ಮಂಗಳವಾರ, ಮೇ 24, 2022
27 °C
ಅಂಧರ ಕ್ರಿಕೆಟ್‌ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ: ಬಾಲಿವುಡ್ ನಟ ಮಿಲಿಂದ್ ಗುಣಾಜಿ ಹೇಳಿಕೆ

ಅನುಕಂಪದಿಂದಲ್ಲ; ಪ್ರತಿಭೆಗೆ ಪ್ರೋತ್ಸಾಹ ನೀಡಿ: ಮಿಲಿಂದ್ ಗುಣಾಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂಧ ಕ್ರಿಕೆಟ್‌ ಆಟಗಾರರನ್ನು ಅವರ ಬಗ್ಗೆ ಅನುಕಂಪ ಅಥವಾ ಸಹಾನುಭೂತಿಯಿಂದ ಬೆಂಬಲಿಸುವುದು ಬೇಡ; ಬದಲಾಗಿ ಪ್ರತಿಭೆ ಮತ್ತು ಸ್ಪರ್ಧಾ ಮನೋಭಾವವನ್ನು ಗಮನಿಸಿ ಪ್ರೋತ್ಸಾಹಿಸಬೇಕು ಎಂದು ಬಾಲಿವುಡ್ ನಟ ಮಿಲಿಂದ್ ಗುಣಾಜಿ ಹೇಳಿದ್ದಾರೆ.

ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎಬಿಐ), ಸಮರ್ಥನಂ ಟ್ರಸ್ಟ್‌ ಹಾಗೂ ಇಂಡಸ್‌ಇಂಡ್‌ ಬ್ಯಾಂಕ್‌ನ ಸಹಯೋಗದಲ್ಲಿ ಶನಿವಾರ ಇಲ್ಲಿ ನಡೆದ ಅಂಧರ ಕ್ರಿಕೆಟ್‌ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‌

ಭಾರತ ತಂಡದ ಆಟಗಾರರಿಗೆ ಸಿಗುವಂತಹ ಹಲವು ಸೌಲಭ್ಯ, ಅವಕಾಶಗಳು ಅಂಧ ಆಟಗಾರರಿಗೂ ದೊರೆಯಬೇಕು. ಏಕದಿನ ಹಾಗೂ ಟ್ವೆಂಟಿ–20 ವಿಶ್ವಕಪ್‌ ಟ್ರೋಫಿಗಳನ್ನು ಗೆದ್ದಿರುವ ಅವರು ಸಮಾನ ಅವಕಾಶಗಳಿಗೆ ಅರ್ಹರು ಎಂದರು.

ಭಾರತ ಅಂಧರ ಕ್ರಿಕೆಟ್‌ ಸಂಸ್ಥೆಯ (ಸಿಎಬಿಐ) ಅಧ್ಯಕ್ಷ ಮತ್ತು ಸಮರ್ಥನಂ ಟ್ರಸ್ಟ್‌ ಸ್ಥಾಪಕ ಮಹಾಂತೇಶ್ ಜಿ.ಕೆ. ಮಾತನಾಡಿ, ಭಾರತದಲ್ಲಿ ಅಂಧರ ಕ್ರಿಕೆಟ್‌ಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ಇನ್ನಷ್ಟು ಪ್ರೋತ್ಸಾಹ ದೊರತರೆ ಆಟಗಾರರ ವೃತ್ತಿಜೀವನ ಮತ್ತಷ್ಟು ಉಜ್ವಲವಾಗಲಿದೆ‘ ಎಂದರು.

ಕ್ರಿಕೆಟ್‌ನಿಂದ  ಅಂಧ ಆಟಗಾರರ ಮೇಲಾದ ಸಾಮಾಜಿಕ ಪರಿಣಾಮಗಳ ಕುರಿತ ಅಧ್ಯಯನ ವರದಿಯನ್ನು ಮಿಲಿಂದ್ ಗುಣಾಜಿ
ಬಿಡುಗಡೆ ಮಾಡಿದರು. ಕ್ರಿಕೆಟ್‌ಅನ್ನು ವೃತ್ತಿಯನ್ನಾಗಿಸಿಕೊಂಡಿದ್ದರಿಂದ ಅಂಧ ಆಟಗಾರರ ಬದುಕಿನಲ್ಲಾದ ಸಕಾರಾತ್ಮಕ ಬದಲಾವಣೆಗಳ ಕುರಿತು ಚರ್ಚೆ ನಡೆದವು.

ಇಂಡಸ್‌ಇಂಡ್‌ ಬ್ಯಾಂಕ್‌ನ ಸಿಎಸ್‌ಆರ್‌ ಮತ್ತು ಕಾರ್ಪೊರೇಟ್ ಸೇವೆಗಳ ಮುಖ್ಯಸ್ಥ ಅದ್ವೈತ್ ಹೆಬ್ಬಾರ್‌, ಮೈಂಡ್‌ ಟ್ರೀನ ಮುಖ್ಯ ಅಧಿಕಾರಿ ಫಣೀಶ್ ರಾವ್‌, ಸಿಐಬಿಐನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ರೀಡಾಪ್ರಶಸ್ತಿ ನೀಡುವಲ್ಲಿ ಕಡೆಗಣನೆ ಅಜಯ್‌ ರೆಡ್ಡಿ ಬೇಸರ

ಪಂದ್ಯ ಗೆದ್ದಾಗ ಭಾರತದ ಧ್ವಜ ಹಿಡಿಯುವುದೇ ಅತ್ಯಂತ ಸಂತಸದ ಕ್ಷಣ. ಪ್ರೋತ್ಸಾಹ ಸಿಕ್ಕರೆ ನಾವು ಇನ್ನಷ್ಟು ಸಾಧನೆ ಮಾಡಲು ಅನುಕೂಲವಾಗಲಿದೆ. ನಮಗೆ ಆಡಲು ಕ್ರೀಡಾಂಗಣಗಳು ಇಲ್ಲ. ಕ್ರೀಡಾ ಪ್ರಶಸ್ತಿ ನೀಡುವಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ನಾಲ್ಕು ಬಾರಿ ವಿಶ್ವಕಪ್ ಗೆದ್ದರೂ ಸರ್ಕಾರದಿಂದ ಉದ್ಯೋಗ ನೀಡುವ ಮಾತಿಲ್ಲ. ಇನ್ನಷ್ಟು ಪ್ರಾಯೋಜಕತ್ವ, ನಗದು ಬಹುಮಾನಗಳ ಕೊಡುಗೆ ಬೇಕು‘ ಎಂದು ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್‌ ಕುಮಾರ್ ರೆಡ್ಡಿ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು