ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ನಮೀಬಿಯಾ ವಿರುದ್ಧ ಅಫ್ಗನ್‌ಗೆ 62 ರನ್ ಗೆಲುವು

Last Updated 31 ಅಕ್ಟೋಬರ್ 2021, 13:51 IST
ಅಕ್ಷರ ಗಾತ್ರ

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಅಫ್ಗಾನಿಸ್ತಾನ 62 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ವಿದಾಯದ ಪಂದ್ಯ ಆಡಿದ ಮಾಜಿ ನಾಯಕ ಅಸ್ಗರ್ ಅಫ್ಗನ್‌ಗೆ ವಿಜಯದ ಬೀಳ್ಕೊಡುಗೆಯನ್ನು ಸಲ್ಲಿಸಿದೆ.

ಇದರೊಂದಿಗೆ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವಿನೊಂದಿಗೆ ನಾಲ್ಕು ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅತ್ತ ಸ್ಕಾಟ್ಲೆಂಡ್ ವಿರುದ್ಧ ಗೆಲುವಿನ ಶುಭಾರಂಭ ಮಾಡಿಕೊಂಡಿದ್ದ ನಮೀಬಿಯಾ ಸೂಪರ್-12 ಹಂತದಲ್ಲಿ ಮೊದಲ ಸೋಲಿಗೆ ಶರಣಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನಿಸ್ತಾನ ಐದು ವಿಕೆಟ್ ನಷ್ಟಕ್ಕೆ 160 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಬಳಿಕ ಅಫ್ಗನ್ ಬೌಲರ್‌ಗಳ ಸಾಂಘಿಕ ದಾಳಿಗೆ ತತ್ತರಿಸಿದ ನಮೀಬಿಯಾ 98 ರನ್ ಗಳಿಸಲಷ್ಟೇ ಸಮರ್ಥವಾಯಿತು.

ಮೈಕಲ್ ವಾನ್ ಲಿಂಗೆನ್ (11), ನಿಕೋಲ್ ಲೋಫಿ ಈಟನ್ (14), ನಾಯಕ ಗೆರಾರ್ಡ್‌ ಎರಾಸ್ಮಸ್‌ (12) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗಲಿಲ್ಲ. ಕೊನೆಯ ಹಂತದಲ್ಲಿ ಡೇವಿಡ್ ವೀಸ್ (26) ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಅಫ್ಗಾನಿಸ್ತಾನ ಪರ ನವೀನ್ ಉಲ್ ಹಕ್ ಹಾಗೂ ಹಮೀದ್ ಹಸನ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು.

ಅಫ್ಗನ್‌ಗೆ ಆರಂಭಿಕರಾದ ಹಜರತ್ ಉಲ್ಲ ಜಜಾಯ್ (33) ಹಾಗೂ ವಿಕೆಟ್ ಕೀಪರ್ ಮೊಹಮ್ಮದ್ ಶಹಜಾದ್ (45) ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು 40 ಎಸೆತಗಳಲ್ಲಿ 53 ರನ್‌ಗಳ ಜೊತೆಯಾಟ ಕಟ್ಟಿದರು.

ಬಳಿಕ ಅಸ್ಗರ್ ಅಫ್ಗನ್ (31) ಹಾಗೂ ನಾಯಕ ಮೊಮ್ಮದ್ ನಬಿ (32*) ಬಿರುಸಿನ ಆಟವಾಡುವ ಮೂಲಕ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು. 17 ಎಸೆತಗಳನ್ನು ಎದುರಿಸಿದ ನಬಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 32 ರನ್ ಗಳಿಸಿ ಔಟಾಗದೆ ಉಳಿದರು.

ವಿದಾಯದ ಪಂದ್ಯ ಆಡಿದ ಅಸ್ಗರ್ 23 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಂದ 31 ರನ್ ಗಳಿಸಿದರು. ನಮೀಬಿಯಾ ಪರ ನಿಕೋಲ್ ಲೋಫಿ ಈಟನ್ ಹಾಗೂ ರುಬೆನ್ ಟ್ರಂಪಲ್‌‍ಮ್ಯಾನ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT