ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T-20 WC: IND vs ZIM- ಸೆಮಿಫೈನಲ್‌ ಪ್ರವೇಶದತ್ತ ಭಾರತ ಚಿತ್ತ

ಜಿಂಬಾಬ್ವೆ ಎದುರು ಹಣಾಹಣಿ ಇಂದು; ರೋಹಿತ್–ರಾಹುಲ್ ಉಪಯುಕ್ತ ಜೊತೆಯಾಟದ ನಿರೀಕ್ಷೆ
Last Updated 5 ನವೆಂಬರ್ 2022, 19:48 IST
ಅಕ್ಷರ ಗಾತ್ರ

ಮೆಲ್ಬರ್ನ್: ಇನ್ನೊಂದು ಪಂದ್ಯ ಗೆದ್ದರೆ ಭಾರತ ತಂಡವು ಈ ಸಲದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವುದು ಖಚಿತ.

ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿ ನಡೆಯಲಿರುವ ಸೂಪರ್ 12ರ ಎರಡನೇ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಜಿಂಬಾಬ್ವೆಯನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ನಾಲ್ಕರ ಘಟ್ಟದ ಪ್ರವೇಶ ಸರಾಗ. ಇಲ್ಲದಿದ್ದರೆ ಆತಂಕ. ಏಕೆಂದರೆ ಪಾಕಿಸ್ತಾನ ತಂಡವು ಈಚೆಗೆ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿರುವುದರಿಂದ ಭಾರತ ತಂಡವು ಸೋತರೆ ಕೊನೆಯ ಹಂತದ ಲೆಕ್ಕಾಚಾರಗಳನ್ನು ಕಾಯಬೇಕಾಗುತ್ತದೆ.

ಸೆಮಿ ಹಾದಿಯಿಂದ ಈಗಾಗಲೇ ಹೊರಬಿದ್ದಿರುವ ಜಿಂಬಾಬ್ವೆ ತಂಡವನ್ನು ರೋಹಿತ್ ಬಳಗವು ಸುಲಭ ಗುರಿಯೆಂದು ಪರಿಗಣಿಸುವ ಮನಸ್ಥಿತಿಯಲ್ಲಿ ಇಲ್ಲ. ಯಾವುದೇ ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಎದುರಾಳಿಯನ್ನು ಗೌರವಪೂರ್ವಕವಾಗಿ ನೋಡುವುದು ಕ್ರೀಡಾಸ್ಫೂರ್ತಿ. ಇನ್ನೊಂದೆಡೆ ಪ್ರತಿಸ್ಪರ್ಧಿಯನ್ನು ಹಗುರವಾಗಿ ಪರಿಗಣಿಸಿ ಅತಿಅತ್ಮವಿಶ್ವಾಸದಿಂದ ಕಣಕ್ಕಿಳಿಯುವುದು ಕೂಡ ತಿರುಗುಬಾಣವಾಗುವ ಸಾಧ್ಯತೆ ಇರುತ್ತದೆ.

ಜಿಂಬಾಬ್ವೆ ತಂಡವು ಈ ಹಂತದವರೆಗೂ ಬರಲು ಬಹಳ ಸುದೀರ್ಘ ಹಾದಿಯನ್ನು ಸವೆಸಿದೆ. ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 12ರ ಹಂತಕ್ಕೆ ಪ್ರವೇಶಿಸಿತ್ತು. ಪರ್ತ್‌ನಲ್ಲಿ ಪಾಕಿಸ್ತಾನ ವಿರುದ್ಧ ಒಂದು ರನ್ ಅಂತರದ ರೋಚಕ ಜಯ ಸಾಧಿಸಿತ್ತು. ಬಾಂಗ್ಲಾ ಹಾಗೂ ನೆದರ್ಲೆಂಡ್ಸ್ ತಂಡಗಳ ಎದುರು ವಿರೋಚಿತ ಹೋರಾಟ ಮಾಡಿತ್ತು. ಕ್ರೇಗ್ ಇರ್ವಿನ್ ನಾಯಕತ್ವದ ಜಿಂಬಾಬ್ವೆಯ ಹೋರಾಟದ ಪರಿಯನ್ನು ರೋಹಿತ್ ಬಳಗವು ಗಂಭೀರವಾಗಿಯೇ ಪರಿಗಣಿಸುವುದು ಖಚಿತ. ಜಿಂಬಾಬ್ವೆಗೆ ಸೋಲಿನಿಂದ ಕಳೆದುಕೊಳ್ಳುವುದೇನೂ ಇಲ್ಲ. ಆದರೆ, ಬಲಿಷ್ಠ ತಂಡವನ್ನು ಮಣಿಸಿದ ಸಂತೃಪ್ತಿ ಅಮೂಲ್ಯವೇ ಅಲ್ಲವೇ?

ಈ ಐತಿಹಾಸಿಕ ತಾಣದಲ್ಲಿ ಜಿಂಬಾಬ್ವೆಯು ಇದುವರೆಗೆ ಕೇವಲ ಎರಡು ಪಂದ್ಯಗಳನ್ನು ಆಡಿದೆ. ಆದರೆ ಭಾನುವಾರ ಭಾರತ ತಂಡವನ್ನು ಬೆಂಬಲಿಸುವ ಸುಮಾರು 80 ಸಾವಿರ ಪ್ರೇಕ್ಷಕರು ಸೇರಲಿರುವ ಎಂಸಿಜಿಯಲ್ಲಿ ಜಿಂಬಾಬ್ವೆಗೆ ವಿಭಿನ್ನ ಅನುಭವ ಸಿಗುವುದು ಖಚಿತ.

ಇದಲ್ಲದೇ ಭಾರತ ಮತ್ತು ಜಿಂಬಾಬ್ವೆ ತಂಡಗಳು ಈ ಹಿಂದೆ ಒಟ್ಟಾರೆ ಏಳು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತವು 5–2 ಗೆಲುವಿನ ಮುನ್ನಡೆ ಹೊಂದಿದೆ. ಅಲ್ಲದೇ ಈ ಎಲ್ಲ ಪಂದ್ಯಗಳೂ ಹರಾರೆಯಲ್ಲಿಯೇ ನಡೆದಿವೆ. 2016ರ ನಂತರ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಈಗಲೇ.

ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಭಾರತ ಈ ಟೂರ್ನಿಯಲ್ಲಿ ಕೆಲವು ಸ್ಮರಣೀಯ ಸಾಧನೆಗಳನ್ನು ಮಾಡಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ವಿರುದ್ಧ ಕಠಿಣ ಪರಿಸ್ಥಿತಿಯನ್ನು ಎದುರಿಸಿಯೂ ಜಯಿಸಿದೆ. ನಾಯಕ ರೋಹಿತ್ ಹಾಗೂ ಉಪನಾಯಕ ಕೆ.ಎಲ್. ರಾಹುಲ್ ತಲಾ ಒಂದು ಅರ್ಧಶತಕ ಗಳಿಸಿದ್ದಾರೆ. ಆದರೆ, ಮೊದಲ ವಿಕೆಟ್‌ಗೆ ದೊಡ್ಡ ಜೊತೆಯಾಟ ಇವರಿಂದ ಇನ್ನೂ ಮೂಡಿಬಂದಿಲ್ಲ. ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಅಥವಾ ಬೆನ್ನಟ್ಟಲು ಇವರಿಬ್ಬರ ಜೊತೆಯಾಟ ಪ್ರಮುಖವಾಗಿದೆ. ಇದುವರೆಗೆ ಅವರ ಜೊತೆಯಾಟದಲ್ಲಿ ದಾಖಲೆಯಾದ ಮೊತ್ತ 23 ರನ್‌ಗಳಷ್ಟೇ!

ಜಿಂಬಾಬ್ವೆಯ ಬೌಲರ್‌ಗಳಿಗೆ ಅನುಭವ ಹಾಗೂ ಕೌಶಲಗಳ ಕೊರತೆ ಇದೆ. ಸಿಕಂದರ್ ರಝಾ ಅವರ ಆಲ್‌ರೌಂಡ್ ಆಟದ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ. ಎರಡು ವಾರಗಳ ಹಿಂದಷ್ಟೇ ಇದೇ ಅಂಗಳದಲ್ಲಿ ಭಾರತ ತಂಡವು ಪಾಕಿಸ್ತಾನದ ಶ್ರೇಷ್ಠ ಬೌಲಿಂಗ್ ಪಡೆಗೆ ಬಿಸಿ ಮುಟ್ಟಿಸಿತ್ತು. ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಸೂರ್ಯಕುಮಾರ್ ಯಾದವ್ ಕೂಡ ಅಮೋಘ ಲಯದಲ್ಲಿರುವುದರಿಂದ ಜಿಂಬಾಬ್ವೆ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಆರ್ಷದೀಪ್ ಸಿಂಗ್, ದೀಪಕ್ ಹೂಡಾ, ರಿಷಭ್ ಪಂತ್.‌

ಜಿಂಬಾಬ್ವೆ: ಕ್ರೇಗ್ ಇರ್ವಿನ್ (ನಾಯಕ), ರೆಗಿಸ್ ಚಕಾಬ್ವಾ (ವಿಕೆಟ್‌ಕೀಪರ್), ವೆಸ್ಲಿ ಮದೆವೆರೆ, ಸೀಣ್ ವಿಲಿಯಮ್ಸ್, ಸಿಕಂದರ್ ರಝಾ, ಮಿಲ್ಟನ್ ಶುಂಭಾ, ರಿಯಾನ್ ಬರ್ಲ್, ಲೂಕ್ ಜಾಂಗ್ವೆ, ತೆಂದೈ ಚತಾರಾ, ರಿಚರ್ಡ್ ಎನ್‌ಗರವೇ, ಬ್ಲೆಸಿಂಗ್ ಮುಜರಾಬಾನಿ.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT