ಸೆಂಚುರಿಯನ್, ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾ ತಂಡ ದವರು ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆಲುವು ಪಡೆದು ವಿಶ್ವದಾಖಲೆ ಮಾಡಿದರು.
ಭಾನುವಾರ ನಡೆದ ಪಂದ್ಯದಲ್ಲಿ ಏಡನ್ ಮರ್ಕರಂ ಬಳಗ ಆರು ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್ ಗಳಿಗೆ 258 ರನ್ ಪೇರಿಸಿತು. ಜಾನ್ಸನ್ ಚಾರ್ಲ್ಸ್ (118 ರನ್, 46 ಎ., 4X10, 6X11) ಮತ್ತು ಕೈಲ್ ಮೇಯರ್ಸ್ (51 ರನ್, 27 ಎ., 4X5, 6X4) ಅವರು ಅಬ್ಬರದ ಆಟವಾಡಿದರು.
ದಕ್ಷಿಣ ಆಫ್ರಿಕಾ 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 259 ರನ್ ಗಳಿಸಿ ಗೆದ್ದಿತು. ಕ್ವಿಂಟನ್ ಡಿಕಾಕ್ (100 ರನ್, 44 ಎ., 4X9, 6X8) ಮತ್ತು ರೀಜಾ ಹೆಂಡ್ರಿಕ್ಸ್ (68 ರನ್, 28 ಎ., 4X11, 6X2) ಅವರ ಸ್ಫೋಟಕ ಬ್ಯಾಟಿಂಗ್ ತಂಡದ ಗೆಲುವಿಗೆ ಕಾರಣವಾಯಿತು.
ಕಳೆದ ವರ್ಷ ನಡೆದಿದ್ದ ಪಂದ್ಯದಲ್ಲಿ ಬೆಲ್ಜಿಯಂ ತಂಡವು ಸರ್ಬಿಯಾ ನೀಡಿದ್ದ 246ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 258 (ಕೈಲ್ ಮೇಯರ್ಸ್ 51, ಜಾನ್ಸನ್ ಚಾರ್ಲ್ಸ್ 118, ರೊಮಾರಿಯೊ ಶೆಫರ್ಡ್ ಔಟಾಗದೆ 41, ಮಾರ್ಕೊ ಜೆನ್ಸೆನ್ 52ಕ್ಕೆ 3, ವೇಯ್ನ್ ಪಾರ್ನೆಲ್ 43ಕ್ಕೆ 2) ದಕ್ಷಿಣ ಆಫ್ರಿಕಾ 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 259 (ಕ್ವಿಂಟನ್ ಡಿಕಾಕ್ 100, ರೀಜಾ ಹೆಂಡ್ರಿಕ್ಸ್ 68, ಏಡನ್ ಮರ್ಕರಂ ಔಟಾಗದೆ 38, ರೊವ್ಮನ್ ಪೊವೆಲ್ 27ಕ್ಕೆ 1) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್ ಗೆಲುವು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.