ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಸರಣಿಯಲ್ಲಿ ಮಳೆಯಿಂದ ಒದ್ದೆಯಾಗುತ್ತಿದ್ದ ಕ್ರೀಡಾಂಗಣವನ್ನು ನಿರ್ವಹಣೆ ಮಾಡುವಲ್ಲಿ ದಣಿವರಿಯದೆ ಕೆಲಸ ಮಾಡಿದ ಶ್ರೀಲಂಕಾದ ಕ್ರೀಡಾಂಗಣ ಸಿಬ್ಬಂದಿಗೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಫೈನಲ್ ಪಂದ್ಯದಲ್ಲಿ ತಮಗೆ ನೀಡಲಾದ ಪಂದ್ಯಶ್ರೇಷ್ಠ ನಗದು ಬಹುಮಾನ 5,000 ಡಾಲರ್(₹4.15 ಲಕ್ಷ) ಅನ್ನು ನೀಡಿದ್ದಾರೆ.
‘ಈ ನಗದು ಬಹುಮಾನವು ಮೈದಾನ ಸಿಬ್ಬಂದಿಗೆ ಸೇರುತ್ತದೆ. ಇದಕ್ಕೆ ಅವರು ಸಂಪೂರ್ಣವಾಗಿ ಅರ್ಹರು. ಅವರಿಲ್ಲದೆ ಈ ಪಂದ್ಯಾವಳಿಯು ಸಾಧ್ಯವಾಗುತ್ತಿರಲಿಲ್ಲ’ಎಂದು ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್‌ಗಳ ಜಯ ಸಾಧಿಸಿದ ನಂತರ ಪ್ರಶಸ್ತಿ ಸಮಾರಂಭದಲ್ಲಿ ಸಿರಾಜ್ ಹೇಳಿದರು.
ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಸಿರಾಜ್, ನಾಲ್ಕನೇ ಓವರ್‌ನಲ್ಲಿ ಮೇಡನ್ ಜೊತೆಗೆ 4 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಸೋಲನ್ನು ಖಚಿತಪಡಿಸಿದ್ದರು. 21 ರನ್‌ಗೆ 6 ವಿಕೆಟ್ ಉರುಳಿಸಿದ ಅವರು ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ಇದರ ಪರಿಣಾಮ, ಶ್ರೀಲಂಕಾ 50 ರನ್‌ಗೆ ಆಲೌಟ್ ಆದರೆ, ಭಾರತ ಈ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿತು.
ಇದಕ್ಕೂ ಮುನ್ನ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಅವರು ಕ್ಯಾಂಡಿ ಮತ್ತು ಕೊಲಂಬೊದಲ್ಲಿನ ಮೈದಾನದ ನಿರ್ವಹಣೆಯಲ್ಲಿ ಶ್ರಮ ವಹಿಸಿದ್ದ ಸಿಬ್ಬಂದಿಗೆ 50,000 ಡಾಲರ್(₹42 ಲಕ್ಷ) ನಗದು ಬಹುಮಾನವನ್ನು ಘೋಷಿಸಿದ್ದರು.
ಏಷ್ಯಾಕಪ್ ಟೂರ್ನಿಯುದ್ದಕ್ಕೂ ಮಳೆ ಇನ್ನಿಲ್ಲದಂತೆ ಕಾಡಿದೆ. ಕೆಲ ಪಂದ್ಯಗಳಲ್ಲಿ ಡಕ್ವರ್ತ್ ಲೂಯಿಸ್ ನಿಯಮದಡಿ ಫಲಿತಾಂಶ ಬಂದರೆ, ಮತ್ತೆ ಕೆಲವು ಪಂದ್ಯಗಳು ರದ್ದಾಗಿವೆ. ಇಂದು ನಡೆದ ಫೈನಲ್ ಪಂದ್ಯ ಕೂಡ ಔಟ್‌ಫೀಲ್ಡ್‌ನಲ್ಲಿ ತೇವ ಇದ್ದ ಕಾರಣ ತಡವಾಗಿ ಆರಂಭವಾಯಿತು.