ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ ಪಡೆದ ರವೀಂದ್ರ ಜಡೇಜ: ಹೊಸ ಸಾಧನೆ

Published : 30 ಸೆಪ್ಟೆಂಬರ್ 2024, 10:42 IST
Last Updated : 30 ಸೆಪ್ಟೆಂಬರ್ 2024, 10:42 IST
ಫಾಲೋ ಮಾಡಿ
Comments

ಕಾನ್ಪುರ: ಟೀಮ್ ಇಂಡಿಯಾದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಅವರು ಈ ಮೈಲುಗಲ್ಲು ದಾಟಿದ ಭಾರತದ ಏಳನೇ ಬೌಲರ್ ಎನಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಖಲೀದ್ ಅಹ್ಮದ್ ಅವರನ್ನು ಔಟ್ ಮಾಡುವ ಮೂಲಕ ಜಡೇಜ 300ನೇ ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

ಭಾರತ ಪರ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ (619), ರವಿಚಂದ್ರನ್ ಅಶ್ವಿನ್ (522), ಕಪಿಲ್ ದೇವ್ (434), ಹರ್ಭಜನ್ ಸಿಂಗ್ (417), ಇಶಾಂತ್ ಶರ್ಮಾ (311) ಮತ್ತು ಜಹೀರ್ ಖಾನ್ (311) ನಂತರ ರವೀಂದ್ರ ಜಡೇಜ 300 ವಿಕೆಟ್ ಪಡೆದ ಭಾರತದ ನಾಲ್ಕನೇ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ.

ಭಾರತದ ಪರ ವೇಗವಾಗಿ 300 ವಿಕೆಟ್ ಗಳಿಸಿದ ಶ್ರೇಯಸ್ಸು ಆ‍ಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಸಲ್ಲುತ್ತದೆ. ಅವರು 54 ‍ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಲೆಗ್ ಸ್ಪಿನ್ನರ್‌ ಅನಿಲ್ ಕುಂಬ್ಳೆ 66 ಪಂದ್ಯಗಳಲ್ಲಿ, ಆಫ್‌ ಸ್ಪಿನ್ನರ್‌ ಹರ್ಭಜನ್ ಸಿಂಗ್ 72 ಪಂದ್ಯಗಳಲ್ಲಿ, ವೇಗಿಗಳಾದ ಕಪಿಲ್ ದೇವ್‌ 83 ಪಂದ್ಯಗಳಲ್ಲಿ ಮತ್ತು ಜಹೀರ್ ಖಾನ್ 89 ಪಂದ್ಯಗಳಲ್ಲಿ 300ನೇ ವಿಕೆಟ್ ಗಳಿಸಿದ್ದರು.

2012ರಲ್ಲಿ ಟೆಸ್ಟ್​​​ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ ಜಡೇಜ ಇದುವರೆಗೂ 73 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 11 ಬಾರಿ 5 ವಿಕೆಟ್‌ಗಳ ಗೊಂಚಲು ಗಳಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಜಡೇಜ 36.72 ಸರಾಸರಿಯೊಂದಿಗೆ 3,122 ರನ್ ಸಾಧಿಸಿದ್ದಾರೆ. ಇದರಲ್ಲಿ 4 ಶತಕ, 21 ಅರ್ಧ ಶತಕ ಸಿಡಿಸಿದ್ದಾರೆ.

ಮೆಚ್ಚುಗೆಯ ಮಹಾಪೂರ: ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಜಡೇಜ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT