ಸೋಮವಾರ, ಮೇ 23, 2022
30 °C

India VS South Africa | ಸೆಂಚುರಿಯನ್‌ನಲ್ಲಿ ‘ಪ್ರಥಮ’ ಜಯಭೇರಿ

ಪಿಟಿಐ Updated:

ಅಕ್ಷರ ಗಾತ್ರ : | |

ಸೆಂಚುರಿಯನ್: ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡವು ಬ್ರಿಸ್ಬೇನ್‌ನ  ಗಾಬಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಮಣಿಸಿತ್ತು. ಇದೀಗ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಭದ್ರಕೋಟೆಯನ್ನು ಪುಡಿಗಟ್ಟಿತು.

ಸೂಪರ್‌ಸ್ಪೋರ್ಟ್ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯವಾದ ಮೊದಲ ಟೆಸ್ಟ್‌ನಲ್ಲಿ ಭಾರತದ ‘ತ್ರಿವಳಿ ವೇಗಿ’ ಗಳಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ದಾಳಿಯ ಮುಂದೆ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು 113 ರನ್‌ಗಳಿಂದ ಪರಾಭವಗೊಂಡಿತು. ಇದೇ ಮೊದಲ ಬಾರಿಗೆ ಭಾರತವು ಸೆಂಚುರಿಯನ್‌ನಲ್ಲಿ ವಿಜಯೋತ್ಸವ ಆಚರಿಸಿತು. ಮೂರು ಟೆಸ್ಟ್‌ಗಳ ಸರಣಿಯಲ್ಲಿ 1–0  ಮುನ್ನಡೆ ಗಳಿಸಿತು. ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿ ಸರಣಿ ಗೆಲ್ಲುವ ಕನಸಿಗೆ ವಿರಾಟ್ ಕೊಹ್ಲಿ ಬಳಗವು ಮುನ್ನುಡಿ ಬರೆಯಿತು.ಆಸ್ಟ್ರೇಲಿಯಾದಲ್ಲಿ ಸರಣಿ ವಿಜಯ, ಇಂಗ್ಲೆಂಡ್‌ನಲ್ಲಿ ಸರಣಿಯಲ್ಲಿ ಮೇಲುಗೈ ಸಾಧಿಸಿದ ವರ್ಷದಲ್ಲಿ ವಿದೇಶಿ ಅಂಗಳದಲ್ಲಿ ಮತ್ತೊಂದು ಮಹತ್ವದ ಸಾಧನೆಯ ನಿರೀಕ್ಷೆ ಗರಿಗೆದರಿದೆ.

305 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡವು ಬುಧವಾರ ದಿನದಾಟದ ಮುಕ್ತಾಯಕ್ಕೆ 40.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 94 ರನ್ ಗಳಿಸಿತ್ತು. ಕ್ರೀಸ್‌ನಲ್ಲಿ ಅರ್ಧಶತಕ ಗಳಿಸಿದ್ದ ನಾಯಕ ಡೀನ್ ಎಲ್ಗರ್ ಇದ್ದರು. ಆದರೆ, ಕೊನೆಯ ದಿನದಾಟದಲ್ಲಿ ಆತಿಥೇಯ ತಂಡವು 191 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಎರಡೂ ಇನಿಂಗ್ಸ್‌ಗಳಲ್ಲಿ ಆತಿಥೇಯ ತಂಡವು 200ರ ಗಡಿಯನ್ನೂ ದಾಟಲಿಲ್ಲ. 

ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು ಗಳಿಸಿದ್ದ 327 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ 197 ರನ್ ಗಳಿಸಿತ್ತು. 130 ರನ್‌ಗಳ ಮುನ್ನಡೆ ಗಳಿಸಿದ್ದ ವಿರಾಟ್ ಬಳಗವು ಎರಡನೇ ಇನಿಂಗ್ಸ್‌ನಲ್ಲಿ 174 ರನ್‌ ಗಳಿಸಿತ್ತು. 

ಗುರುವಾರ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಆತಿಥೇಯ ಬಳಗ ಸೋಲುವುದನ್ನು ತಪ್ಪಿಸಲು ಮಳೆ ಬರಲಿಲ್ಲ.  ಊಟದ ವಿರಾಮದವರೆಗೂ ಬ್ಯಾಟರ್‌ಗಳು ತಂಡದ ಸೋಲು ತಪ್ಪಿಸಲು ಶ್ರಮಿಸಿದರು. ಆದರೆ, ಭಾರತದ ಬೌಲರ್‌ಗಳು ತಾಳ್ಮೆಗೆಡದೇ ತಮ್ಮ ಮೊನಚು ದಾಳಿಯನ್ನು ಮುಂದುವರಿಸಿದರು. 

51ನೇ ಓವರ್‌ನಲ್ಲಿ ಬೂಮ್ರಾ ಆತಿಥೇಯ ನಾಯಕ ಡೀನ್ (77; 156ಎಸೆತ) ವಿಕೆಟ್‌ ಗಳಿಸಿದರು. ಆಗ ದಕ್ಷಿಣ ಆಫ್ರಿಕಾ ತಂಡದಲ್ಲಿ ಇದ್ದ ಆಲ್ಪ ಸ್ವಲ್ಪ ಆಸೆಯೂ ಕಮರಿತು. ತೆಂಬಾ ಬವುಮಾ (ಔಟಾಗದೆ 35; 80ಎ) ಮತ್ತು ಕ್ವಿಂಟನ್ ಡಿ ಕಾಕ್ (21; 28ಎ) ಬಿಟ್ಟರೆ ಉಳಿದವರು ಹೋರಾಟ ಮಾಡಲಿಲ್ಲ. ಕ್ವಿಂಟನ್ ವಿಕೆಟ್ ಪಡೆದ ಸಿರಾಜ್ ಸಂಭ್ರಮಿಸಿದರು. ಕೊನೆಯ ಎರಡು ವಿಕೆಟ್‌ಗಳನ್ನು ಗಳಿಸಿದ ಸ್ಪಿನ್ನರ್ ಅಶ್ವಿನ್ ಪಂದ್ಯಕ್ಕೆ ತೆರೆ ಎಳೆದರು. 

ಈ ಪಂದ್ಯದಲ್ಲಿ ಭಾರತದ ಮಧ್ಯಮವೇಗಿಗಳು ಒಟ್ಟು 18 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಕೆ.ಎಲ್. ರಾಹುಲ್ ಪಂದ್ಯಶ್ರೇಷ್ಠ ಗೌರವ ಗಳಿಸಿದರು.

***

ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ ಟೆಸ್ಟ್‌ ಪಂದ್ಯದಲ್ಲಿ 20 ವಿಕೆಟ್ ಪಡೆಯುವ ಸಾಮರ್ಥ್ಯ ಭಾರತ ತಂಡಕ್ಕಿದೆ.

- ಸಚಿನ್ ತೆಂಡೂಲ್ಕರ್ ಕ್ರಿಕೆಟಿಗ

***

ಬ್ರಿಸ್ಬೇನ್, ಓವಲ್, ಲಾರ್ಡ್ಸ್‌, ಈಗ ಸೆಂಚುರಿಯನ್‌. ಅಭಿ ನಂದನೆಗಳು ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ತಂಡದ ಎಲ್ಲ ಆಟಗಾರರಿಗೆ.

ರವಿಶಾಸ್ತ್ರಿ, ಭಾರತ ತಂಡದ ಮಾಜಿ ಕೋಚ್

***

2021 ಭಾರತಕ್ಕೆ ಅಮೋಘ ವರ್ಷ. ಸೆಂಚುರಿಯನ್‌ನಲ್ಲಿ ಗೆದ್ದ ಏಷ್ಯಾದ ಮೊದಲ ತಂಡ. ಇದು ವಿಶೇಷ ತಂಡ ಮತ್ತು ಅದ್ಭುತ ಜಯ. ಶಮಿ ಅಮೋಘ ಬೌಲಿಂಗ್ ಮಾಡಿದರು. ಕೆ.ಎಲ್. ರಾಹುಲ್ ಆಟ ಮಾಸ್ಟರ್‌ಕ್ಲಾಸ್.

- ವೆಂಕಟೇಶ್ ಪ್ರಸಾದ್ ಕ್ರಿಕೆಟಿಗ

***

ಪಂದ್ಯದಲ್ಲಿ ಒಂದು ದಿನ ಮಳೆಯಿಂದ ಆಟ ನಷ್ಟವಾಗಿತ್ತು. ಆದರೂ ಅಮೋಘವಾದ ಜಯವನ್ನು ಭಾರತ ತಂಡ ಗಳಿಸಿದೆ. ಸಫಲ ವರ್ಷ ಇದು. ಅಭಿನಂದನೆಗಳು

- ಜಯ್ ಶಾ ಬಿಸಿಸಿಐ ಕಾರ್ಯದರ್ಶಿ

***

ಟೆಸ್ಟ್‌ ಕ್ರಿಕೆಟ್‌ನಲ್ಲಿ 2021ರಲ್ಲಿ ಭಾರತದ ಕನಸಿನ ಓಟ ಇದು. ಗಾಬಾ, ಲಾರ್ಡ್ಸ್, ಓವಲ್, ಸೆಂಚುರಿಯನ್ ಮತ್ತು ಸಿಡ್ನಿಯ ಅವಿಸ್ಮರಣೀಯ ಡ್ರಾ. ಬರುವ ಹೊಸ ವರ್ಷವು ಮತ್ತಷ್ಟು ಯಶಸ್ಸು ಕೊಡಲಿ.

ವೀರೇಂದ್ರ ಸೆಹ್ವಾಗ್ ಕ್ರಿಕೆಟಿಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು