ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಾಜಿಗಿಟ್ಟ ಬ್ಯಾಟ್ ವಿಶೇಷವಾದದ್ದು, ನನ್ನ ಜನರು ಅದಕ್ಕಿಂತಲೂ ಮಿಗಿಲಾದವರು: ಶಕೀಬ್

Last Updated 22 ಏಪ್ರಿಲ್ 2020, 10:19 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಅನುಭವಿ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರು ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದು, ಅದಕ್ಕಾಗಿ 2019ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ ಬ್ಯಾಟ್‌ ಅನ್ನು ಹರಾಜಿಗಿಟ್ಟಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿರುವ ಶಕೀಬ್‌, ‘ನಾನು ಬ್ಯಾಟ್‌ ಅನ್ನು ಹರಾಜಿಗಿಡಲು ಬಯಸಿರುವುದಾಗಿ ಈ ಮೊದಲೇ ಹೇಳಿದ್ದೆ. ಅದರಂತೆ 2019 ರ ವಿಶ್ವಕಪ್‌ನಲ್ಲಿ ಬಳಸಿದ್ದ ಬ್ಯಾಟ್‌ನ್ನು ಹರಾಜಿಗಿಡಲು ನಿರ್ಧರಿಸಿದ್ದೇನೆ. ಇದು ನನ್ನ ನೆಚ್ಚಿನ ಬ್ಯಾಟ್’ಎಂದು ಹೇಳಿಕೊಂಡಿದ್ದಾರೆ.

‘ಇದು ನನ್ನ ಪಾಲಿಗೆ ಅತ್ಯುತ್ತಮ ವಿಶ್ವಕಪ್‌ ಆಗಿತ್ತು. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಕೆಲ ಉತ್ತಮ ಇನಿಂಗ್ಸ್‌ಗಳು ಮೂಡಿಬಂದವು. ಟೂರ್ನಿಯುದ್ದಕ್ಕೂ ಒಂದೇ ಬ್ಯಾಟ್‌ ಬಳಸಿದ್ದೆ’ ಎಂದು ತಿಳಿಸಿದ್ದಾರೆ.

ಮುಂದುವರಿದು, ‘ಇದು ವಿಶ್ವಕಪ್‌ನಲ್ಲಷ್ಟೇ ಬಳಸಿದ ಬ್ಯಾಟ್‌ ಅಲ್ಲ. ಅದಕ್ಕೂ ಮೊದಲು ಮತ್ತು ನಂತರವೂ ಬಳಸಿದ್ದೇನೆ. ಈ ಬ್ಯಾಟ್‌ನಲ್ಲಿ 1500ಕ್ಕೂ ಹೆಚ್ಚು ರನ್‌ ಗಳಿಸಿದ್ದೇನೆ. ಈ ಬ್ಯಾಟ್‌ ನನ್ನ ಪಾಲಿಗೆ ತುಂಬಾ ವಿಶೇಷವಾದದ್ದು. ಆದರೆ, ನನ್ನ ಜನರು ಅದಕ್ಕಿಂತಲೂ ಮಿಗಿಲಾದವರು’ಎಂದಿದ್ದಾರೆ.

ಹರಾಜಿನಿಂದ ಬಂದ ಹಣವು ಶಕೀಬ್‌ ಅಲ್‌ ಹಸನ್‌ ಫೌಂಡೇಷನ್‌ಗೆ ಹೋಗಲಿದೆ. ಫೌಂಡೇಷನ್‌ ಮೂಲಕ ನೆರವು ನೀಡುವುದು ಈ ಎಡಗೈ ಆಲ್ರೌಂಡರ್‌ ಉದ್ದೇಶವಾಗಿದೆ.

ಟೂರ್ನಿಯೊಂದರ ಸಂದರ್ಭ ಬುಕ್ಕಿಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದವಿಚಾರವನ್ನು ಐಸಿಸಿ ಗಮನಕ್ಕೆ ತಂದಿರಲಿಲ್ಲ ಎಂಬ ಆರೋಪದ ಮೇಲೆ ಸದ್ಯ ಎರಡು ವರ್ಷ ನಿಷೇಧದಲ್ಲಿರುವ ಶಕೀಬ್‌, ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ್ದರು.

ಇಂಗ್ಲೆಂಡ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಆಡಿದ ಎಂಟು ಪಂದ್ಯಗಳಿಂದ ಎರಡು ಶತಕ ಮತ್ತು 5 ಅರ್ಧಶತಕ ಸೇರಿದಂತೆ 606 ರನ್‌ ಗಳಿಸಿದ್ದರು. ಮಾತ್ರವಲ್ಲದೆ 11 ವಿಕೆಟ್‌ಗಳನ್ನೂ ಉರುಳಿಸಿದ್ದರು. ಹೀಗಾಗಿ ವಿಶ್ವಕಪ್‌ ಟೂರ್ನಿಯೊಂದರಲ್ಲಿ 600ಕ್ಕೂ ಹೆಚ್ಚು ರನ್‌ ಮತ್ತು 10ಕ್ಕಿಂತ ಹೆಚ್ಚು ವಿಕೆಟ್‌ ಪಡೆದ ವಿಶ್ವದ ಏಕೈಕ ಆಟಗಾರ ಎನಿಸಿದ್ದರು.

ಬಾಂಗ್ಲಾ ತಂಡದ ವಿಕೆಟ್‌ ಕೀಪರ್‌ ಮುಫ್ಫಿಕುರ್ ರಹೀಂ ಅವರೂ ಬ್ಯಾಟ್ ಹರಾಜಿಗೆ ಇಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು ಮುಂದಾಗಿದ್ದರು. ರಹೀಂ, 2013ರಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಸಿಡಿಸಿದಾಗ ಬಳಸಿದ್ದ ಬ್ಯಾಟ್‌ ಅನ್ನು ಹರಾಜಿಗಿಟ್ಟಿದ್ದಾರೆ. ಇದರಿಂದ ಸಂಗ್ರಹವಾಗುವ ಮೊತ್ತವನ್ನು ಕೋವಿಡ್‌–19 ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದಾರೆ.

ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌ ಜೋಸ್‌ ಬಟ್ಲರ್‌ ಅವರು ವಿಶ್ವಕಪ್‌ ಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟು ₹ 61 ಲಕ್ಷ ಸಂಗ್ರಹಿಸಿದ್ದರು. ಅದನ್ನು ಕೋವಿಡ್–19‌ ಪರಿಹಾರ ನಿಧಿಗೆ ಕೊಟ್ಟಿದ್ದರು.

33 ವರ್ಷ ವಯಸ್ಸಿನ ಶಕೀಬ್‌, 56 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 39.41ರ ಸರಾಸರಿಯಲ್ಲಿ 3,862ರನ್‌ ಗಳಿಸಿದ್ದಾರೆ. 206 ಏಕದಿನ ಪಂದ್ಯಗಳಿಂದ6,323 ರನ್‌ ಹಾಗೂ 76 ಟಿ20 ಪಂದ್ಯಗಳಿಂದ 1,567 ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT