ಬುಧವಾರ, ಏಪ್ರಿಲ್ 1, 2020
19 °C

ಭಾರತ–ಪಾಕ್ ಕಬಡ್ಡಿ ಆಡಬಹುದು ಎಂದಾದಮೇಲೆ, ಕ್ರಿಕೆಟ್‌ ಏಕೆ ಸಾಧ್ಯವಿಲ್ಲ: ಅಖ್ತರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯನ್ನು ಆಡಬೇಕು ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಬ್‌ ಅಖ್ತರ್‌ ಹೇಳಿದ್ದಾರೆ. ಬೇರೆಲ್ಲ ಕ್ರೀಡೆಗಳನ್ನು ದ್ವಿಪಕ್ಷೀಯವಾಗಿ ಆಡಬಹುದು ಎಂದಾದ ಮೇಲೆ ಕ್ರಿಕೆಟ್ ಮಾತ್ರ ಏಕೆ ಸಾಧ್ಯವಿಲ್ಲ ಎಂದೂ ಪ್ರಶ್ನಿಸಿದ್ದಾರೆ.

ಈ ಕುರಿತು ತಮ್ಮ ಯುಟ್ಯೂಬ್‌ ಚಾನಲ್‌ನಲ್ಲಿ ಮತನಾಡಿರುವ ಅವರು, ಭಾರತದ ಕಬಡ್ಡಿ ತಂಡ ಪಾಕಿಸ್ತಾನಕ್ಕೆ ಬರಬಹುದು ಎಂದಮೇಲೆ, ಟೆನಿಸ್‌ ತಂಡ ತಟಸ್ಥ ಸ್ಥಳಗಳಲ್ಲಿ ಡೇವಿಸ್‌ ಕಪ್‌ನಲ್ಲಿ ಪಾಲ್ಗೊಳಬಹುದಾದರೆ, ಉಭಯ ದೇಶಗಳ ತಂಡಗಳು ಕ್ರಿಕೆಟ್‌ ಆಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ‘ಪಾಕಿಸ್ತಾನ ಪ್ರವಾಸಿಗಳಿಗೆ ಅತ್ಯಂತ ಸುರಕ್ಷಿತ ತಾಣವಾಗಿದೆ. ಭಾರತ ಕಬಡ್ಡಿ ತಂಡವು ಇಲ್ಲಿ ಅಪಾರ ಪ್ರೀತಿ ಗಳಿಸಿಕೊಂಡಿದೆ. ಬಾಂಗ್ಲಾದೇಶ ತಂಡ ಟೆಸ್ಟ್‌ ಆಡಲು ಬಂದಿದೆ. ಆದರೆ, ಈಗಲೂ ಭಾರತಕ್ಕೆ ಅನುಮಾನಗಳಿದ್ದರೆ ತಟಸ್ಥ ಸ್ಥಳವನ್ನು ಸಲಹೆ ನೀಡಬಹುದು’ ಎಂದು ಹೇಳಿದ್ದಾರೆ.

‘ಒಂದುವೇಳೆ ನೀವು ಸಂಬಂಧಗಳನ್ನು ಕಡಿದು ಹಾಕಲು ಬಯಸುವುದಾದರೆ, ಕ್ರಿಕೆಟ್‌ ಅನ್ನು ಮಾತ್ರವೇ ಏಕೆ? ವ್ಯಾಪಾರವನ್ನೂ ನಿಲ್ಲಿಸಿ. ಕಬಡ್ಡಿಯನ್ನೂ ನಿಲ್ಲಿಸಿ. ಕ್ರಿಕೆಟ್‌ ವಿಚಾರದಲ್ಲಿ ಮಾತ್ರವೇ ರಾಜಕಾರಣ ಮಾಡುವುದಾದರೆ ನಿಜವಾಗಿಯೂ ಬೇಸರ ಮೂಡಿಸುತ್ತದೆ. ನಾವು ಈರುಳ್ಳಿ, ಟೊಮೊಟೊವನ್ನು ತಿನ್ನುತ್ತೇವೆ. ಸಂತೋಷವನ್ನೂ ಹಂಚಿಕೊಳ್ಳುತ್ತೇವೆ ಎಂದಾದಮೇಲೆ ಕ್ರಿಕೆಟ್‌ ಅಡಲು ಏಕೆ ಸಾಧ್ಯವಿಲ್ಲ’ ಎಂದೂ ಕೇಳಿದ್ದಾರೆ.

‘ಪಾಕಿಸ್ತಾನವು ಆತಿಥ್ಯವಹಿಸಬಲ್ಲ ವಿಶ್ವದ ಅತ್ಯುತ್ತಮ ರಾಷ್ಟ್ರವಾಗಿದೆ. ಅದು ಮೊದಲು ಗೊತ್ತಾದದ್ದೂ ಭಾರತಕ್ಕೆ. ಬೇಕಿದ್ದರೆ ಸೌರವ್‌ ಗಂಗೂಲಿ, ವಿರೇಂದ್ರ ಸೆಹ್ವಾಗ್‌, ಸಚಿನ್‌ ತೆಂಡೂಲ್ಕರ್‌ ಅವರನ್ನು ಕೇಳಿ. ನಾವು ಅವರನ್ನು ಎಲ್ಲರಂತೆಯೇ ಪ್ರೀತಿಸಿದ್ದೇವೆ. ನಮ್ಮ ನಡುವಿನ ಅಂತರವು ಕ್ರಿಕೆಟ್‌ ಮೇಲೆ ಪರಿಣಾಮ ಉಂಟುಮಾಡಿಲ್ಲ. ಖಂಡಿತವಾಗಿಯೂ ಶೀಘ್ರದಲ್ಲೇ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡಬಹುದು. ಉಭಯ ದೇಶಗಳ ನಡುವಿನ ನಿಕಟ ಪೈಪೋಟಿಯನ್ನು ಕಾಯ್ದುಕೊಳ್ಳಲು ಇದು ಅಗತ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಅವರೂ ದ್ವಿಪಕ್ಷೀಯ ಸರಣಿ ನಡೆಯಲಿ ಎಂದಿದ್ದರು. ಅದಾದ ಬಳಿಕ ಅಖ್ತರ್‌ ಈ ರೀತಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು 2013ರಿಂದ ಈಚೆಗೆ ದ್ವಿಪಕ್ಷೀಯ ಸರಣಿಯಲ್ಲಿ ಆಡಿಲ್ಲ. 2008ರಲ್ಲಿ ಕೊನೆಯ ಸಲ ಟೆಸ್ಟ್‌ ಸರಣಿಯಲ್ಲಿ ಆಡಿದ್ದವು.

ಪಾಕಿಸ್ತಾನದಲ್ಲಿ ಇತ್ತೀಚೆಗೆ ಮುಕ್ತಾಯವಾದ ಸರ್ಕಲ್‌ ಸ್ಟೈಲ್‌ ಕಬಡ್ಡಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ತಂಡವು ಭಾರತದ ‘ಅಧಿಕೃತ’ ತಂಡವಲ್ಲ ಎಂದು ಭಾರತ ಕ್ರೀಡಾ ಒಲಿಂಪಿಕ್‌ ಫೆಡರೇಷನ್‌ ಸ್ಪಷ್ಟನೆ ನೀಡಿತ್ತು. ಆದಾಗ್ಯೂ, ಅದನ್ನೇ ಭಾರತದ ತಂಡ ಎಂಬರ್ಥದಲ್ಲಿ ಅಖ್ತರ್‌ ಹೇಳಿದ್ದಾರೆ. ಈ ಟೂರ್ನಿಯ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ್ದ ಪಾಕಿಸ್ತಾನ ಮೊದಲ ಸಲ ಚಾಂಪಿಯನ್‌ ಆಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು