದಾಳುತ್ವದ ಆಯ್ಕೆ ಸಮಿತಿ ಹೊಸ ಕೋಚ್ ನೇಮಕ ಮಾಡಿತ್ತು. ಪೊವಾರ್ ಅವರನ್ನು 2018ರಲ್ಲಿ ಕೋಚ್ ಹುದ್ದೆಯಿಂದ ತೆಗೆದುಹಾಕಲಾಗಿತ್ತು. 

ಭಾರತ ಕ್ರಿಕೆಟ್‌ನಲ್ಲಿ ಸುಧಾರಣೆ ತರಲು ಲೋಧಾ ಸಮಿತಿ ಮಾಡಿರುವ ಶಿಫಾರಸುಗಳಲ್ಲಿ 70 ವರ್ಷ ದಾಟಿದವರನ್ನು ಪ್ರಮುಖ ಹುದ್ದೆಗಳಲ್ಲಿ ಮುಂದುವರಿಸಬಾರದು ಎಂದು ಹೇಳಲಾಗಿತ್ತು. ಲೋಧಾ ಶಿಫಾರಸುಗಳನ್ನು ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸುವಾಗ ಬಿಸಿಸಿಐ ಈ ವಿಷಯದ ಕುರಿತು ತಕರಾರು ಎತ್ತಲಿಲ್ಲ. ಈ ಹಿನ್ನೆಲೆಯಲ್ಲಿ ಮದನ್‌ಲಾಲ್ ಅವರನ್ನು ಸಿಎಸಿಯಲ್ಲಿ ಮುಂದುವರಿಸಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ.

ಅವರು ಕಳೆದ ಮಾರ್ಚ್‌ 20ರಂದು 70ನೇ ಜನ್ಮದಿನ ಆಚರಿಸಿದ್ದರು. ಹೀಗಾಗಿ ಮದನ್‌ಲಾಲ್ ಗುರುವಾರ ಸಭೆಗೆ ಹಾಜರಾದದ್ದು ಹೇಗೆ ಎಂಬ ಸಂದೇಹ ಪ್ರಶ್ನೆಗೆ ಉತ್ತರ ಕಂಡುಹುಡುಕಬೇಕಾಗಿದೆ. ಸಿಎಸಿ ಮತ್ತು ಆಯ್ಕೆ ಸಮಿತಿ ಪೊವಾರ್‌ಗೆ ಮಣೆ ಹಾಕಿದ್ದರ ಬಗ್ಗೆ ತಕರಾರು ಇಲ್ಲದಿದ್ದರೂ ರಾಮನ್ ಅವರನ್ನು ತೆಗೆದುಹಾಕಿದ್ದರ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ.

ಮುಂಬೈ ಕ್ರಿಕೆಟ್ ಸಂಸ್ಥೆಯ ಸಹಕಾರ್ಯದರ್ಶಿ ಸಂಜಯ್‌ ನಾಯಕ್ ಅವರ ಕಿರಿಯ ಸಹೋದರಿ ಹಾಗೂ ಭಾರತ ತಂಡದ ಮಾಜಿ ಆಟಗಾರ್ತಿ ಸುಲಕ್ಷಣಾ ನಾಯಕ್ ವಿವಿಧ ನೇಮಕಾತಿಗೆ ಸಂಬಂಧಪಟ್ಟು ಸಿಎಸಿಯ ಮೂರು ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಅವರ ಆಶಯದಂತೆ ರಾಮನ್ ಅವರನ್ನು ತೆಗೆದುಹಾಕಿರಬಹುದು ಎಂದು ಆಯ್ಕೆ ಸಮಿತಿಯಲ್ಲಿದ್ದ ಸದಸ್ಯರೊಬ್ಬರು ಹೇಳಿದ್ದಾರೆ. 

‘ರಮೇಶ್ ಪೊವಾರ್ ಹಾಕಿಕೊಟ್ಟ ಬುನಾದಿ ಮೇಲೆ ರಾಮನ್ ಅವರು ತಂಡವನ್ನು ವಿಶ್ವಕಪ್ ಫೈನಲ್‌ಗೆ ತಲುಪಿಸಿದ್ದಾರೆ ಎಂಬ ವಾದ ಕೇಳಿಬಂದಿದೆ. ಇಂಥ ವಾದಗಳನ್ನು ರಾಮನ್ ಅವರನ್ನು ಕೋಚ್ ಹುದ್ದೆಯಿಂದ ತೆಗೆದುಹಾಕುವುದಕ್ಕೆ ಪೂರಕವಾಗಿಯೇ ಮಂಡಿಸಲಾಗಿದೆ’ ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಆಯ್ಕೆ ವೇಳೆ ರಾಮನ್–ನೀತು ಜಟಾಪಟಿ?
ಸ್ಫೋಟಕ ಶೈಲಿಯ ಬ್ಯಾಟರ್ ಶಫಾಲಿ ವರ್ಮಾ ಮತ್ತು ಪ್ರಮುಖ ಬೌಲರ್ ಶಿಖಾ ಪಾಂಡೆ ಅವರನ್ನು ಕೈಬಿಟ್ಟು ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ತಂಡವನ್ನು ಆಯ್ಕೆ ಮಾಡಿದ ನೀತು ಡೇವಿಡ್‌ ನೇತೃತ್ವದ ಸಮಿತಿಯ ವಿರುದ್ಧ ರಾಮನ್ ಧ್ವನಿ ಎತ್ತಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧರಾಗದೇ ಇದ್ದ ಲೆಗ್ ಸ್ಪಿನ್ನರ್ ಸಿ.ಪ್ರತ್ಯೂಷಾ ಮತ್ತು ಎಡಗೈ ವೇಗಿ ಮೋನಿಕಾ ಪಟೇಲ್ ಆಯ್ಕೆಗೂ ಬೇಸರ ವ್ಯಕ್ತಪಡಿಸಿದ್ದರು ಎಂದು ವಿವಿಧ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

ರಾಮನ್ ಮೇಲೆ ಆಟಗಾರ್ತಿಯರ ಪೈಕಿ ಬಹುತೇಕರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ತರಬೇತಿ ಸಂದರ್ಭದ ಹೆಚ್ಚಿನ ಅವಧಿಯಲ್ಲಿ ತಂಡದ ಜೊತೆಯಲ್ಲೇ ಇದ್ದು ಸಲಹೆಗಳನ್ನು ನೀಡುವುದಿಲ್ಲ. ಉತ್ತಮ ಸಾಧನೆ ಮಾಡಿದರೂ ಕೆಲವರ ಬಗ್ಗೆ ಒಮ್ಮೆಯೂ ಮೆಚ್ಚುಗೆಯ ನುಡಿಗಳನ್ನಾಡಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು