ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Test Rankings: ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ

Published 5 ಜನವರಿ 2024, 11:24 IST
Last Updated 5 ಜನವರಿ 2024, 11:24 IST
ಅಕ್ಷರ ಗಾತ್ರ

ದುಬೈ: ಆಸ್ಟ್ರೇಲಿಯಾ ತಂಡವು ಶುಕ್ರವಾರ ಪ್ರಕಟವಾದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಗುರುವಾರ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಭಾರತ ತಂಡವು ಏಳು ವಿಕೆಟ್‌ಗಳಿಂದ ಜಯಿಸಿತ್ತು. ಆದರೆ  ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ ಸೋತಿತ್ತು.

ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಎದುರಿನ ಸರಣಿಯಲ್ಲಿ 2–0 ಮುನ್ನಡೆ ಗಳಿಸಿದೆ. ಸಿಡ್ನಿಯಲ್ಲಿ ಮೂರನೇ ಟೆಸ್ಟ್ ನಡೆಯುತ್ತಿದೆ.

‘ಹೋದ ವರ್ಷದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಜಯಿಸಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕೆಲದಿನಗಳವರೆಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಇದೀಗ ಮತ್ತೆ ಅಗ್ರಸ್ಥಾನಕ್ಕೇರಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ್ಯೂಲ್ಯಾಂಡ್ಸ್‌ನಲ್ಲಿ ಟೆಸ್ಟ್ ಗೆದ್ದ ನಂತರ ಭಾರತವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳಿವೆ.

‘ಸದ್ಯ ನಡೆಯುತ್ತಿರುವ ಸಿಡ್ನಿ ಟೆಸ್ಟ್, ಮುಂಬರಲಿರುವ ಭಾರತ ಮತ್ತು ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯ ಫಲಿತಾಂಶಗಳು ಐಸಿಸಿ ರ‍್ಯಾಂಕಿಂಗ್‌ ಹಾಗೂ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಏರಿಳಿತ ಸೃಷ್ಟಿಸುವ ನಿರೀಕ್ಷೆ ಇದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಟೆಸ್ಟ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್‌, ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ನಂತರದ ಸ್ಥಾನಗಳಲ್ಲಿ ಇದ್ದಾರೆ. ವಿರಾಟ್‌ ಕೊಹ್ಲಿ 9ನೇ ಸ್ಥಾನದಲ್ಲಿದ್ದು, ಅಗ್ರ ಹತ್ತರಲ್ಲಿ ಕಾಣಿಸಿಕೊಂಡ ಭಾರತದ ಏಕೈಕ ಬ್ಯಾಟರ್‌ ಎನಿಸಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಆರ್‌.ಅಶ್ವಿನ್‌ ಮೊದಲ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ 2 ಮತ್ತು 3ರಲ್ಲಿ ಇದ್ದಾರೆ. ರವೀಂದ್ರ ಜಡೇಜ ಮತ್ತು ಜಸ್‌ಪ್ರಿತ್‌ ಬೂಮ್ರಾ ಅವರು ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಇದ್ದಾರೆ.

ಜಡೇಜ ಮತ್ತು ಅಶ್ವಿನ್‌ ಆಲ್‌ರೌಂಡರ್‌ಗಳ ಪಟ್ಟಿಯಲ್ಲೂ ಮೊದಲೆರಡು ಸ್ಥಾನ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT