ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | ಡಿಕಾಕ್ ಅರ್ಧಶತಕ, ರಬಾಡ ಮಿಂಚು; ದಕ್ಷಿಣ ಆಫ್ರಿಕಾಕ್ಕೆ ಮಣಿದ ಅಮೆರಿಕ

Published 19 ಜೂನ್ 2024, 14:04 IST
Last Updated 19 ಜೂನ್ 2024, 14:04 IST
ಅಕ್ಷರ ಗಾತ್ರ

ನಾರ್ತ್ ಸೌಂಡ್‌ (ಆ್ಯಂಟಿಗಾ): ಕಗಿಸೊ ರಬಾಡ (18ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ಮತ್ತು ಕ್ವಿಂಟನ್‌ ಡಿ ಕಾಕ್ ಅವರ ಬಿರುಸಿನ ಅರ್ಧ ಶತಕದ (74, 40 ಎಸೆತ) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬುಧವಾರ ಟಿ20 ವಿಶ್ವಕಪ್‌ ಸೂಪರ್‌ ಎಂಟರ ಹಂತದ ಪಂದ್ಯದಲ್ಲಿ ಅಮೆರಿಕ ತಂಡವನ್ನು 18 ರನ್‌ಗಳಿಂದ ಮಣಿಸಿತು.

ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಡಿ ಕಾಕ್ ಅಮೆರಿಕ ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿ ಈ ಟೂರ್ನಿಯಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿದರು. ದಕ್ಷಿಣ ಆಫ್ರಿಕಾ 20 ಓವರುಗಳಲ್ಲಿ 4 ವಿಕೆಟ್‌ಗೆ 194 ರನ್ ಹೊಡೆಯಿತು.

ಈ ಬೃಹತ್‌ ಗುರಿಯನ್ನು ಬೆನ್ನಟ್ಟಿದ ಅಮೆರಿಕ ನಿರೀಕ್ಷೆಗೆ ಮೀರಿದ ಹೋರಾಟ ತೋರಿತು. ಆ ಮೂಲಕ ಸುಲಭವಾಗಿ ಮಣಿಯುವ ತಂಡ ತಾನಲ್ಲ ಎಂಬುದನ್ನು ತೋರಿಸಿಕೊಟ್ಟಿತು.ತಂಡದ ಪರ ಆರಂಭಿಕ ಆಟಗಾರ ಆ್ಯಂಡ್ರೀಸ್‌ ಗೌಸ್‌ (ಔಟಾಗದೇ 80; 47ಎ, 4x5, 6x5) ಏಕಾಂಗಿ ಹೋರಾಟ ನಡೆಸಿದರು. ಅವರು ಸ್ಟೀವನ್‌ ಟೇಲರ್‌ (24; 14ಎ) ಅವರೊಂದಿಗೆ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ತಂಡವು ಕುಸಿತಕ್ಕೆ ಒಳಗಾಯಿತು. 23 ರನ್‌ಗಳ ಅಂತರದಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳು ಪತನವಾದವು. ‌

ಆದರೆ, ಗೌಸ್‌ ಮತ್ತು ಹರ್ಮೀತ್‌ ಸಿಂಗ್‌ (38; 22ಎ) ಆರನೇ ವಿಕೆಟ್‌ಗೆ 91 ರನ್‌ (43ಎ) ಸೇರಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು. ಕೊನೆಯ ಮೂರು ಓವರ್‌ಗಳಲ್ಲಿ ಗೆಲುವಿಗೆ 50 ರನ್‌ ಬೇಕಿತ್ತು. ಈ ಹಂತದಲ್ಲಿ ತಂಬ್ರೆಜ್‌ ಶಮ್ಸಿ ಅವರು ಹಾಕಿದ 18ನೇ ಓವರ್‌ನಲ್ಲಿ ಗೌಸ್‌ ಮೂರು ಸಿಕ್ಸರ್‌ಗಳೊಂದಿಗೆ 22 ರನ್‌ ಸೂರೆಗೈದರು. ಆದರೆ, 19ನೇ ಓವರ್‌ನಲ್ಲಿ ರಬಾಡ ದಾಳಿಗಿಳಿದು ಮೊದಲ ಎಸೆತದಲ್ಲೇ ಹರ್ಮೀತ್‌ ಅವರ ವಿಕೆಟ್‌ ಪಡೆದರು. ಅಲ್ಲದೆ, ಓವರ್‌ನಲ್ಲಿ ಕೇವಲ 2 ರನ್ ನೀಡಿ, ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಅಮೆರಿಕ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಮರ್ಕರಂ ಸೊಗಸಾದ ಆಟವಾಡಿ 46 ರನ್‌ (32ಎ, 4x4, 6x1) ಗಳಿಸಿದರು. ಡಿಕಾಕ್ ಜೊತೆ ಎರಡನೇ ವಿಕೆಟ್‌ಗೆ ಅವರು 57 ಎಸೆತಗಳಲ್ಲಿ 110 ರನ್ ಸೇರಿಸಿದರು. ಲೀಗ್‌ ಹಂತದಲ್ಲಿ ವಿಫಲರಾಗಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಇಲ್ಲಿ ಸುಧಾರಿತ ಆಟವಾಡಿದರು. ಹೆನ್ರಿಚ್‌ ಕ್ಲಾಸೆನ್ (ಔಟಾಗದೇ 36) ಮತ್ತು ಟ್ರಿಸ್ಟನ್ ಸ್ಟಬ್ಸ್‌ (ಔಟಾಗದೇ 20) ಮುರಿಯದ 5ನೇ ವಿಕೆಟ್‌ಗೆ ಕೊನೆಯ ಐದು ಓವರ್‌ಗಳಲ್ಲಿ 53 ರನ್ ಸೇರಿಸಿದರು. 

ಕ್ವಿಂಟನ್ ಆಕ್ರಮಣಕಾರಿಯಾಗಿದ್ದು, ಜಸದೀಪ್ ಸಿಂಗ್ ಅವರ ಮೊದಲ ಓವರ್‌ನಲ್ಲೇ 28 ರನ್ ಬಾಚಿ ತಂಡದ ರನ್‌ ವೇಗ ಹೆಚ್ಚಿಸಿದರು. ಇದರಲ್ಲಿ ಮೂರು ಭರ್ಜರಿ ಸಿಕ್ಸರ್‌ಗಳ ಜೊತೆ ಎರಡು ಬೌಂಡರಿಗಳೂ ಇದ್ದವು. ಪವರ್‌ ಪ್ಲೇ ವೇಳೆಗೆ ತಂಡ (1 ವಿಕೆಟ್‌ಗೆ) 64 ರನ್ ಗಳಿಸಿತ್ತು. 12ನೇ ಓವರ್‌ನಲ್ಲಿ ಡಿ ಕಾಕ್‌, ಹರ್ಮೀತ್ ಸಿಂಗ್ ಅವರ ಫುಲ್‌ಟಾಸ್‌ ಎಸೆತವನ್ನು ಬೌಂಡರಿ ದಾಟಿಸಲು ಹೋಗಿ ಡೀಪ್‌ ಮಿಡ್‌ ವಿಕೆಟ್‌ನಲ್ಲಿದ್ದ ಶಯನ್ ಜಹಾಂಗಿರ್‌ಗೆ ಕ್ಯಾಚಿತ್ತರು. ಆಗ ತಂಡದ ಮೊತ್ತ 2 ವಿಕೆಟ್‌ಗೆ 126. ನಂತರದಲ್ಲಿ ಕ್ಲಾಸೆನ್ ಮತ್ತು ಸ್ಟಬ್ಸ್‌ ಅಮೆರಿಕನ್ನರ ಮೇಲುಗೈ ಆಸೆಯನ್ನು ಭಗ್ನಗೊಳಿಸಿದರು.

ಸ್ಕೋರುಗಳು: ದಕ್ಷಿಣ ಆಫ್ರಿಕಾ: 20 ಓವರುಗಳಲ್ಲಿ 4 ವಿಕೆಟ್‌ಗೆ 194 (ಕ್ವಿಂಟನ್ ಡಿ ಕಾಕ್ 74, ಏಡನ್ ಮರ್ಕರಂ 46, ಹೆನ್ರಿಚ್‌ ಕ್ಲಾಸೆನ್‌ ಔಟಾಗದೇ 36, ಟ್ರಿಸ್ಟನ್ ಸ್ಟಬ್ಸ್‌ ಔಟಾಗದೇ 20; ಸೌರಭ್ ನೇತ್ರಾವಳ್ಕರ್ 21ಕ್ಕೆ2, ಹರ್ಮೀತ್ ಸಿಂಗ್ 24ಕ್ಕೆ2).

ಅಮೆರಿಕ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 176 (ಸ್ಟೀವನ್‌ ಟೇಲರ್‌ 24, ಆ್ಯಂಡ್ರೀಸ್‌ ಗೌಸ್‌ ಔಟಾಗದೇ 80, ಹರ್ಮೀತ್‌ ಸಿಂಗ್‌ 38; ಕಗಿಸೊ ರಬಾಡ 48ಕ್ಕೆ 3, ಕೇಶವ ಮಹಾರಾಜ್‌ 24ಕ್ಕೆ1). ಪಂದ್ಯದ ಆಟಗಾರ: ಕ್ವಿಂಟನ್‌ ಡಿ ಕಾಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT