ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup | ರೋಹಿತ್, ಕೊಹ್ಲಿಗೆ ಸಿಗುತ್ತಾ ಅವಕಾಶ? ಗವಾಸ್ಕರ್ ಹೇಳಿದ್ದೇನು?

Published 6 ಜನವರಿ 2024, 11:19 IST
Last Updated 6 ಜನವರಿ 2024, 11:19 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಅನುಭವಿ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋಲು ಕಂಡಿತ್ತು. ಅದಾದ ಬಳಿಕ ಈ ಇಬ್ಬರೂ ಭಾರತ ಪರ ಚುಟುಕು ಮಾದರಿಯಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ, ಯುವ ಆಟಗಾರರಿಗೆ ಸ್ಥಾನ ನೀಡಬೇಕು ಎಂದು ಹಲವರು ಪ್ರತಿಪಾದಿಸಿದ್ದಾರೆ.

ಈ ನಡುವೆ ದಿಗ್ಗಜ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌ ಹಾಗೂ ಮಾಜಿ ವೇಗಿ ಇರ್ಫಾನ್ ಪಠಾಣ್‌ ಅವರು ರೋಹಿತ್‌ ಹಾಗೂ ಕೊಹ್ಲಿ ಪರ ಬ್ಯಾಟ್‌ ಬೀಸಿದ್ದಾರೆ.

ಈ ಇಬ್ಬರೂ ತಂಡದ ಪ್ರಮುಖ ಬ್ಯಾಟರ್‌ಗಳಷ್ಟೇ ಅಲ್ಲ. ಅದ್ಭುತವಾಗಿ ಕ್ಷೇತ್ರರಕ್ಷಣೆ (ಫೀಲ್ಡಿಂಗ್‌) ಮಾಡಬಲ್ಲರು ಎಂದು ಗಾವಸ್ಕರ್‌ ಹೇಳಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿರುವ ಅವರು, 'ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಈಗಲೂ ಶ್ರೇಷ್ಠ ಕ್ಷೇತ್ರರಕ್ಷರು. ಇದು ತಂಡಕ್ಕೆ ಸಾಕಷ್ಟು ನೆರವು ನೀಡಲಿದೆ. ಅನುಭವಿಗಳನ್ನು ಸೇರಿಸಿಕೊಳ್ಳುವುದರಿಂದ ಒಳಿತಾಗಲಿದೆ' ಎಂದಿದ್ದಾರೆ.

'35–36 ವಯಸ್ಸಿನ ಆಸುಪಾಸಿನಲ್ಲಿದ್ದಾಗ ಕೆಲವೊಮ್ಮೆ ನಿಮ್ಮ ವೇಗ ಕಡಿಮೆಯಾಗಬಹುದು. ಕ್ಷೇತ್ರರಕ್ಷಣೆ ವೇಳೆ ನೀವು ಚೆಂಡು ಎಸೆಯುವುದೂ ಅಷ್ಟು ಪರಿಣಾಮಕಾರಿಯಾಗಿ ಇರದಿರಬಹುದು. ಹಾಗಾಗಿ, ಕ್ಷೇತ್ರರಕ್ಷಣೆ ಸಂದರ್ಭದಲ್ಲಿ ಎಲ್ಲಿ ನಿಲ್ಲಿಸುವುದು ಎಂಬ ಬಗ್ಗೆ ಚರ್ಚೆಯಾಗುತ್ತದೆ. ಆದರೆ, ಈ ಇಬ್ಬರ ವಿಚಾರದಲ್ಲಿ ಅದು ಸಮಸ್ಯೆಯೇ ಅಲ್ಲ. ಏಕೆಂದರೆ ಇಬ್ಬರೂ ಅದ್ಭುತ ಕ್ಷೇತ್ರರಕ್ಷಕರು' ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

2024ರ ಟಿ20 ವಿಶ್ವಕಪ್‌ ಟೂರ್ನಿಯು ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ಜೂನ್‌ 1ರಿಂದ 29ರ ವರೆಗೆ ನಡೆಯಲಿದೆ.

'ತಂಡಕ್ಕೆ ರೋಹಿತ್‌ ಅನುಭವದ ನೆರವು'
ಕಳೆದ ಚುಟುಕು ವಿಶ್ವಕಪ್‌ ಬಳಿಕ ಈ ಮಾದರಿಯಲ್ಲಿ ಆಡಿರುವ ಹೆಚ್ಚಿನ ಟೂರ್ನಿಗಳಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ತಂಡ ಮುನ್ನಡೆಸಿದ್ದಾರೆ. ಐಪಿಎಲ್‌ನಲ್ಲಿ ಆಡುವ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವವನ್ನೂ ರೋಹಿತ್‌ ಬದಲು ಹಾರ್ದಿಕ್‌ ವಹಿಸಿಕೊಂಡಿದ್ದಾರೆ.

ಹೀಗಾಗಿ, ರೋಹಿತ್‌ ಅವರು ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಥಾನ ಪಡೆದರೂ, ನಾಯಕರಾಗಿ ಉಳಿಯುವರೇ ಎಂಬುದು ಇನ್ನಷ್ಟೇ ತಿಳಿಯಲಿದೆ. ಒಂದು ವೇಳೆ ರೋಹಿತ್‌ಗೆ ತಂಡ ಮುನ್ನಡೆಸುವ ಹೊಣೆ ನೀಡದಿದ್ದರೂ, ಅವರ ಅನುಭವದ ನೆರವಂತೂ ಟೀಂ ಇಂಡಿಯಾಗೆ ಸಿಗಲಿದೆ ಎಂಬುದು ಗವಾಸ್ಕರ್ ಮಾತು.

'ರೋಹಿತ್‌ ನಾಯಕರಾಗಿ ಉಳಿಯುವರೇ ಎಂಬುದು ಗೊತ್ತಿಲ್ಲ. ಆದರೆ, ಅವರು ತಂಡದಲ್ಲಿದ್ದರೆ ಯಾರೇ ನಾಯಕನಾದರೂ ಲಾಭವಾಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಕೊಹ್ಲಿ ಸಾಮರ್ಥ್ಯದ ಬಗ್ಗೆ ಅನುಮಾನವಿಲ್ಲ'
'ಕೊಹ್ಲಿ ಅವರ ಲಯ ಕಳೆದ ಒಂದೂವರೆ ವರ್ಷದಿಂದ ಅಮೋಘವಾಗಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ 3 ಶತಕ ಸಹಿತ 750ಕ್ಕಿಂತ ಹೆಚ್ಚು ರನ್‌ ಗಳಿಸುವ ಮೂಲಕ ನಂಬಲು ಅಸಾಧ್ಯವೆಂಬಂತೆ ಆಡಿದ್ದಾರೆ. ಹಾಗಾಗಿ, ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ಬ್ಯಾಟಿಂಗ್‌ ಸಾಮರ್ಥ್ಯದ ಬಗ್ಗೆ ಯಾವ ಅನುಮಾನವೂ ಇಲ್ಲ' ಎಂದು ಗವಾಸ್ಕರ್‌ ಹೇಳಿದ್ದಾರೆ.

ಗವಾಸ್ಕರ್‌ ಜೊತೆಗಿದ್ದ ಮಾಜಿ ವೇಗದ ಬೌಲರ್‌ ಇರ್ಫಾನ್‌ ಪಠಾಣ್‌ ಅವರೂ, ರೋಹಿತ್‌ ಮತ್ತು ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ ಮತ್ತು ಯುಎಸ್‌ಎ ಮೈದಾನಗಳ ಅಪರಿಚಿತ ವಾತಾವರಣದಲ್ಲಿ ಇವರಿಬ್ಬರು ತಂಡದಲ್ಲಿದ್ದರೆ ಉತ್ತಮ ಎಂದು ಪ್ರತಿಪಾದಿಸಿದ್ದಾರೆ.

'ಕೊಹ್ಲಿಯನ್ನು ಪಿಚ್‌ನಲ್ಲಿ ನೋಡಬೇಕು ಎಂದು ವೈಯಕ್ತಿಕವಾಗಿ ಬಯಸುತ್ತೇನೆ. ಎರಡು ವರ್ಷಗಳ ಹಿಂದೆ ಖಂಡಿತವಾಗಿ ಅವರು ಉತ್ತಮ ಲಯದಲ್ಲಿ ಇರಲಿಲ್ಲ. ಆದರೆ, ಕಳೆದ ಐಪಿಎಲ್‌ ಮತ್ತು ಟಿ20 ವಿಶ್ವಕಪ್‌ ಅವರ ಪಾಲಿಗೆ ಅದ್ಭುತವಾಗಿದ್ದವು' ಎಂದು ಹೇಳಿದ್ದಾರೆ.

'ಇಬ್ಬರನ್ನೂ ಆಡಿಸುವುದು ಅವರ ಫಿಟ್‌ನೆಸ್‌ ಮತ್ತು ತಂಡದ ಮ್ಯಾನೇಜ್‌ಮೆಂಟ್ ಮೇಲೆ ಅವಲಂಬಿತವಾಗಿದೆ. ಆದರೆ, ತಂಡದಲ್ಲಿ ಇಬ್ಬರೂ ಆಡುವುದನ್ನು ನೋಡಲು ಬಯಸುತ್ತೇನೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT