ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡದ ಗೆಲುವಿಗಾಗಿ ರಕ್ತ ಸುರಿಸಿದ ವಾಟ್ಸನ್‌!

Last Updated 14 ಮೇ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಲ್‌ರೌಂಡರ್‌ ಶೇನ್‌ ವಾಟ್ಸನ್‌, ಮುಂಬೈ ಇಂಡಿಯನ್ಸ್‌ ಎದುರಿನ ಐಪಿಎಲ್‌ ಫೈನಲ್‌ ಪಂದ್ಯದ ವೇಳೆ ಗಾಯದ ನಡುವೆಯೂ ಛಲದಿಂದ ಹೋರಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ವಾಟ್ಸನ್‌ ಅವರ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಹರಭಜನ್‌ ಸಿಂಗ್‌, ‘ನೀವು ತಂಡದ ಗೆಲುವಿಗಾಗಿ ರಕ್ತವನ್ನೇ ಸುರಿಸಿದ್ದೀರಿ. ನಿಮ್ಮ ತ್ಯಾಗ ಮತ್ತು ಹೋರಾಟದ ಗುಣ ಎಲ್ಲರಿಗೂ ಸ್ಫೂರ್ತಿ. ನೀವು ನಿಜವಾಗಿಯೂ ಕ್ರಿಕೆಟ್‌ ಲೋಕದ ದಂತಕಥೆ’ ಎಂದು ಬರೆದಿದ್ದಾರೆ.

ಆಸ್ಟ್ರೇಲಿಯಾದ ವಾಟ್ಸನ್‌, ಫೈನಲ್‌ನಲ್ಲಿ 59 ಎಸೆತಗಳಲ್ಲಿ 80ರನ್‌ ಗಳಿಸಿ ಚೆನ್ನೈ ತಂಡವನ್ನು ಗೆಲುವಿನ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದ್ದರು. ಜಯಕ್ಕೆ ಮೂರು ಎಸೆತಗಳಲ್ಲಿ 5ರನ್‌ಗಳು ಬೇಕಿದ್ದಾಗ ರನ್‌ಔಟ್‌ ಆಗಿದ್ದರು. ಹೀಗಾಗಿ ಮಹೇಂದ್ರ ಸಿಂಗ್‌ ಧೋನಿ ಬಳಗದ ದಾಖಲೆಯ ನಾಲ್ಕನೇ ಪ್ರಶಸ್ತಿಯ ಕನಸು ಭಗ್ನಗೊಂಡಿತ್ತು.

‘ರನ್‌ಔಟ್‌ನಿಂದ ಪಾರಾಗಲು ಡೈವ್‌ ಮಾಡಿದ್ದ ವೇಳೆ ವಾಟ್ಸನ್‌ ಅವರ ಎಡ ಮಂಡಿಗೆ ಬಲವಾದ ಪೆಟ್ಟು ಬಿದ್ದಿತ್ತು. ರಕ್ತ ಸುರಿಯುತ್ತಿತ್ತು. ಹೀಗಿದ್ದರೂ ಅವರು ಈ ವಿಚಾರವನ್ನು ಯಾರಿಗೂ ತಿಳಿಸಲಿಲ್ಲ. ಪ್ರಥಮ ಚಿಕಿತ್ಸೆಯನ್ನೂ ಪಡೆಯಲಿಲ್ಲ. ತಂಡಕ್ಕೆ ಗೆಲುವು ತಂದುಕೊಡಬೇಕು ಎಂಬ ಉದ್ದೇಶದಿಂದ ನೋವನ್ನು ಸಹಿಸಿಕೊಂಡು ಅಂತಿಮ ಕ್ಷಣದವರೆಗೂ ಹೋರಾಡಿದ್ದರು’ ಎಂದು ಹರಭಜನ್‌ ತಿಳಿಸಿದ್ದಾರೆ.

‘ಗೆಳೆಯರೇ ವಾಟ್ಸನ್‌ ಅವರ ಎಡಗಾಲಿನ ಟ್ರ್ಯಾಕ್‌ ಪ್ಯಾಂಟ್‌ (ಮಂಡಿಯ ಮೇಲ್ಭಾಗ) ರಕ್ತದಿಂದ ಒದ್ದೆಯಾಗಿರುವುದನ್ನು ನೀವೆಲ್ಲಾ ಈ ಚಿತ್ರದಲ್ಲಿ ಗಮನಿಸಿರಬಹುದು. ಪಂದ್ಯದ ನಂತರ ಗಾಯಗೊಂಡ ಭಾಗಕ್ಕೆ ಆರು ಹೊಲಿಗೆಗಳನ್ನು ಹಾಕಲಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಚೆನ್ನೈ ತಂಡ ಫೈನಲ್‌ನಲ್ಲಿ ಸೋತಾಗಲೂ ಅಷ್ಟು ಬೇಸರವಾಗಿರಲಿಲ್ಲ. ಆದರೆ ವಾಟ್ಸನ್‌ ಅವರ ಚಿತ್ರ ನೋಡಿ ದುಃಖ ತಡೆಯಲಾಗಲಿಲ್ಲ. ಕಣ್ಣುಗಳು ತುಂಬಿಬಂದವು. ವಾಟ್ಸನ್‌ ಅವರ ಹೋರಾಟ ಗುಣ ಪದಗಳಿಗೆ ನಿಲುಕದ್ದು. ಅವರು ಬದ್ಧತೆಯ ಪ್ರತೀಕ. ನಿಜವಾದ ಚಾಂಪಿಯನ್‌ ’ ಎಂದು ಅಭಿಮಾನಿಯೊಬ್ಬ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾನೆ.

‘ವಾಟ್ಸನ್‌ ಅವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಕ್ರಿಕೆಟ್‌ ಬಗ್ಗೆ ಆಸ್ಟ್ರೇಲಿಯಾದ ಆಟಗಾರ ಹೊಂದಿರುವ ಬದ್ಧತೆ ಪ್ರಶ್ನಾತೀತ. ಯುವ ಪೀಳಿಗೆಗೆ ಅವರು ಮಾದರಿ’ ಎಂದು ಸಂಜಯ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

‘ವಾಟ್ಸನ್‌, ನೀವು ಅಲ್ಟಿಮೇಟ್‌ ಹೀರೊ. ಚೆನ್ನೈ ತಂಡದ ಸದಸ್ಯನಾಗಿರುವುದು ನಮಗೆಲ್ಲಾ ಹೆಮ್ಮೆ. ನಿಮಗೆ ಒಳ್ಳೆಯದಾಗಲಿ’ ಎಂದು ಕಸ್ತೂರಿ ಶಂಕರ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

37 ವರ್ಷದ ವಾಟ್ಸನ್‌ ಅವರು ಈಗಾಗಲೇ ಆಸ್ಟ್ರೇಲಿಯಾದ ಬಿಗ್‌ಬ್ಯಾಷ್‌ ಟ್ವೆಂಟಿ–20 ಲೀಗ್‌ಗೆ ವಿದಾಯ ಹೇಳಿದ್ದಾರೆ. 13ನೇ ಆವೃತ್ತಿಯ ಐಪಿಎಲ್‌ನಲ್ಲೂ ಅವರು ಆಡುವುದು ಅನುಮಾನ ಎನಿಸಿದೆ. ಮುಂದಿನ ಆವೃತ್ತಿಯಲ್ಲಿ ಬ್ಯಾಟಿಂಗ್‌ ವಿಭಾಗದಲ್ಲಿ ಬದಲಾವಣೆ ಮಾಡಬೇಕಾಗಬಹುದು ಎಂದು ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಸೋಮವಾರ ಹೇಳಿರುವುದು ಇದಕ್ಕೆ ಪೂರಕವೆಂಬಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT