ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌: ಅಗ್ರಸ್ಥಾನ ಕಳೆದುಕೊಂಡ ಗಿಲ್‌

Published 20 ಡಿಸೆಂಬರ್ 2023, 15:17 IST
Last Updated 20 ಡಿಸೆಂಬರ್ 2023, 15:17 IST
ಅಕ್ಷರ ಗಾತ್ರ

ದುಬೈ: ಭಾರತದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರು ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಜಂ ಮತ್ತೆ ನಂಬರ್‌ 1 ಸ್ಥಾನಕ್ಕೆ ಏರಿದ್ದಾರೆ.

ಐಸಿಸಿ ಬುಧವಾರ ಬಿಡುಗಡೆ ಮಾಡಿದ ರ‍್ಯಾಂಕಿಂಗ್‌ನಲ್ಲಿ ಭಾರತದ ತಲಾ ಮೂವರು ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಅಗ್ರ 10ರಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಬಾಬರ್‌ ಅವರನ್ನು ಹಿಂದಿಕ್ಕಿ ಕಳೆದ ತಿಂಗಳು ಅಗ್ರಸ್ಥಾನಕ್ಕೆ ಏರಿದ್ದ ಗಿಲ್‌, ನಂತರ ಏಕದಿನ ಪಂದ್ಯಗಳನ್ನು ಆಡಿಲ್ಲ.

ಮೊದಲೆರಡು ಸ್ಥಾನದಲ್ಲಿರುವ ಬಾಬರ್‌ ಮತ್ತು ಗಿಲ್‌ ಕ್ರಮವಾಗಿ 824 ಹಾಗೂ 810 ಪಾಯಿಂಟ್ಸ್‌ ಹೊಂದಿದ್ದಾರೆ. ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಮೂರನೇ, ನಾಯಕ ರೋಹಿತ್‌ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶ್ರೇಯಸ್‌ ಅಯ್ಯರ್‌ ಮತ್ತು ಕೆ.ಎಲ್‌. ರಾಹುಲ್‌ ಕ್ರಮವಾಗಿ 12 ಮತ್ತು 16ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬೌಲರ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಆಸ್ಟ್ರೇಲಿಯದ ವೇಗಿ ಜೋಷ್ ಹ್ಯಾಜಲ್‌ವುಡ್‌ ನಂತರದ ಸ್ಥಾನದಲ್ಲಿದ್ದಾರೆ. ಭಾರತದ ಮೊಹಮ್ಮದ್‌ ಸಿರಾಜ್‌ (3ನೇ), ಜಸ್‌ಪ್ರೀತ್ ಬೂಮ್ರಾ (5ನೇ), ಕುಲದೀಪ್‌ ಯಾದವ್‌ (8ನೇ) ಅವರು ಅಗ್ರ 10ರಲ್ಲಿ ಕಾಣಿಸಿಕೊಂಡರೆ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜ ಕ್ರಮವಾಗಿ 11ನೇ ಮತ್ತು 22ನೇ ಸ್ಥಾನದಲ್ಲಿದ್ದಾರೆ.

ಆಲ್‌ರೌಂಡರ್‌ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ ಅಗ್ರಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜ (12ನೇ), ಹಾರ್ದಿಕ್‌ ಪಾಂಡ್ಯ (17) ಮಾತ್ರ ಅಗ್ರ 20ರಲ್ಲಿ ಸ್ಥಾನ ಪಡೆದಿದ್ದಾರೆ. 

ಅಗ್ರಸ್ಥಾನದಲ್ಲಿ ಸೂರ್ಯ

ಟಿ20 ಮಾದರಿಯ ಬ್ಯಾಟರ್‌ಗಳಲ್ಲಿ ಭಾರತದ ಸೂರ್ಯಕುಮಾರ್‌ ಯಾದವ್‌ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಇಂಗ್ಲೆಂಡ್‌ನ ಆದಿಲ್ ರಶೀದ್ ಅಗ್ರಸ್ಥಾನಕ್ಕೆ ಏರಿದ್ದು, ಗ್ರೇಮ್‌ ಸ್ಟಾನ್‌ ಬಳಿಕ ಆ ಸ್ಥಾನ ಪಡೆದ ಎರಡನೇ ಆಂಗ್ಲ ಬೌಲರ್‌ ಆಗಿದ್ದಾರೆ. ಅಫ್ಗಾನಿಸ್ತಾನದ ರಶೀದ್‌ ಖಾನ್‌ ಮತ್ತು ಭಾರತದ ರವಿ ಬಿಷ್ಣೋಯಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡ್‌ನಲ್ಲಿ ಶಕೀಬ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ ಬ್ಯಾಟರ್‌ಗಳಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಜೋ ರೂಟ್ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ನಂತರದ ಸ್ಥಾನದಲ್ಲಿದ್ದಾರೆ. ರೋಹಿತ್‌ ಶರ್ಮಾ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಶಕೀಬ್ ಮತ್ತು ಜಡೇಜ ನಂತರದ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜ, ಅಶ್ವಿನ್ ಮೊದಲೆರಡು ಸ್ಥಾನದಲ್ಲಿದ್ದರೆ, ಅಕ್ಷರ್ ಪಟೇಲ್ ಐದನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT