ಶುಕ್ರವಾರ, ಜನವರಿ 24, 2020
21 °C
ರಾಯಲ್‌ ಚಾಲೆಂಜರ್ಸ್ ಬೆಂಗಳೂರಿಗೆ ಹೊಸ ರೂಪ

ವಿರಾಟ್‌ ಕೊಹ್ಲಿ ಸಂತಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಯಲ್ ಚಾಲೆಂಜರ್ಸ್‌ ತಂಡಕ್ಕೆ ಹೊಸ ಆಟಗಾರರ ಆಯ್ಕೆಯ ತೃಪ್ತಿಕರವಾಗಿದೆ. ಹೊಸ ತಂಡದ ಸಂಯೋಜನೆಯು ಉತ್ತುಮವಾಗಿದೆ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಕೋಲ್ಕತ್ತದಲ್ಲಿ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ತಂಡವು ಎಂಟು ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿತ್ತು. ಅದರಲ್ಲಿ ಆಸ್ಟ್ರೇಲಿಯಾದ ಆ್ಯರನ್‌ ಫಿಂಚ್, ವೇಗಿ ಕೇನ್ ರಿಚರ್ಡ್ಸನ್, ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್, ಕ್ರಿಸ್ ಮಾರಿಸ್‌ ಮತ್ತು ಶ್ರೀಲಂಕಾದ ಇಸುರು ಉಡಾನ ಅವರು ಅದರಲ್ಲಿ ಪ್ರಮುಖರಾಗಿದ್ದಾರೆ.

‘ಹೊಸ ಋತುವಿನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಮೂಡಿದೆ. ಈ  ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ನಮ್ಮ ತಂಡದ ಆಡಳಿತದಲ್ಲಿ ಬಹಳಷ್ಟು ಚರ್ಚೆ, ವಿಚಾರ ವಿನಿಮಯ ನಡೆದಿದೆ. ಸಮತೋಲನದ ತಂಡವನ್ನು ರೂಪಿಸಲು ಬಹಳಷ್ಟು ಪ್ರಯೋಗಗಳನ್ನು ಮಾಡಲಾಗಿತ್ತು. ಅಂತಿಮವಾಗಿ ಒಳ್ಳೆಯ ತಂಡ ನಮ್ಮ ಮುಂದಿದೆ. ಇದು ಶುಭಾರಂಭ’ ಎಂದು ಕೊಹ್ಲಿ ಹೇಳಿದರು.

‘ಲೀಗ್‌ನಲ್ಲಿ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಶ್ರೇಷ್ಠ ಆಟವನ್ನು ಆಡಿದರೆ ತಂಡಕ್ಕೆ ಲಾಭ ಖಚಿತ. ಇದು ಪ್ರತಿಯೊಬ್ಬರ ಹೊಣೆ. ಈ ಜವಾಬ್ದಾರಿಯನ್ನು ಅರಿತಿರುವವರು ತಂಡದಲ್ಲಿದ್ದಾರೆ. ಪ್ಲೇ ಬೋಲ್ಡ್‌ ಎಂಬುದು ನಮ್ಮ ಧ್ಯೇಯ ವಾಕ್ಯ’ ಎಂದು ಕೊಹ್ಲಿ ಪುನರುಚ್ಚರಿಸಿದರು.

ತಂಡದ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ಆರ್‌ಸಿಬಿಯ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಮೈಕ್ ಹೆಸನ್, ‘ತಂಡದಲ್ಲಿ ಈಗಾಗಲೇ ಉಳಿಸಿಕೊಂಡಿರುವ ಆಟಗಾರರೊಂದಿಗೆ ಉತ್ತಮ ಹೊಂದಾಣಿಕೆ ಮಾಡಿಕೊಂಡು ಆಡುವ ಸ್ವಭಾವದ ಆಟಗಾರರನ್ನು  ಹುಡುಕುವ ಸವಾಲು ನಮ್ಮ ಮುಂದಿತ್ತು. ನಮ್ಮ ಬಜೆಟ್‌ಗೂ ಸರಿಹೊಂದುವಂತಹ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಅಷ್ಠೇ ಕ್ಲಿಷ್ಟವಾಗಿತ್ತು. ಕೊನೆಯದಾಗಿ ಎಲ್ಲವೂ ಸುಖಾಂತ್ಯವಾಗಿದೆ’
ಎಂದರು.

‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಗಳಿಸಿರುವ ವಿದೇಶಿ ಆಟಗಾರರ ಮೇಲೆ ನಮಗೆ ಕಣ್ಣಿತ್ತು. ಅವರು ತಂಡದಲ್ಲಿರುವುದರಿಂದ ಉಳಿದ ಆಟಗಾರರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಇದು ಇಡೀ ತಂಡದಲ್ಲಿ ಹೊಸ ಶಕ್ತಿ ತುಂಬುತ್ತದೆ. ಇದರಿಂದ ಫಲಿತಾಂಶವು ಉತ್ತಮವಾಗಿ ಹೊರಹೊಮ್ಮುತ್ತದೆ’ ಎಂದರು.

‘ಕ್ರಿಸ್ ಮಾರಿಸ್ ಮತ್ತು ಇಸುರು ಉಡಾನ ಅವರಿಬ್ಬರೂ ಆಲ್‌ರೌಂಡರ್‌ಗಳಾಗಿದ್ದಾರೆ. ಇನಿಂಗ್ಸ್‌ನಲ್ಲಿ ಯಾವುದೇ ಸಂದರ್ಭದಲ್ಲಿಯೂ ತಮ್ಮ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗುವ ಸಮರ್ಥರು ಅವರಾಗಿದ್ದಾರೆ. ಸ್ಥಳೀಯ ಪ್ರತಿಭೆ ಪವನ್ ದೇಶಪಾಂಡೆ ಕೂಡ ಮಧ್ಯಮಕ್ರಮಾಂಕದಲ್ಲಿ ಬಿರುಸಿನ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರಿಂದಾಗಿ ತಂಡದ ಆಲ್‌ರೌಂಡ್ ಶಕ್ತಿ ಹೆಚ್ಚಾಗಿದೆ’ ಎಂದು ಮೈಕ್ ಅಭಿಪ್ರಾಯಪಟ್ಟಿದ್ದಾರೆ.

‘ತಂಡದ ಸಂಯೋಜನೆಯು ಸಂತಸ ತಂದಿದೆ.  ಟ್ವೆಂಟಿ–20 ಮಾದರಿಯ ಸಮರ್ಥ ಆಟಗಾರರು ತಂಡದಲ್ಲಿದ್ದಾರೆ. ಮೈಕ್, ಸೈಮನ್ ಅವರ ಕೋಚಿಂಗ್ ಸಿಬ್ಬಂದಿಯ ಬೆಂಬಲವೂ ಇದೆ. ಮುಂದಿನ ಟೂರ್ನಿಯಲ್ಲಿ ನಮ್ಮ ತಂಡದ ಸಾಧನೆ ಗಮನ ಸೆಳೆಯಲಿದೆ’ ಎಂದು ಆರ್‌ಸಿಬಿ ಮುಖ್ಯಸ್ಥ ಸಂಜೀವ್ ಚೂರಿವಾಲಾ ಹೇಳಿದರು.

ಆರ್‌ಸಿಬಿಯು ಇದುವರೆಗೆ ಐಪಿಎಲ್‌ನಲ್ಲಿ ಪ್ರಶಸ್ತಿ ಗೆದ್ದಿಲ್ಲ. 2009 ಮತ್ತು 2011ರಲ್ಲಿ ರನ್ನರ್ಸ್ ಅಪ್ ಆಗಿತ್ತು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು