ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್: ಪಾಕಿಸ್ತಾನದ ಶಾನ್ ಮಸೂದ್‌ಗೆ ಶತಕ ಸಂಭ್ರಮ

ಮೊಹಮ್ಮದ್ ಅಬ್ಬಾಸ್‌ಗೆ ಎರಡು ವಿಕೆಟ್; ಸಂಕಷ್ಟದಲ್ಲಿ ಇಂಗ್ಲೆಂಡ್ ತಂಡ
Last Updated 6 ಆಗಸ್ಟ್ 2020, 18:55 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಆರಂಭಿಕ ಬ್ಯಾಟ್ಸ್‌ಮನ್ ಶಾನ್ ಮಸೂದ್ ತಾಳ್ಮೆಯ ಶತಕದ ಬಲದಿಂದ ಪಾಕಿಸ್ತಾನ ತಂಡವು ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ಗಳಿಸಿದೆ. ಇಂಗ್ಲೆಂಡ್ ಆರಂಭದಲ್ಲೇ ಕುಸಿತ ಕಂಡಿದ್ದು ಆತಂಕಕ್ಕೆ ಸಿಲುಕಿದೆ.

ಎಡಗೈ ಬ್ಯಾಟ್ಸ್‌ಮನ್ ಶಾನ್ (156; 319 ಎಸೆತ, 18 ಬೌಂಡರಿ, 2 ಸಿಕ್ಸರ್) ಟೆಸ್ಟ್‌ ಕ್ರಿಕೆಟ್‌ನಲ್ಲಿ ’ಶತಕದ ಹ್ಯಾಟ್ರಿಕ್‘ ಸಾಧನೆಯನ್ನೂ ಇಲ್ಲಿ ಮಾಡಿದರು. ಈ ಹಿಂದೆ ಶ್ರೀಲಂಕಾ ಮತ್ತು ಬಾಂಗ್ಲಾ ದೇಶ ವಿರುದ್ಧದ ಪಂದ್ಯಗಳಲ್ಲಿ ಶಾನ್ ಶತಕ ದಾಖಲಿಸಿದ್ದರು. ಅವರ ಸೊಗಸಾದ ಆಟದ ಬಲದಿಂದ ಎರಡನೇ ದಿನವಾದ ಗುರುವಾರ ಪಾಕ್ ತಂಡ 109.3 ಓವರ್‌ಗಳಲ್ಲಿ 326 ರನ್‌ ಗಳಿಸಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಆತಿಥೇಯರು ದಿನದಾಟದ ಅಂತ್ಯಕ್ಕೆ 28 ಓವರ್‌ಗಳಲ್ಲಿ 92 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾರೆ.

ಬುಧವಾರ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಪಾಕಿಸ್ತಾನ ಆರಂಭದಲ್ಲಿ ಆಘಾತ ಅನುಭವಿಸಿತ್ತು. ಶಾನ್ ಜೊತೆ ಸೇರಿದ್ದ ಬಾಬರ್ ಆಜಂ ವಿಕೆಟ್ ಪತನ ತಡೆದು ಇನಿಂಗ್ಸ್‌ಗೆ ಬಲ ತುಂಬಿದ್ದರು. ಆದರೆ, ಮಳೆ ಮತ್ತು ಮಂದಬೆಳಕಿನ ಕಾರಣ ದಿನದಾಟ ಪೂರ್ತಿಯಾಗಿರಲಿಲ್ಲ. ಪಾಕ್ ತಂಡವು ಎರಡು ವಿಕೆಟ್‌ಗಳಿಗೆ 139 ರನ್‌ ಗಳಿಸಿತ್ತು.

ಗುರುವಾರ ಬಾಬರ್ ಆಜಂ (69; 125 ಎ, 11 ಬೌಂ) ಬೇಗನೆ ಔಟಾದರು. ಅಸದ್ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಕ್ರಿಸ್ ವೋಕ್ಸ್‌, ಸ್ಟುವರ್ಟ್ ಬ್ರಾಡ್ ಮತ್ತು ಜೋಫ್ರಾ ಆರ್ಚರ್ ಅವರ ಬಿರುಗಾಳಿ ವೇಗದ ಮುಂದೆ ಬ್ಯಾಟ್ಸ್‌ಮನ್‌ಗಳು ‍ಪರದಾಡಿದರು. ಈ ಹೊತ್ತಿನಲ್ಲಿ ಕ್ರೀಸ್‌ಗೆ ಬಂದ ಶಾದಾಬ್ ಖಾನ್ (45; 76 ಎ, 3 ಬೌಂ) ಅವರು ಶಾನ್‌ ಜೊತೆಗೂಡಿ ಆರನೇ ವಿಕೆಟ್‌ಗೆ 105 ರನ್‌ ಸೇರಿಸಿದರು. ಈ ಜೊತೆಯಾಟ ಮುರಿದ ನಂತರ ಪಾಕಿಸ್ತಾನದ ಬಾಲಂಗೋಚಿಗಳು ಬೇಗನೇ ಮರಳಿದರು.

ಕಾಡಿದ ಶಹೀನ್, ಮೊಹಮ್ಮದ್: ಮೊದಲ ಇನಿಂಗ್ಸ್ ಆರಂಭಿಸಿರುವ ಆತಿಥೇಯರನ್ನು ವೇಗಿ ಮೊಹಮ್ಮದ್ ಅಬ್ಬಾಸ್ ಮತ್ತು ಎಡಗೈ ವೇಗಿ ಶಹೀನ್ ಅಫ್ರಿದಿ ಕಾಡಿದರು. ಇವರ ದಾಳಿಗೆ ನಲುಗಿದ ತಂಡ ದಿನದಾಟದ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡಿತು. 12 ರನ್ ಗಳಿಸುವಷ್ಟರಲ್ಲಿ ತಂಡ ರೋರಿ ಬರ್ನ್ಸ್, ಡಾಮ್ ಸಿಬ್ಲಿ ಮತ್ತು ಬೆನ್ ಸ್ಟೋಕ್ಸ್ ವಿಕೆಟ್ ಕಳೆದುಕೊಂಡಿತ್ತು. ನಾಯಕ ಜೋ ರೂಟ್ ಮತ್ತು ಒಲಿ ಪೋಪ್ ನಾಲ್ಕನೇ ವಿಕೆಟ್‌ಗೆ 50 ರನ್ ಸೇರಿಸಿದರು. ತಾಳ್ಮೆಯಿಂದ ಆಡುತ್ತಿದ್ದ ರೂಟ್ ವಿಕೆಟ್ ಲೆಗ್‌ಸ್ಪಿನ್ನರ್ ಯಾಸಿರ್ ಶಾ ಕಬಳಿಸಿದರು. ಪೋಪ್ (ಬ್ಯಾಟಿಂಗ್ 46; 67 ಎ, 6 ಬೌಂ) ಜೊತೆಯಾದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಐದನೇ ವಿಕೆಟ್‌ಗೆ 30 ರನ್‌ ಸೇರಿಸಿ ದಿನದ ಕೊನೆಯಲ್ಲಿ ಆಸರೆಯಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಾಕಿಸ್ತಾನ: 109.3 ಓವರ್‌ಗಳಲ್ಲಿ 326 (ಶಾನ್ ಮಸೂದ್ 156, ಬಾಬರ್‌ ಆಜಂ 69, ಶಾದಾಬ್ ಖಾನ್ 45; ಜೇಮ್ಸ್ ಆ್ಯಂಡರ್ಸನ್ 63ಕ್ಕೆ1, ಸ್ಟುವರ್ಟ್ ಬ್ರಾಡ್ 54ಕ್ಕೆ3, ಕ್ರಿಸ್ ವೋಕ್ಸ್‌ 43ಕ್ಕೆ2, ಜೋಫ್ರಾ ಆರ್ಚರ್ 59ಕ್ಕೆ3); ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 28 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 92 (ರೋರಿ ಬರ್ನ್ಸ್ 4, ಡಾಮ್ ಸಿಬ್ಲಿ 8, ಜೋ ರೂಟ್ 14, ಒಲಿ ಪೋಪ್ ಬ್ಯಾಟಿಂಗ್ 46, ಜೋಸ್ ಬಟ್ಲರ್ ಬ್ಯಾಟಿಂಗ್ 15; ಶಹೀನ್ ಶಾ ಅಫ್ರಿದಿ 12ಕ್ಕೆ1, ಮೊಹಮ್ಮದ್ ಅಬ್ಬಾಸ್ 24ಕ್ಕೆ 2, ಯಾಸಿರ್ ಶಾ 36ಕ್ಕೆ1) ಎರಡನೇ ದಿನದಾಟದ ಅಂತ್ಯಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT