ಮಂಗಳವಾರ, ಜೂನ್ 2, 2020
27 °C
₹ 50 ಲಕ್ಷ ದೇಣಿಗೆ ನೀಡಿದ ಸಚಿನ್‌ ತೆಂಡೂಲ್ಕರ್‌: ಕೈ ಜೋಡಿಸಿದ ಹಿಮಾ ದಾಸ್‌

ಕೋವಿಡ್ ಪೀಡಿತರ ಸಂಕಷ್ಟಕ್ಕೆ ಮಿಡಿದ ಕ್ರೀಡಾಪಟುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಭಾರತದಲ್ಲಿ ಕೋವಿಡ್‌–19 ಪಿಡುಗಿನಿಂದ ಪರಿತಪಿಸುತ್ತಿರುವವರಿಗೆ ಪ್ರಮುಖ ಕ್ರೀಡಾಪಟುಗಳು ನೆರವಿನ ಹಸ್ತ ಚಾಚಿದ್ದಾರೆ.

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರು ₹ 50 ಲಕ್ಷ ದೇಣಿಗೆ ನೀಡಲು ಮುಂದಾಗಿದ್ದಾರೆ. ಭಾರತದ ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ಮೊತ್ತ ನೀಡಿದ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.

‘ಸಚಿನ್‌ ಅವರು ಸ್ವ ಇಚ್ಛೆಯಿಂದ ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಪರಿಹಾರ ನಿಧಿಗಳಿಗೆ ತಲಾ ₹25 ಲಕ್ಷ ನೀಡಲು ತೀರ್ಮಾನಿಸಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ’ ಎಂದು ಅವರ ಆಪ್ತರೊಬ್ಬರು ಹೇಳಿದ್ದಾರೆ.

ಸಹೋದರರಾದ ಇರ್ಫಾನ್‌ ಮತ್ತು ಯೂಸುಫ್‌ ಪಠಾಣ್‌ ಅವರೂ ಕೆಲ ದಿನಗಳ ಹಿಂದೆ ಬರೋಡಾ ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಗೆ ಒಟ್ಟು 4,000 ಮುಖ ಗವಸುಗಳನ್ನು ಕೊಟ್ಟಿದ್ದರು.

ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಹಿರಿಯ ಕ್ರಿಕೆಟಿಗ ಲಕ್ಷ್ಮಿ ರತನ್‌ ಶುಕ್ಲಾ ಅವರು ಶಾಸಕರಾಗಿ ತಮಗೆ ಸಿಗುವ ಮೂರು ತಿಂಗಳ ವೇತನ ಹಾಗೂ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಸಿಗುವ ಮೂರು ತಿಂಗಳ ಪಿಂಚಣಿ ಮೊತ್ತವನ್ನೂ ದೇಣಿಗೆಯಾಗಿ ನೀಡಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಹೀಗಾಗಿ ಶಾಸಕನಾಗಿ ನಾನು ಪಡೆಯುವ ವೇತನ ಹಾಗೂ ಬಿಸಿಸಿಐಯಿಂದ ಸಿಗುವ ಪಿಂಚಣಿಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದೇನೆ’ ಎಂದು ಶುಕ್ಲಾ ಹೇಳಿದ್ದಾರೆ.

ಭಾರತದ ಪ್ರಮುಖ ಸ್ಪ್ರಿಂಟರ್‌ ಹಿಮಾ ದಾಸ್‌ ತಮ್ಮ ಒಂದು ತಿಂಗಳ ವೇತನವನ್ನು ಹಿಮಾಚಲ ಪ್ರದೇಶ ಸರ್ಕಾರಕ್ಕೆ ದೇಣಿಗೆ ನೀಡಿದ್ದಾರೆ.

‘ಕೊರೊನಾ ವೈರಾಣು ಜಗತ್ತನ್ನೇ ತಲ್ಲಣಗೊಳಿಸಿದೆ. ಇದರಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಕೋವಿಡ್‌–19 ರೋಗದಿಂದ ಬಳಲುತ್ತಿದ್ದಾರೆ. ಅಂತಹವರಿಗೆ ನೆರವು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ನಾನು ಅಸ್ಸಾಂ ಆರೋಗ್ಯ ನಿಧಿ ಖಾತೆಗೆ ಒಂದು ತಿಂಗಳ ವೇತನವನ್ನು ಜಮೆ ಮಾಡಿದ್ದೇನೆ’ ಎಂದು ಹಿಮಾ ಟ್ವೀಟ್‌ ಮಾಡಿದ್ದಾರೆ.

ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು, ಕುಸ್ತಿಪಟು ಬಜರಂಗ್‌ ಪುನಿಯಾ ಅವರೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು