ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ಬಾಂಗ್ಲಾ ವಿರುದ್ಧ 8 ವಿಕೆಟ್‌ಗಳ ಜಯ- ಸೆಮಿಯತ್ತ ಆಸ್ಟ್ರೇಲಿಯಾ

ಸ್ಟಾರ್ಕ್‌, ಹ್ಯಾಜಲ್‌ವುಡ್‌ಗೆ ತಲಾ 2 ವಿಕೆಟ್‌; ವಾರ್ನರ್–ಫಿಂಚ್‌ 58 ರನ್‌ ಜೊತೆಯಾಟ
Last Updated 4 ನವೆಂಬರ್ 2021, 13:20 IST
ಅಕ್ಷರ ಗಾತ್ರ

ದುಬೈ: ಮಿಷೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್‌ವುಡ್ ಜೋಡಿಯ ಬಿರುಗಾಳಿ ವೇಗದ ಬೆನ್ನಲ್ಲೇ ಆ್ಯಡಂ ಜಂಪಾ ಅವರ ಸ್ಪಿನ್ ಸುಳಿಯಲ್ಲಿ ಬಿದ್ದ ಬಾಂಗ್ಲಾದೇಶ ಸಾಧಾರಣ ಮೊತ್ತಕ್ಕೆ ಉರುಳಿತು. ಇದರ ಪರಿಣಾಮ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳ ಜಯ ದಾಖಲಿಸಿತು.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಡೆದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಮೊದಲ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಆಸ್ಟ್ರೇಲಿಯಾ 73 ರನ್‌ಗಳಿಗೆ ಆಲೌಟ್ ಮಾಡಿತು. ಸುಲಭ ಗುರಿ ಬೆನ್ನತ್ತಿದ ತಂಡ 6.2 ಓವರ್‌ಗಳಲ್ಲಿ ದಡ ಸೇರಿತು. ಈ ಮೂಲಕ ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡಿತು.

ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ನಾಯಕ ಆ್ಯರನ್ ಫಿಂಚ್ ಐದು ಓವರ್‌ಗಳಲ್ಲಿ 58 ರನ್ ಕಲೆ ಹಾಕಿ ತಂಡಕ್ಕೆ 10 ವಿಕೆಟ್‌ಗಳ ಜಯ ತಂದುಕೊಡುವ ಭರವಸೆ ಮೂಡಿಸಿದ್ದರು. ಆದರೆ ತಸ್ಕಿನ್ ಅಹಮ್ಮದ್ ಮತ್ತು ಷೊರಿಫುಲ್ ಇಸ್ಲಾಂ ತಲಾ ಒಂದೊಂದು ವಿಕೆಟ್ ಉರುಳಿಸಿ ತಂಡಕ್ಕೆ ಪೆಟ್ಟು ನೀಡಿದರು. ಮಿಷೆಲ್ ಮಾರ್ಷ್ ಐದು ಎಸೆತಗಳಲ್ಲಿ 16 ರನ್ ಗಳಿಸಿ ಮಿಂಚಿದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗ ಮತ್ತು ಸ್ಪಿನ್ ದಾಳಿಗೆ ಬಾಂಗ್ಲಾದೇಶ ಬೆದರಿತು. ತಂಡದ ಮೊತ್ತ ಒಂದು ರನ್ ಆಗಿದ್ದಾಗ ಲಿಟನ್ ದಾಸ್ ಔಟಾದರು. ಮಿಷೆಲ್ ಸ್ಟಾರ್ಕ್‌ ಅವರ ಎಸೆತ ಸ್ಟಾರ್ಕ್ ಬ್ಯಾಟಿನ ಅಂಚಿಗೆ ತಾಗಿ ವಿಕೆಟ್ ಉರುಳಿಸಿತು. ಆರು ರನ್ ಗಳಿಸುವಷ್ಟರಲ್ಲಿ ಸೌಮ್ಯ ಸರ್ಕಾರ್ ಕೂಡ ವಾಪಸಾದರು. ಹ್ಯಾಜಲ್‌ವುಡ್ ಎಸೆತವನ್ನು ಸ್ಟಂಪ್ ಮೇಲೆ ಎಳೆದುಕೊಂಡು ಸೌಮ್ಯ ಔಟಾದರು. ಆಗ್ರ ಕ್ರಮಾಂಕದ ಐವರ ಪೈಕಿ ನಾಲ್ವರು ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್‌ಗೆ ಬಲಿಯಾದರು. ಒಂದು ವಿಕೆಟ್ ಮ್ಯಾಕ್ಸ್‌ವೆಲ್ ಉರುಳಿಸಿದರು.

ಕೊನೆಯ ಐವರು ಬ್ಯಾಟರ್‌ಗಳು ಜಂಪಾ ದಾಳಿಗೆ ಬಲಿಯಾದರು. 33 ಎಸೆತಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ ಮಹಮ್ಮದುಲ್ಲ ಮತ್ತು ಶಮೀಮ್ ಹೊಸೇನ್ ಮೇಲೆ ನಿರೀಕ್ಷೆ ಇರಿಸಿಕೊಂಡಿತ್ತು. ಇಬ್ಬರೂ ಬೌಂಡರಿಗಳನ್ನು ಸಿಡಿಸಿ ಭರವಸೆ ಮೂಡಿಸಿದರು. ಜಂಪಾ ಎಸೆತವನ್ನು ಶಮೀಮ್ ಲಾಫ್ಟ್ ಮಾಡಿ ಸಿಕ್ಸರ್‌ಗೆ ಎತ್ತಿದರು. ಆದರೆ ತಿರುಗೇಟು ನೀಡಿದ ಜಂಪಾ ವಿಕೆಟ್‌ಗಳನ್ನು ಉರುಳಿಸುತ್ತ ಸಾಗಿದರು. ಹ್ಯಾಟ್ರಿಕ್ ಗಳಿಸುವ ಅಪೂರ್ವ ಅವಕಾಶವೂ ಅವರಿಗೆ ಒದಗಿತ್ತು. ಆದರೆ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಕ್ಯಾಚ್ ಕೈಚೆಲ್ಲಿ ನಿರಾಸೆ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT