ಗೆಲುವಿನ ಹಾದಿಗೆ ಸನ್‌ರೈಸರ್ಸ್‌

ಶುಕ್ರವಾರ, ಮೇ 24, 2019
29 °C
ಡೇವಿಡ್‌ ವಾರ್ನರ್‌–ಜಾನಿ ಬೇಸ್ಟೊ ಅರ್ಧಶತಕ: ಚೆನ್ನೈಗೆ ಕಾಡಿದ ಧೋನಿ ಅನುಪಸ್ಥಿತಿ

ಗೆಲುವಿನ ಹಾದಿಗೆ ಸನ್‌ರೈಸರ್ಸ್‌

Published:
Updated:
Prajavani

ಹೈದರಾಬಾದ್‌: ಡೇವಿಡ್‌ ವಾರ್ನರ್‌ ಮತ್ತು ಜಾನಿ ಬೇಸ್ಟೊ, ಬುಧವಾರ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಸುರಿಸಿದ ರನ್‌ ಮಳೆಯಲ್ಲಿ ತವರಿನ ಅಭಿಮಾನಿಗಳು ಮಿಂದೆದ್ದರು.

ಇವರ ಅರ್ಧಶತಕಗಳ ಬಲದಿಂದ ಸನ್‌ರೈಸರ್ಸ್‌, 6 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿತು. ಈ ಮೂಲಕ ಗೆಲುವಿನ ಹಾದಿಗೆ ಮರಳಿತು. ಕೇನ್‌ ವಿಲಿಯಮ್ಸನ್‌ ಸಾರಥ್ಯದ ತಂಡ ಹಿಂದಿನ ಮೂರು ಪಂದ್ಯಗಳಲ್ಲಿ ಸೋತಿತ್ತು.

ಸುರೇಶ್‌ ರೈನಾ ಮುಂದಾಳತ್ವದ ಸೂಪರ್‌ ಕಿಂಗ್ಸ್‌, ಸನ್‌ರೈಸರ್ಸ್‌ ತಂಡ ವನ್ನು ಸೋಲಿಸಿ ಈ ಬಾರಿಯ ಲೀಗ್‌ನಲ್ಲಿ ‘‍ಪ್ಲೇ ಆಫ್‌’ ಪ್ರವೇಶಿಸಿದ ಮೊದಲ ತಂಡ ಎಂಬ ಶ್ರೇಯಕ್ಕೆ ಪಾತ್ರವಾಗುವ ಕನಸು ಕಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಈ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 132ರನ್‌ ದಾಖಲಿಸಲಷ್ಟೇ ಶಕ್ತವಾಯಿತು. ಸುಲಭ ಗುರಿಯನ್ನು ವಿಲಿಯಮ್ಸನ್‌ ಪಡೆ 16.5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ಗೆ ಆಸ್ಟ್ರೇಲಿಯಾದ ವಾರ್ನರ್‌ ಮತ್ತು ಇಂಗ್ಲೆಂಡ್‌ನ ಬೇಸ್ಟೊ ಅಬ್ಬರದ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 34 ಎಸೆತಗಳಲ್ಲಿ 66ರನ್‌ ಸೇರಿಸಿ ತಂಡದ ಗೆಲುವಿನ ಕನಸಿಗೆ ಬಲ ತುಂಬಿತು.

ಈ ಬಾರಿಯ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಾರ್ನರ್‌, ಅಕ್ಷರಶಃ ಗುಡುಗಿದರು. ಅಂಗಳದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಅಭಿಮಾನಿಗಳನ್ನು ರಂಜಿಸಿದರು. 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬೌಂಡರಿಗಳ (10) ಮೂಲಕವೇ 40ರನ್‌ ಸೇರಿಸಿದ ಅವರು ಆರನೇ ಓವರ್‌ನಲ್ಲಿ ದೀಪಕ್‌ ಚಾಹರ್‌ಗೆ ವಿಕೆಟ್‌ ನೀಡಿದರು.

ಇದರ ಬೆನ್ನಲ್ಲೇ ನಾಯಕ ವಿಲಿಯಮ್ಸನ್‌ (3) ಮತ್ತು ವಿಜಯ್‌ ಶಂಕರ್‌ (7) ವಿಕೆಟ್‌ ಉರುಳಿಸಿದ ಅನುಭವಿ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌, ಚೆನ್ನೈ ಪಾಳಯದಲ್ಲಿ ಗೆಲುವಿನ ಕನಸು ಚಿಗುರೊಡೆಯುವಂತೆ ಮಾಡಿದರು. ಆದರೆ ಬೇಸ್ಟೊ ಎದುರಾಳಿಗಳ ಕನಸನ್ನು ಭಗ್ನಗೊಳಿಸಿದರು. 74 ನಿಮಿಷ ಕ್ರೀಸ್‌ನಲ್ಲಿದ್ದ ಅವರು 61ರನ್‌ ಗಳಿಸಿ ಅಜೇಯವಾಗುಳಿದರು. 44 ಎಸೆತಗಳನ್ನು ಆಡಿದ ಜಾನಿ, ತಲಾ ಮೂರು ಸಿಕ್ಸರ್‌ ಮತ್ತು ಬೌಂಡರಿ ಸಿಡಿಸಿ ತವರಿನ ಅಭಿಮಾನಿಗಳ ಪ್ರೀತಿ ಗಳಿಸಿದರು.

ಉತ್ತಮ ಆರಂಭ: ಆಸ್ಟ್ರೇಲಿಯಾದ ಶೇನ್‌ ವಾಟ್ಸನ್‌ ಮತ್ತು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿ ಅವರು ಚೆನ್ನೈಗೆ ಉತ್ತಮ ಆರಂಭ ನೀಡಿದ್ದರು.

ಇವರು 9.5 ಓವರ್‌ಗಳಲ್ಲಿ 79 ರನ್‌ಗಳನ್ನು ಸೇರಿಸಿದರು. ಶಹಬಾಜ್‌ ನದೀಮ್‌, 10ನೇ ಓವರ್‌ನಲ್ಲಿ ವಾಟ್ಸನ್‌ ಅವರನ್ನು ಬೌಲ್ಡ್ ಮಾಡಿ ಆತಿಥೇಯ ಬಳಗದಲ್ಲಿ ಸಂಭ್ರಮ ಮೂಡಿಸಿದರು. ಮೂರು ಎಸೆತಗಳ ಅಂತರದಲ್ಲಿ ಪ್ಲೆಸಿ ಕೂಡ ವಾಪಸಾದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ವಿಜಯ ಶಂಕರ್‌, ಪ್ಲೆಸಿ ವಿಕೆಟ್ ಕಬಳಿಸಿದರು.

ವಾಟ್ಸನ್‌ 29 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 31 ರನ್‌ ಗಳಿಸಿದರೆ, ಪ್ಲೆಸಿ 31 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿಗಳನ್ನು ಒಳಗೊಂಡ 45 ರನ್‌ ಕಲೆ ಹಾಕಿದರು.

ನಾಯಕ ರೈನಾ (13) ಮತ್ತು ಕೇದಾರ್ ಜಾಧವ್‌ (1) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಇವರನ್ನು ರಶೀದ್ ಖಾನ್ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದರು.

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅಂಬಟಿ ರಾಯುಡು ಔಟಾಗದೇ ಉಳಿದರೂ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ. 21 ಎಸೆತಗಳಲ್ಲಿ ಅವರು ಗಳಿಸಿದ್ದು 25 ರನ್‌. ಸ್ಯಾಮ್ ಬಿಲಿಂಗ್ಸ್ ಶೂನ್ಯಕ್ಕೆ ಔಟಾದರು. ರವೀಂ ದ್ರ ಜಡೇಜ (ಔಟಾಗದೆ10) ಕೂಡಾ ಪ್ರೇಕ್ಷಕರನ್ನು ನಿರಾಸೆಗೊಳಿಸಿದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !