ಭಾನುವಾರ, ಮಾರ್ಚ್ 26, 2023
24 °C
ಸತತ ಸೋಲಿನಿಂದ ಕಂಗೆಟ್ಟ ವಿರಾಟ್ ಕೊಹ್ಲಿ ಬಳಗದ ಸೆಮಿಫೈನಲ್ ಹಾದಿ ಬಹುತೇಕ ಬಂದ್‌

ಭಾರತದ ಸೋಲಿಗೆ ಕಾರಣಗಳ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Virat Kohli AFP Photo

ನವದೆಹಲಿ (ಪಿಟಿಐ): ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಸೆಮಿಫೈನಲ್ ಕನಸು ಬಹುತೇಕ ಕಮರಿಹೋಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮಣಿದ ತಂಡಕ್ಕೆ ಎರಡನೇ ಪಂದ್ಯದಲ್ಲೂ ಚೇತರಿಸಿಕೊಳ್ಳಲು ಆಗಲಿಲ್ಲ.

ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ತಂಡ ಎಂಟು ವಿಕೆಟ್‌ಗಳಿಂದ ಸೋತ ನಂತರ ತಂಡದ ಈ ಸ್ಥಿತಿಗೆ ಕಾರಣದ ಹುಡುಕಾಟ ಆರಂಭವಾಗಿದೆ.‌ ಸತತವಾಗಿ ಬಯೊಬಬಲ್‌ನಲ್ಲಿದ್ದು ಮಾನಸಿಕವಾಗಿ ಬಳಲಿರುವ ಆಟಗಾರರು, ತಂಡದ ಆಯ್ಕೆಯಲ್ಲಿ ಆಗಿರುವ ಲೋಪ ಮತ್ತು ನಾಯಕನ ವೈಫಲ್ಯವೇ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಈ ವರ್ಷ ತಂಡದ ವೈಫಲ್ಯಕ್ಕೆ ನಿಖರ ಕಾರಣವೇನೆಂದು ಹೇಳಲಾಗದು. ಆದರೆ ಟ್ವೆಂಟಿ–20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಶಹೀನ್ ಶಾ ಅಫ್ರಿದಿ ಅವರ ಮೊದಲ ಎರಡು ಓವರ್‌ಗಳು ಭಾರತ ತಂಡದ ಹಾದಿಯನ್ನೇ ಬದಲಿಸಿದ್ದವು. ಆ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ತಂಡಕ್ಕೆ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲೂ ಲಯ ಕಂಡುಕೊಳ್ಳಲು ಆಗಲಿಲ್ಲ. ಈ ಪಂದ್ಯದ ನಂತರ ‘ತಂಡದಲ್ಲಿ ಧೈರ್ಯ ಇಲ್ಲ’ ಎಂದು ನಾಯಕ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ.

‘ಭಾರತದ ಸೋಲು ನನಗೂ ಆಘಾತ ತಂದಿದೆ. ತಂಡ ಸೋತಿದ್ದಕ್ಕಲ್ಲ, ಸೋತ ರೀತಿಗೆ ಅಚ್ಚರಿಯಾಗಿದೆ. ನೆರವು ಸಿಬ್ಬಂದಿಯ ಸಲಹೆಗಳನ್ನು ಸರಿಯಾಗಿ ಜಾರಿಗೆ ತರಲು ಆಟಗಾರರು ವಿಫಲರಾಗುತ್ತಿದ್ದಾರೆ’ ಎಂದು ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ವಿ.ವಿ.ಎಸ್‌ ಲಕ್ಷ್ಮಣ್‌ ಹೇಳಿದ್ದರು. 

ಟ್ವೆಂಟಿ–20 ತಂಡದ ನಾಯಕತ್ವದ ಕೊನೆಯ ಹಂತದಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯ ತೋರಲು ಆಗಲಿಲ್ಲ. ಐಪಿಎಲ್‌ನಲ್ಲಿ ಕೂಡ ತಾವು ಮುನ್ನಡೆಸುವ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಆಗಲಿಲ್ಲ. ದ್ವಿಪಕ್ಷೀಯ ಸರಣಿಗಳಲ್ಲಿ ಮಾತ್ರ ಯಶಸ್ಸು ಗಳಿಸುತ್ತಿದ್ದಾರೆ.

ವಿಶ್ವಕಪ್‌ ಟೂರ್ನಿಯಲ್ಲಿ ಅಂತಿಮ 11ರ ಆಯ್ಕೆಯಲ್ಲೂ ತಂಡ ಎಡವುತ್ತಿದೆ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಇಶಾನ್ ಕಿಶನ್ ಅವರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಿದ್ದಕ್ಕೆ ಟೀಕೆಗಳು ಎದ್ದಿವೆ.

ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಕಾರ ಸುನಿಲ್ ಗಾವಸ್ಕರ್ ಅವರೇ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವುದು ಕೂಡ ಟೀಕೆಗೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು