ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KAR vs TN | ಪವನ್–ಪಡಿಕ್ಕಲ್ ಅರ್ಧಶತಕ: ಸಾಧಾರಣ ಮೊತ್ತದತ್ತ ಕರ್ನಾಟಕ

ರಣಜಿ ಕ್ರಿಕೆಟ್
Last Updated 9 ಡಿಸೆಂಬರ್ 2019, 12:40 IST
ಅಕ್ಷರ ಗಾತ್ರ

ದಿಂಡಿಗಲ್: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡದೆದುರು ಕರ್ನಾಟಕ ಸಾಧಾರಣ ಮೊತ್ತದತ್ತ ಸಾಗಿದೆ.

ಇಲ್ಲಿನಎನ್‌.ಪಿ.ಆರ್. ಕಾಲೇಜು ಮೈದಾನದಲ್ಲಿಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಯಂಕ್‌ ಅಗರವಾಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ತಾಳ್ಮೆಯ ಬ್ಯಾಟ್ಸ್‌ಮನ್‌ದೇಗಾ ನಿಶ್ಚಲ್‌, ಕೇವಲ 4 ರನ್‌ ಗಳಿಸಿ ಔಟಾದರು. ಬಳಿಕ ಕ್ರೀಸ್‌ಗೆ ಬಂದ ದೇವದತ್ತ ಪಡಿಕ್ಕಲ್, ಮಯಂಕ್ ಜೊತೆ ಸೇರಿ ತಾಳ್ಮೆಯ ಇನಿಂಗ್ಸ್‌ ಕಟ್ಟಿದರು.

ಈ ಜೋಡಿ ಎರಡನೇ ವಿಕೆಟ್‌ಗೆ 67 ರನ್‌ ಸೇರಿಸಿ ವಿಕೆಟ್‌ ಕುಸಿತಕ್ಕೆ ತಡೆ ಒಡ್ಡಿತು.

ಉತ್ತಮವಾಗಿ ಆಡುತ್ತಿದ್ದ ಮಯಂಕ್, 78 ಎಸೆತಗಳಲ್ಲಿ 43 ರನ್ ಗಳಿಸಿದ್ದ ವೇಳೆ ಮಣಿಮಾರನ್‌ಸಿದ್ಧಾರ್ಥ್ ಬೌಲಿಂಗ್‌ನಲ್ಲಿ ಬಾಬಾ ಅಪರಾಜಿತ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಕರುಣ್‌ ನಾಯರ್‌ ಹೆಚ್ಚು ಹೊತ್ತು ನಿಲ್ಲಲಿಲ್ಲ. 8 ರನ್‌ ಗಳಿಸಿ ರನ್‌ ಔಟಾದರು.

ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಪವನ್‌ ದೇಶಪಾಂಡೆ ಹಾಗೂ ಪಡಿಕ್ಕಲ್‌, ತಂಡದ ಮೊತ್ತವನ್ನು ದ್ವಿಶತಕ ದಾಟಿಸಿದರು. 182 ಎಸೆತಗಳಲ್ಲಿ 78 ರನ್‌ ಗಳಿಸಿ ರಕ್ಷಣಾತ್ಮಕವಾಗಿ ಆಡುತ್ತಿದ್ದ ಪಡಿಕ್ಕಲ್‌, ಅರೆಕಾಲಿಕ ಬೌಲರ್‌ ಬಾಬಾ ಅಪರಾಜಿತ್‌ಗೆ ವಿಕೆಟ್‌ ಒಪ್ಪಿಸಿದರು.

ಸದ್ಯ ಮೊದಲ ದಿನದಾಟ ಮುಕ್ತಾಯವಾಗಿದ್ದು, ಕರ್ನಾಟಕ 94 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 259 ರನ್‌ ಕಲೆಹಾಕಿದೆ. ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ (35) ಹಾಗೂ ಡೇವಿಡ್‌ ಮಥಾಯಿಸ್‌ (0) ಕ್ರೀಸ್‌ನಲ್ಲಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ತಮಿಳುನಾಡು ಪರಮಣಿಮಾರನ್ ಎರಡು ವಿಕೆಟ್‌ ಪಡೆದರೆ,ಕೃಷ್ಣಮೂರ್ತಿ ವಿಘ್ನೇಶ್, ಆರ್. ಅಶ್ವಿನ್ ಹಾಗೂ ಅಪರಾಜಿತ್ ತಲಾ ಒಂದು ವಿಕೆಟ್‌ ಉರುಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT