ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರಿಗೆ ಎನ್‌ಸಿಎನಲ್ಲಿಯೇ ಫಿಟ್‌ನೆಸ್ ಟೆಸ್ಟ್ :ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನುಡಿ
Last Updated 20 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕೋಲ್ಕತ್ತ : ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಫಿಟ್‌ನೆಸ್‌ ಪರೀಕ್ಷೆಯನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಸಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಎನ್‌ಸಿಎದಲ್ಲಿ ಪರೀಕ್ಷೆ ಮಾಡಲು ರಾಹುಲ್ ದ್ರಾವಿಡ್ ನೇತೃತ್ವದ ತಂಡವು ಆಸಕ್ತಿ ತೋರಿಲ್ಲ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಗಂಗೂಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಗಾಯದ ಚಿಕಿತ್ಸೆಗಾಗಿ ಎನ್‌ಸಿಎನಲ್ಲಿದ್ದ ಬೂಮ್ರಾ ಈಚೆಗಷ್ಟೇ ವಿಶಾಖಪಟ್ಟಣದಲ್ಲಿ ಈಚೆಗೆ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದರು.

‘ಇಡೀ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಭಾರತ ಂಡದ ಆಟಗಾರರು ಎನ್‌ಸಿಎಗೆ ಮರಳಬೇಕು. ಅಲ್ಲಿಯೇ ಪರೀಕ್ಷೆ ನೀಡಬೇಕು. ಅದಕ್ಕಾಗಿ ಅಗತ್ಯವಿರುವ ಎಲ್ಲ ಸಾರಿಗೆ, ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದರು.

‘ಭಾರತ ತಂಡದ ಕ್ರಿಕೆಟ್ ಆಟಗಾರರಿಗೆ ಎನ್‌ಸಿಎನೇ ಪ್ರಥಮ ಮತ್ತು ಅಂತಿಮ ಫಿಟ್‌ನೆಸ್ ಪರೀಕ್ಷಾ ತಾಣವಾಗಿದೆ. ಎನ್‌ಸಿಎ ಪರೀಕ್ಷೆಗಳಿಗೆ ಎಲ್ಲ ಆಟಗಾರರೂ ಒಡ್ಡಿಕೊಳ್ಳಲೇಬೇಕು. ಅಲ್ಲಿಯ ವರದಿಯೇ ಅಂತಿಮ’ ಎಂದರು.

‘ಆಟಗಾರರು ಪಂದ್ಯಗಳಲ್ಲಿ ಆಡಲು ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಆಗ ಅವರಿದ್ದ ಸ್ಥಳಗಳಲ್ಲಿಯೇ ಎನ್‌ಸಿಎ ಫಿಸಿಯೋಗಳ ಸೇವೆ ಸಿಗುವಂತಹ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ಬೂಮ್ರಾ ಅವರಿಗೆ ಮುಂಬೈನಲ್ಲಿಯೇ ಫಿಸಿಯೊ ನೆರವು ನೀಡುವ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ. ಈ ಮೂಲಕ ಸದಾ ಎನ್‌ಸಿಎ ಕಣ್ಗಾವಲಿನಲ್ಲಿಯೇ ಆಟಗಾರರ ಫಿಟ್‌ನೆಸ್ ನಿರ್ವಹಣೆ ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ರಾಹುಲ್ ದ್ರಾವಿಡ್ ಅವರು ಶ್ರೇಷ್ಠ ಆಟಗಾರರಾಗಿದ್ದವರು. ಬದ್ಧತೆ, ಪರಿಪೂರ್ಣತೆ ಮತ್ತು ಶಿಸ್ತುಗಳಿರುವ ವ್ಯಕ್ತಿ. ಅವರಿಂದ ಎನ್‌ಸಿಎನಲ್ಲಿ ಉತ್ತಮವಾದ ಸೌಲಭ್ಯ ಸಿಗುವುದು ಖಚಿತ. ಅಕಾಡೆಮಿಯ ಉನ್ನತೀಕರಣ ಮತ್ತು ಸುಧಾರಣೆಗೆ ರಾಹುಲ್‌ ಅವರಿಗೆ ಹೊಣೆ ನೀಡಲಾಗಿದೆ. ಅವರು ಮತ್ತು ಅಲ್ಲಿಯ ಪದಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸದ್ಯದ ವಿಷಯದ ಕುರಿತು ಇನ್ನೊಂದು ವಾರದಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ’ ಎಂದು ಗಂಗೂಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT