ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸ್ಥಿತಿ–ಗತಿ ನೋಡಿಕೊಂಡು ಕ್ರಿಕೆಟ್ ಆರಂಭಿಸಿ: ಐಸಿಸಿ

Last Updated 23 ಮೇ 2020, 19:55 IST
ಅಕ್ಷರ ಗಾತ್ರ

ದುಬೈ: ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗಳು ತಮ್ಮ ತಮ್ಮ ದೇಶಗಳಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಆರಂಭಿಸಬಹುದು. ಆದರೆ ಅಲ್ಲಿ ಸ್ಥಳೀಯವಾಗಿ ಕೊರೊನಾ ವೈರಸ್‌ ಸೋಂಕಿನ ಹರಡುವಿಕೆಯ ಸ್ಥಿತಿಗತಿಯನ್ನು ನೋಡಿಕೊಂಡು ನಿರ್ಧಾರ ಮಾಡಬೇಕು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿದೆ.

‘ಸುರಕ್ಷತೆ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಸ್ಥಳೀಯ ಪರಿಸ್ಥಿತಿಯು ಅಪಾಯಕಾರಿ ಮಟ್ಟದಲ್ಲಿ ಇಲ್ಲವೆಂದರೆ ಮಾತ್ರ ಚಟುವಟಿಕೆ ಪುನರಾರಂಭಕ್ಕೆ ಒತ್ತು ನೀಡಬೇಕು’ ಎಂದು ಐಸಿಸಿಯು ಶನಿವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇಂಗ್ಲೆಂಡ್‌ನಲ್ಲಿ ಸೋಂಕು ಹರಡುವಿಕೆಯು ತೀವ್ರಗತಿಯಲ್ಲಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿಯೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

‘ಕ್ರಿಕೆಟ್ ಆಟದ ಅಂಗಳ, ತರಬೇತಿ ಸ್ಥಳ, ಬಟ್ಟೆ ಬದಲಿಸುವ ಸ್ಥಳ, ವ್ಯಾಯಾಮ–ಆಟದ ಸಲಕರಣೆಗಳು, ಚೆಂಡಿನ ಸ್ವಚ್ಛತೆಯ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಆಟಗಾರರು, ಸಿಬ್ಬಂದಿಯ ನೈರ್ಮಲ್ಯ ಮತ್ತು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು. ಕ್ರಿಕೆಟ್ ಆಟದ ಸ್ಥಳದ ವಾತಾವರಣ ಹದಗೆಡದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದೆ.

‘ಕೆಲವು ದೇಶಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಿಲ್ಲ. ಅಂತಹ ದೇಶಗಳಲ್ಲಿ ಕ್ರಿಕೆಟ್‌ ಚಟುವಟಿಕೆಗಳನ್ನು ನಡೆಸಬಾರದು. ಸರ್ಕಾರವು ಮುಂದಿನ ಸೂಚನೆ ನೀಡುವವರೆಗೂ ಕಾಯಬೇಕು. ಪ್ರವಾಸ ಮತ್ತು ಕ್ವಾರಂಟೈನ್‌ ನಿಯಮಗಳಿಗೆ ಬದ್ಧರಾಗಿರಬೇಕು’ ಎಂದು ಐಸಿಸಿಯು ಹೇಳಿದೆ.

‘ನೀರಿನ ಬಾಟಲಿಗಳನ್ನು ಪರಸ್ಪರ ಹಂಚಿಕೊಳ್ಳಬಾರದು. ಟವೆಲ್, ಆಟದ ಸಾಮಗ್ರಿಗಳನ್ನು ಮತ್ತಿತರ ಸಾಮಗ್ರಿಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಕೈಬದಲಾಗುವುದನ್ನು ನಿರ್ಬಂಧಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT