ಭಾನುವಾರ, ಮೇ 31, 2020
27 °C

ಕಾಶ್ಮೀರ ವಿಚಾರವನ್ನು ಬಿಡಿ, ಸೋತಿರುವ ನಿಮ್ಮ ದೇಶದ ಏಳಿಗೆಗಾಗಿ ಶ್ರಮಿಸಿ: ರೈನಾ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಕಿಸ್ತಾನ‌ ಆಕ್ರಮಿತ ಕಾಶ್ಮೀರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇತ್ತೀಚೆಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹೀದ್‌ ಅಫ್ರಿದಿ ಅವರತ್ತ ಭಾರತದ ಹಿರಿಯ ಕ್ರಿಕೆಟಿಗ ಸುರೇಶ್‌ ರೈನಾ ಚಾಟಿ ಬೀಸಿದ್ದಾರೆ. ಕಾಶ್ಮೀರ ವಿಚಾರವನ್ನು ಮರೆತು ಪಾಕಿಸ್ತಾನದ ಏಳಿಗೆಗೆ ಶ್ರಮಿಸುವಂತೆ ಸಲಹೆ ನೀಡಿದ್ದಾರೆ.

ಈಚೆಗೆ ಪಾಕ್ ಆಕ್ರಮಿತ ಕಾಶ್ಮೀರದ ಗ್ರಾಮವೊಂದಕ್ಕೆ ತೆರಳಿದ್ದ ಆಫ್ರಿದಿಯು, ‘ಇದೊಂದು ಸುಂದರ ಗ್ರಾಮ. ಇಲ್ಲಿಗೆ ಬಹಳ ದಿನಗಳಿಂದ ಬರಬೇಕೆಂಬ ಆಸೆಯಿತ್ತು. ಈಗ ಈಡೇರಿದೆ. ಈಗ ಜಗತ್ತನ್ನು ಮಹಾಮಾರಿ ಕೊರೊನಾ ಆವರಿಸಿಕೊಂಡಿದೆ. ಆದರೆ ಅದಕ್ಕಿಂತ ಭಯಂಕರ ರೋಗವು ಇನ್ನೊಂದಿದೆ. ಅದು ಭಾರತದ ಪ್ರಧಾನಿ ಮೋದಿಯವರ ಮನೋಭಾವ. ಈ ಸ್ಥಳದಿಂದ ಎರಡು ಕಿಲೊಮೀಟರ್‌ ದೂರದ ಕಾಶ್ಮೀರದಲ್ಲಿ ನಮ್ಮ ಬಂಧು, ಬಾಂಧವರಿಗೆ ಮೋದಿ ಬಹಳ ತೊಂದರೆ ಕೊಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರು ಈ ಬಗ್ಗೆ ಇಲ್ಲಿಯೂ ಮತ್ತು ನಾಳೆ ದೇವರ ಮುಂದೆ ಉತ್ತರ ಕೊಡಲೇಬೇಕು‘ ಎಂದು ಹೇಳಿದ್ದರು.

ಈ ಹೇಳಿಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ರೈನಾ, ‘ಗೋಶ್‌! ತಾನು ಪ್ರಸ್ತುತವಾಗಿರಲು ವ್ಯಕ್ತಿಯೊಬ್ಬ ಏನೆಲ್ಲಾ ಮಾಡಬೇಕು! ಅದರಲ್ಲೂ ಭಿಕ್ಷೆಯ ಮೇಲೆ ಬದುಕುತ್ತಿರುವ ರಾಷ್ಟ್ರಕ್ಕಾಗಿ. ಕಾಶ್ಮೀರವನ್ನು ಮುಕ್ತವಾಗಿರಲು ಬಿಡಿ. ವೈಫಲ್ಯ ಕಂಡಿರುವ ನಿಮ್ಮ ದೇಶಕ್ಕೆ ಉತ್ತಮವಾದದ್ದೇನಾದರೂ ಮಾಡಿ. ನಾನು ಹೆಮ್ಮೆಯ ಕಾಶ್ಮೀರಿ ಮತ್ತು ಅದು ಯಾವಾಗಲೂ ಭಾರತದ ಅಳಿಸಲಾಗದ ಭಾಗವಾಗಿ ಉಳಿಯುತ್ತದೆ. ಜೈ ಹಿಂದ್!’ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಅಫ್ರಿದಿ ವಿರುದ್ಧ ಗುಡುಗಿದ್ದ ದೆಹಲಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ‘ಪಾಕಿಸ್ತಾನ ಸೇನೆಯಲ್ಲಿ ಏಳು ಲಕ್ಷ ಸೈನಿಕರು ಇದ್ದಾರೆ. ಅವರಿಗೆ 20 ಕೋಟಿ ಜನರ ಬೆಂಬಲವಿದೆ ಎಂದು 16ರ ಬಾಲಕ  ಆಫ್ರಿದಿ ಹೇಳಿದ್ದಾನೆ. ಆದರೂ ಪಾಕ್ 70 ವರ್ಷದಿಂದ ಕಾಶ್ಮೀರಕ್ಕಾಗಿ ಭಿಕ್ಷೆ ಬೇಡುತ್ತಿದೆ.  ಆಫ್ರಿದಿ, ಇಮ್ರಾನ್ ಮತ್ತು ಬಜ್ವಾ ಜೋಕರ್‌ಗಳಾಗಿದ್ದಾರೆ. ಪಾಕಿಸ್ತಾನದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಭಾರತ ಮತ್ತು ನಮ್ಮ ಪ್ರಧಾನಿಯ ವಿರುದ್ಧ ಸದಾ ವಿಷ ಕಕ್ಕುತ್ತಲೇ ಇರುತ್ತಾರೆ. ಆದರೆ ‘ಜಡ್ಜ್‌ಮೆಂಟ್‌ ಡೇ’ ವರೆಗೂ ಕಾಶ್ಮೀರ ನಿಮಗೆ ಸಿಗುವುದಿಲ್ಲ. ಬಾಂಗ್ಲಾದೇಶ ನೆನಪಿದೆಯಲ್ಲವೇ?’ ಎಂದು ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು