ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಿತ್‌ ಅನುಪಸ್ಥಿತಿ; ಇಂಗ್ಲೆಂಡ್‌ಗೆ ಬ್ಯಾಟಿಂಗ್‌ ಸಮಸ್ಯೆ

ಮೂರನೇ ಟೆಸ್ಟ್‌ ಇಂದಿನಿಂದ
Last Updated 21 ಆಗಸ್ಟ್ 2019, 18:30 IST
ಅಕ್ಷರ ಗಾತ್ರ

ಲೀಡ್ಸ್‌: ರನ್‌ ಹೊಳೆ ಹರಿಸುತ್ತಿದ್ದ ಆಸ್ಟ್ರೇಲಿಯಾದ ಅನುಭವಿ ಆಟಗಾರ ಸ್ಟೀವ್‌ ಸ್ಮಿತ್‌ ಗಾಯಾಳಾಗಿ ಆಡಲು ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿ, ಇಂಗ್ಲೆಂಡ್‌ ತಂಡಕ್ಕೆ ಹೆಡಿಂಗ್ಲೆಯಲ್ಲಿ ಗುರುವಾರ ಆರಂಭವಾಗುವ ಆ್ಯಷಸ್‌ ಸರಣಿಯ ಮೂರನೇ ಟೆಸ್ಟ್‌ ಗೆದ್ದು ಸಮಬಲ ಮಾಡಿಕೊಳ್ಳಲು ಸುವರ್ಣಾವಕಾಶ ಒದಗಿಸಿದೆ.

ಆದರೆ ಅದಕ್ಕಾಗಿ, ಇಂಗ್ಲೆಂಡ್‌ ತಂಡದವರು ತಮ್ಮದೇ ಬ್ಯಾಟಿಂಗ್‌ ವಿಭಾಗದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಸರಣಿಯಲ್ಲಿ 126 ರನ್‌ಗಳ ಸರಾಸರಿ ಹೊಂದಿದ್ದ ಸ್ಮಿತ್‌, ಎರಡನೇ ಟೆಸ್ಟ್‌ನಲ್ಲಿ ಜೋಫ್ರಾ ಆರ್ಚರ್‌ ಬೌನ್ಸರ್‌ನಲ್ಲಿ ಕುತ್ತಿಗೆಗೆ ಏಟು ತಿಂದಿದ್ದರು. ಅವರ ಬದಲು ‘ಬದಲಿ ಆಟಗಾರ’ ಮಾರ್ನಸ್‌ ಲಾಬುಚಾನ್‌ ಎರಡನೇ ಇನಿಂಗ್ಸ್‌ನಲ್ಲಿ ಆಡಿದ್ದರು. ಸ್ಮಿತ್‌ ಪರಾಕ್ರಮದಿಂದ ಆಸ್ಟ್ರೇಲಿಯಾ ಮೊದಲ ಟೆಸ್ಟ್‌ ಗೆದ್ದುಕೊಂಡು 1–0 ಮುನ್ನಡೆ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ, ‘ಪೆಟ್ಟಿನ ಪರೀಕ್ಷೆ’ ಬಳಿಕ ಸ್ಮಿತ್‌ ಕ್ರೀಸಿಗೆ ಮರಳಿ ಆಟ ಮುಂದುವರಿಸಿದ್ದರು. ಆದರೆ ಅವರ ನೋವಿನ ಸ್ಥಿತಿ ನಂತರ ಬಿಗಡಾಯಿಸಿತು. ಅವರು ಆಡಲು ಬೇಕಾದ ದೈಹಿಕ ಕ್ಷಮತೆ ಹೊಂದಿಲ್ಲ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಿಸಿತು.

ಆತಿಥೇಯ ಬೌಲರ್‌ಗಳಿಗೆ ತಲೆನೋವಾಗಿದ್ದ ಸ್ಮಿತ್‌ ಈಗ ಆಡದಿರುವುದು ಇಂಗ್ಲೆಂಡ್‌ ತಂಡಕ್ಕೆ ಮಾನಸಿಕ ಮೇಲುಗೈ ಒದಗಿಸಿದೆ. ಸ್ಮಿತ್‌ ಎರಡು ಶತಕ, ಒಂದು ಅರ್ಧಶತಕ (92) ಹೊಡೆದಿದ್ದಾರೆ. ಅವರನ್ನು ಬಿಟ್ಟರೆ ಈ ಸರಣಿಯಲ್ಲಿ ಮ್ಯಾಥ್ಯೂ ವೇಡ್‌ ಮಾತ್ರ ಶತಕ ಬಾರಿಸಿದ್ದಾರೆ. ಇಬ್ಬರು ಅರ್ಧ ಶತಕ ದಾಟಿದ್ದಾರೆ.

ಇಂಗ್ಲೆಂಡ್‌ಗೆ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಏಕದಿನ ಪಂದ್ಯಗಳ ಪರಿಣತ ಜೇಸನ್‌ ರಾಯ್‌, ಟೆಸ್ಟ್‌ಗಳಲ್ಲಿ ಪರದಾಡುತ್ತಿದ್ದಾರೆ. ‘ಆರಂಭ ಆಟಗಾರನ ಸ್ಥಾನಕ್ಕೆ ತಜ್ಞ ಆಟಗಾರನಿರಬೇಕು. ಈಗ ಆಡುತ್ತಿರುವ ರೀತಿ ನೋಡಿದರೆ ಜೇಸನ್‌ ರಾಯ್‌ ಅಂಥ ಆಟಗಾರ 20 ಇನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ ಆಡಬಹುದು’ ಎಂದು ‘ಡೇಲಿ ಮೇಲ್‌’ಗೆ ಬರೆದ ಅಂಕಣದಲ್ಲಿ ತಿವಿದಿದ್ದಾರೆ ಮಾಜಿ ನಾಯಕ ನಾಸಿರ್‌ ಹುಸೇನ್‌.

‘ಟೆಸ್ಟ್‌ಗಳಲ್ಲಿ ಅವರು ಮಧ್ಯಮ ಕ್ರಮಾಂಕಕ್ಕೆ ಸೂಕ್ತ’ ಎಂದೂ ಸಲಹೆ ನೀಡಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಆಡಿದ ತಂಡವನ್ನೇ ಇಂಗ್ಲೆಂಡ್‌ ಇಲ್ಲೂ ಉಳಿಸಿಕೊಂಡಿದೆ. ಇದನ್ನು ಕೆಲಮಟ್ಟಿಗೆ ಕೋಚ್‌ ಟ್ರೇವರ್‌ ಬೇಲಿಸ್‌ ಕೂಡ ಒಪ್ಪುತ್ತಾರೆ.

ಐರ್ಲೆಂಡ್‌ ಎದುರು ಏಕೈಕ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಅವರು ಆಕರ್ಷಕ 72 ರನ್‌ ಬಾರಿಸಿದ್ದರು. ಆರಂಭ ಆಟಗಾರನಾಗಿ ಐದು ಇನಿಂಗ್ಸ್‌ಗಳಲ್ಲಿ ಅವರ ಗಳಿಕೆ 45 ಮಾತ್ರ. ಜಾನ್‌ ಡೆನ್ಲಿ ಕೂಡ ಉಪಯುಕ್ತ ಇನಿಂಗ್ಸ್‌ ಆಡುತ್ತಿಲ್ಲ. ಕ್ಯಾಪ್ಟನ್‌ ಜೋ ರೂಟ್‌ ಕೂಡ ಪರದಾಡುತ್ತಿದ್ದ ಅವರ ಸರಾಸರಿ 25 ದಾಟಿಲ್ಲ.

‘ನಮ್ಮ ಉತ್ತಮ ಆಟಗಾರನನ್ನು ಕಳೆಉದಕೊಂಡಿದ್ದೇವೆ’ ಎಂದು ಆಸ್ಟ್ರೇಲಿಯಾ ತಂಡದ ಕೋಚ್‌ ಜಸ್ಟಿನ್‌ ಲ್ಯಾಂಗರ್ ಹೇಳಿದ್ದಾರೆ. ಉತ್ತಮ ಆಟಗಾರ ಇಲ್ಲದಿದ್ದರೆ ಅದು ಪಂದ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಆ್ಯಂಡರ್ಸನ್‌ ಬದಲು ಉರಿವೇಗದ ಬೌಲರ್‌ ಜೋಫ್ರಾ ಆರ್ಚರ್‌ ಇಂಗ್ಲೆಂಡ್‌ ತಂಡಕ್ಕೆ ಬಂದಿರುವುದರಿಂದ ಎರಡನೇ ಟೆಸ್ಟ್‌ನಲ್ಲಿ ಹೋರಾಟ ಕಂಡುಬಂದಿತ್ತು. ಅಂತಿಮ ದಿನ ಇಂಗ್ಲೆಂಡ್‌ಗೆ ಗೆಲುವಿನ ಸುವಾಸನೆಯೂ ಬಂದಿತ್ತು.

ಲಾರ್ಡ್ಸ್‌ನ ಎರಡನೇ ಇನಿಂಗ್ಸ್‌ನಲ್ಲಿ ಸ್ಮಿತ್‌ ಬದಲು ಆಡಿದ ಲಾಬುಚಾನ್‌ ಕೆಚ್ಚೆದೆಯ 59 ರನ್‌ ಹೊಡೆದಿದ್ದಾರೆ. ಇದು ಆಸ್ಟ್ರೇಲಿಯಾಕ್ಕೆ ಕೊಂಚ ಸಮಾಧಾನ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT