ಬುಧವಾರ, ಆಗಸ್ಟ್ 4, 2021
23 °C

ಪಂದ್ಯದಿಂದ ಸ್ಟುವರ್ಟ್‌ ಬ್ರಾಡ್ ‌ಹೊರಗಿಟ್ಟ ನಿರ್ಧಾರ ಸಮರ್ಥಿಸಿಕೊಂಡ ಸ್ಟೋಕ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್‌: ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಿಂದ ಅನುಭವಿ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಅವರನ್ನು ಕೈಬಿಟ್ಟ ನಿರ್ಧಾರವನ್ನು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಹಂಗಾಮಿ ನಾಯಕ ಬೆನ್‌ ಸ್ಟೋಕ್ಸ್‌ ಸಮರ್ಥಿಸಿಕೊಂಡಿದ್ದಾರೆ.

ಭಾನುವಾರ ಮುಕ್ತಾಯಗೊಂಡ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ತಂಡ ನಾಲ್ಕು ವಿಕೆಟ್‌ಗಳಿಂದ ಸೋತಿತ್ತು. 

‘ಆಡುವ ಹನ್ನೊಂದರ ಬಳಗದಿಂದ ಏಕಾಏಕಿ ಹೊರಗಿಟ್ಟಿದ್ದರಿಂದ ತುಂಬಾ ಸಿಟ್ಟು ಬಂದಿತ್ತು. ಜೊತೆಗೆ ಬೇಸರವೂ ಆಗಿತ್ತು’ ಎಂದು ಬ್ರಾಡ್ ಹೋದ ‌ಶುಕ್ರವಾರ ಹೇಳಿದ್ದರು. 

ಈ ಕುರಿತು ಪ್ರತಿಕ್ರಿಯಿಸಿರುವ ಸ್ಟೋಕ್ಸ್‌ ‘138 ಟೆಸ್ಟ್‌ ಪಂದ್ಯಗಳನ್ನು ಆಡಿ 485 ವಿಕೆಟ್‌ ಉರುಳಿಸಿರುವ ಬ್ರಾಡ್‌ ಅವರು ಇನ್ನಷ್ಟು ಸಾಧನೆ ಮಾಡುವ ಹಂಬಲ ಹೊತ್ತಿದ್ದಾರೆ. ಇನ್ನಷ್ಟು ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸಬೇಕೆಂಬ ಆಸೆ ಹೊಂದಿದ್ದಾರೆ. ಅವರ ಉತ್ಸಾಹ ಕಂಡು ನಿಜಕ್ಕೂ ಖುಷಿಯಾಗಿದೆ’ ಎಂದಿದ್ದಾರೆ.

‘ನಾವು ಒಂದು ತೀರ್ಮಾನ ಕೈಗೊಂಡ ಬಳಿಕ ಅದಕ್ಕೆ ಬದ್ಧರಾಗಿರಬೇಕಾಗುತ್ತದೆ. ಪಂದ್ಯ ಸೋತ ನಂತರ ಕೆಲವು ಆಟಗಾರರತ್ತ ಬೊಟ್ಟು ಮಾಡುವುದು ಸರಿಯಲ್ಲ. ನಾನಂತೂ ಆ ಕೆಲಸ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಎಲ್ಲಾ ತಂಡಗಳೂ ಎದುರಾಳಿಗಳನ್ನು ಮಣಿಸಲು ಸೂಕ್ತ ಯೋಜನೆ ರೂಪಿಸಿಯೇ ಅಂಗಳಕ್ಕಿಳಿಯುತ್ತವೆ. ಆಡುವ ಬಳಗದ ಆಯ್ಕೆಯೂ ಈ ಯೋಜನೆಯ ಭಾಗವಾಗಿರುತ್ತದೆ. ಕೆಲವೊಮ್ಮೆ ನಮ್ಮ ನಿರ್ಧಾರ ತಲೆಕೆಳಗಾಗುವುದು ಸಹಜ. ಅದಕ್ಕಾಗಿ ಇನ್ನೊಬ್ಬರನ್ನು ದೂಷಿಸುವುದು ಸರಿಯಲ್ಲ’ ಎಂದು ನುಡಿದಿದ್ದಾರೆ.

‘ನಮ್ಮಿಂದಾದ ತಪ್ಪುಗಳೇನು ಎಂಬುದು ಈಗಾಗಲೇ ಎಲ್ಲರಿಗೂ ಅರಿವಾಗಿದೆ. ಪಿಚ್‌ ಹೇಗಾದರೂ ವರ್ತಿಸಲಿ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕು. ಈ ವಿಷಯದಲ್ಲಿ ನಾವು ಎಡವಿದೆವು. ಇನ್ನೂ 80ರನ್‌ ಹೆಚ್ಚು ಗಳಿಸಿದ್ದರೆ ಎದುರಾಳಿಗಳಿಗೆ ಗುರಿ ಮುಟ್ಟುವುದು ಕಷ್ಟವಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಆಟ ಅಮೋಘವಾಗಿತ್ತು: ‘ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ನಮ್ಮ ಆಟಗಾರರು ತೋರಿದ ಸಾಮರ್ಥ್ಯವು ಅಮೋಘವಾಗಿತ್ತು’ ಎಂದು ವಿಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಹೇಳಿದ್ದಾರೆ.

ನಾಲ್ಕನೇ ದಿನ ವಿಂಡೀಸ್‌ ಬೌಲರ್‌ಗಳು ಕೇವಲ 30ರನ್‌ಗಳಿಗೆ ಐದು ವಿಕೆಟ್‌ ಉರುಳಿಸಿ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು 284ರನ್‌ಗಳಿಗೆ ಕಟ್ಟಿಹಾಕಿದ್ದರು.

‘ಬೌಲರ್‌ಗಳು ಪರಿಣಾಮಕಾರಿಯಾಗಿ ದಾಳಿ ನಡೆಸಿದರು. ನಮ್ಮ ಆಟಗಾರರ ಕ್ಷೇತ್ರ ರಕ್ಷಣೆಯೂ ಅಮೋಘವಾಗಿತ್ತು. ನೆಪಗಳನ್ನು ಹೇಳದೆ ಎಲ್ಲರೂ ಕೆಚ್ಚೆದೆಯಿಂದ ಹೋರಾಡಿದರು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು