ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: 3–0 ಯಿಂದ ಸರಣಿ ಗೆದ್ದ ದಕ್ಷಿಣ ಆಫ್ರಿಕಾ, ದೀಪಕ್ ವೀರೋಚಿತ ಆಟ ವ್ಯರ್ಥ

Last Updated 23 ಜನವರಿ 2022, 18:52 IST
ಅಕ್ಷರ ಗಾತ್ರ

ಕೇಪ್‌ಟೌನ್: ದೀಪಕ್ ಚಾಹರ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ದಿಟ್ಟೆದೆಯ ಬ್ಯಾಟಿಂಗ್‌ಗೆ ಗೆಲುವು ಒಲಿಯಲಿಲ್ಲ.

ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 4 ರನ್‌ಗಳ ರೋಚಕ ಜಯ ಸಾಧಿಸಿತು. ಸರಣಿಯನ್ನು 3–0ಯಿಂದ ಕ್ಲೀನ್‌ ಸ್ವೀಪ್ ಮಾಡಿತು. ಸುಂದರ ಶತಕ ದಾಖಲಿಸಿದ ಕ್ವಿಂಟನ್ ಡಿ ಕಾಕ್ ಆಟಕ್ಕೆ ಜಯ ಒಲಿಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಆರಂಭದಲ್ಲಿ ಯಶಸ್ಸು ಗಳಿಸಿತು. ದಕ್ಷಿಣ ಆಫ್ರಿಕಾ ತಂಡವು 70 ರನ್‌ಗಳಾಗುಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು.

ಆದರೆ ಆರಂಭಿಕ ಬ್ಯಾಟರ್ ಕ್ವಿಂಟನ್ (124; 130ಎ, 4X12, 6X2) ಮತ್ತು ರಸಿ ವ್ಯಾನ್ ಡರ್ ಡಸೆನ್ (52; 59ಎ, 4X4, 6X1) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 144 ರನ್ ಸೇರಿಸಿ ದರು. ಇದರಿಂದಾಗಿ ತಂಡವು 49.5 ಓವರ್‌ಗಳಲ್ಲಿ 287 ರನ್‌ ಗಳಿಸಿ ಆಲೌಟ್ ಆಯಿತು. ಕನ್ನಡಿಗ ಪ್ರಸಿದ್ಧ ಕೃಷ್ಣ ಮೂರು ವಿಕೆಟ್‌ಗಳನ್ನು ಗಳಿಸಿದರು.

ಅದಕ್ಕುತ್ತರವಾಗಿ ಭಾರತ ತಂಡವು 49.2 ಓವರ್‌ಗಳಲ್ಲಿ 283 ರನ್ ಗಳಿಸಿ ಆಲೌಟ್ ಆಯಿತು. ತಂಡವು 223 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡ ಹಂತದಲ್ಲಿ ದೀಪಕ್ (54; 34ಎಸೆತ) ಅಮೋಘ ಅರ್ಧಶತಕ ಗಳಿಸಿ, ತಂಡದಲ್ಲಿ ಜಯದ ಆಸೆ ಚಿಗುರಿಸಿದರು. ಅವರಿಗೆ ಜಸ್‌ಪ್ರೀತ್ ಬೂಮ್ರಾ (12; 15ಎ) ಉತ್ತಮ ಜೊತೆ ನೀಡಿದರು. ಆದರೆ ಲುಂಗಿ ಗಿಡಿ ಮತ್ತು ಪಿಶುವಾಯೊ ಅವರ ಬೌಲಿಂಗ್ ಮುಂದೆ ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಶಿಖರ್, ಕೊಹ್ಲಿ ಅರ್ಧಶತಕ: ಈ ಪಂದ್ಯದಲ್ಲಿ ಭಾರತಕ್ಕೆ ತುಸು ಸಮಾಧಾನ ತಂದ ಅಂಶವೆಂದರೆ ಶಿಖರ್ ಧವನ್ ಮತ್ತು ವಿರಾಟ್‌ ಕೊಹ್ಲಿಯವರ ಅರ್ಧಶತಕಗಳು. ಎರಡನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ದೆಹಲಿಯ ಜೋಡಿಯು ಇಲ್ಲಿ ಭರವಸೆಯ ಆಟವಾಡಿತು. ಸವಾಲಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಬೇಗನೆ ಆಘಾತವಾಯಿತು. ಲುಂಗಿ ಗಿಡಿ ಬೌಲಿಂಗ್‌ನಲ್ಲಿ ಕೆ.ಎಲ್. ರಾಹುಲ್ (9 ರನ್) ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ಶಿಖರ್ ಮತ್ತು ಕೊಹ್ಲಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ಗಳನ್ನು ಸೇರಿಸಿದರು. ಶಿಖರ್ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದರೆ, 23ನೇ ಓವರ್‌ನಲ್ಲಿ ಶಿಖರ್ ವಿಕೆಟ್ ಪಡೆದ ಪಿಶುವಾಯೊ, ಅದೇ ಓವರ್‌ನಲ್ಲಿ ರಿಷಭ್ ಪಂತ್ ವಿಕೆಟ್ ಕೂಡ ಕಬಳಿಸಿದರು.

ಆಗ ವಿರಾಟ್ ತಮ್ಮ ಆಟಕ್ಕೆ ವೇಗ ನೀಡಲು ಯತ್ನಿಸಿದರು. 63 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅವರ ಆಟವನ್ನು ಗಣ್ಯರ ಗ್ಯಾಲರಿಯಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಮಗಳು ವೊಮಿಕಾಳೊಂದಿಗೆ ನೋಡಿದರು. ಅರ್ಧಶತಕ ಪೂರೈಸಿದ ಕೊಹ್ಲಿ ತಮ್ಮ ಬ್ಯಾಟ್‌ನ್ನೇ ಮಗುವಿನಂತೆ ಮಡಿಲಲ್ಲಿ ಟ್ಟು ಆಡಿಸಿ ಸಂಭ್ರಮಿಸಿದರು.

ಆದರೆ, ಅವರು ಎರಡು ವರ್ಷಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ದಾಖಲಿಸುವ ನಿರೀಕ್ಷೆ ಹುಸಿಯಾಯಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 49.5 ಓವರ್‌ಗಳಲ್ಲಿ 287 (ಕ್ವಿಂಟನ್ ಡಿ ಕಾಕ್ 124, ರಸಿ ವ್ಯಾನ್ ಡರ್ ಡಸೆನ್ 52, ಡೇವಿಡ್ ಮಿಲ್ಲರ್ 39, ಡ್ವೇನ್ ಪ್ರಿಟೊರಿಯಸ್ 20, ದೀಪಕ್ ಚಾಹರ್ 53ಕ್ಕೆ2, ಜಸ್‌ಪ್ರೀತ್ ಬೂಮ್ರಾ 52ಕ್ಕೆ2, ಪ್ರಸಿದ್ಧ ಕೃಷ್ಣ 59ಕ್ಕೆ3, ಯಜುವೇಂದ್ರ ಚಾಹಲ್ 47ಕ್ಕೆ1), ಭಾರತ: 49.2 ಓವರ್‌ಗಳಲ್ಲಿ 283 (ಶಿಖರ್ ಧವನ್ 61, ವಿರಾಟ್ ಕೊಹ್ಲಿ 65, ಶ್ರೇಯಸ್ ಅಯ್ಯರ್ 26, ಸೂರ್ಯಕುಮಾರ್ ಯಾದವ್ 39, ದೀಪಕ್ ಚಾಹರ್ 54, ಜಸ್‌ಪ್ರೀತ್ ಬೂಮ್ರಾ 12). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 4 ರನ್‌ಗಳ ಜಯ; 3 ಪಂದ್ಯಗಳ ಸರಣಿ 3–0ಯಿಂದ ಕೈವಶ. ಪಂದ್ಯ ಮತ್ತು ಸರಣಿಯ ಉತ್ತಮ ಆಟಗಾರ: ಕ್ವಿಂಟನ್ ಡಿಕಾಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT