ಶನಿವಾರ, ಜುಲೈ 31, 2021
27 °C

ಸೌರವ್‌ ಗಂಗೂಲಿ ಅಣ್ಣನಿಗೆ ಕೋವಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಶಿಶ್‌ ಗಂಗೂಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಜಂಟಿ ಕಾರ್ಯದರ್ಶಿಯಾಗಿರುವ ಸ್ನೇಹಶಿಶ್ ಅವರು‌ ಬುಧವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ನೇಹಶಿಶ್‌ಗೆ ಕೋವಿಡ್‌ ಇರುವುದು ಖಚಿತಪಟ್ಟಿರುವುದರಿಂದ ಸೌರವ್‌ ಗಂಗೂಲಿ ಹಾಗೂ ಸಿಬಿಎ ಅಧ್ಯಕ್ಷ ಅಭಿಷೇಕ್‌ ದಾಲ್ಮಿಯ ಅವರು ಸ್ವಯಂ ಪ್ರತ್ಯೇಕವಾಸದ ಮೊರೆ ಹೋಗಿದ್ದಾರೆ.

‘ಜ್ವರದ ಲಕ್ಷಣ ಕಾಣಿಸಿಕೊಂಡಿದ್ದರಿಂದ ಸ್ನೇಹಶಿಶ್‌ ಅವರು ಕೋವಿಡ್‌ ಪರೀಕ್ಷೆ ಎದುರಿಸಿದ್ದರು. ಪಾಸಿಟಿವ್‌ ವರದಿ ಬಂದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ಬೇಗ ಗುಣಮುಖರಾಗುವ ವಿಶ್ವಾಸವಿದೆ’ ಎಂದು ಅಭಿಷೇಕ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೌರವ್‌ ಹಾಗೂ ಅಭಿಷೇಕ್‌ ಅವರಲ್ಲಿ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಪರೀಕ್ಷೆಗೆ ಒಳಗಾಗಿಲ್ಲ.

‘ಸಿವಿಲ್‌ ಎಂಜಿನಿಯರಿಂಗ್‌‌ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಚಂದನ್‌ ದಾಸ್‌ ಅವರಿಗೆ ಕೋವಿಡ್‌ ಇರುವುದು ಇದೇ ತಿಂಗಳ ನಾಲ್ಕರಂದು ಗೊತ್ತಾಗಿತ್ತು. ಹೀಗಾಗಿ ಸಿಎಬಿ ಕಚೇರಿಗೆ ಅನಿರ್ದಿಷ್ಟಾವಧಿವರೆಗೆ ಬೀಗ ಹಾಕಲಾಗಿದೆ. ಸದ್ಯಕ್ಕೆ ಆನ್‌ಲೈನ್‌ ಮೂಲಕವೇ ಸಂಸ್ಥೆಯ ಎಲ್ಲಾ ಸಭೆಗಳನ್ನೂ ನಡೆಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಈಡನ್‌ ಗಾರ್ಡನ್ಸ್‌ ಮೈದಾನದ ಕೆಲ ಗ್ಯಾಲರಿಗಳನ್ನು ಕ್ವಾರಂಟೈನ್‌ ಕೇಂದ್ರವಾಗಿ ಮಾರ್ಪಾಡು ಮಾಡುವ ಸಂಬಂಧ ಇತ್ತೀಚೆಗೆ ಕೋಲ್ಕತ್ತ ‍ಪೊಲೀಸರೊಂದಿಗೆ ಸಭೆ ನಡೆದಿತ್ತು. ಅದರಲ್ಲಿ ಸಂಸ್ಥೆಯ ಪರವಾಗಿ ನಾನೊಬ್ಬನೇ ಪಾಲ್ಗೊಂಡಿದ್ದೆ. ಪೊಲೀಸ್‌ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಾಗ ನಮ್ಮೊಂದಿಗೆ ಸ್ನೇಹಶಿಶ್‌ ಕೂಡ ಇದ್ದರು’ ಎಂದಿದ್ದಾರೆ.

ಸ್ನೇಹಶಿಶ್‌ ಅವರ ಪತ್ನಿ, ಅತ್ತೆ, ಮಾವ ಹಾಗೂ ಮನೆಯ ಕೆಲಸದವನೊಬ್ಬನಿಗೆ ಕೊರೊನಾ ಸೋಂಕು ತಗುಲಿದ್ದು ಹೋದ ತಿಂಗಳ 20ರಂದು ಖಚಿತಪಟ್ಟಿತ್ತು. ಹೀಗಾಗಿ 55 ವರ್ಷ ವಯಸ್ಸಿನ ಸ್ನೇಹಶಿಶ್‌ ಅವರು ಮೋಮಿನಪುರ ನಿವಾಸದಿಂದ ಬೆಹಲಾದಲ್ಲಿರುವ ‘ಚಾಂದಿ ಭವನ್‌‌’ಗೆ ಸ್ಥಳಾಂತರಗೊಂಡಿದ್ದರು.

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೌರವ್‌ ಅವರು ತಮ್ಮ ಮನೆಯ ಸಮೀಪದಲ್ಲಿರುವ ಕಚೇರಿಯಿಂದ ಬಿಸಿಸಿಐಗೆ ಸಂಬಂಧಪಟ್ಟ ಕೆಲಸಗಳನ್ನು ನಿರ್ವಹಿಸುತ್ತಿದ್ದರು. 

ಗಂಗೂಲಿ ಕುರಿತಾದ ಬಂಗಾಳಿ ಟಿ.ವಿ.ಕಾರ್ಯಕ್ರಮ ‘ದಾದಾಗಿರಿ; ಅನ್‌ಲಿಮಿಟೆಡ್‌ ಸೀಸನ್‌–8’ನ ಶೂಟಿಂಗ್‌ ಕೂಡ ಈಗ ಸ್ಥಗಿತಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು