ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India vs WI | ಶ್ರೇಯಸ್, ಪಂತ್ ಆಟಕ್ಕೆ ಒಲಿದ ಜಯ; ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

ಪ್ರಸಿದ್ಧ, ಸಿರಾಜ್ ದಾಳಿಗೆ ಕಮರಿದ ವಿಂಡೀಸ್ ಜಯದ ಕನಸು
Last Updated 12 ಫೆಬ್ರುವರಿ 2022, 2:22 IST
ಅಕ್ಷರ ಗಾತ್ರ

ಅಹಮದಾಬಾದ್: ನಿರೀಕ್ಷೆಯಂತೆಯೇ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿತು.

ಶುಕ್ರವಾರ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಅಂತಿಮ ಮತ್ತು ಮೂರನೇ ಪಂದ್ಯದಲ್ಲಿ ಭಾರತ ತಂಡವು 96 ರನ್‌ಗಳಿಂದ ಜಯಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಶ್ರೇಯಸ್ ಅಯ್ಯರ್ (80 ರನ್) ಮತ್ತು ರಿಷಭ್ ಪಂತ್ (56 ರನ್) ಅಮೋಘ ಬ್ಯಾಟಿಂಗ್ ನಿಂದಾಗಿ 50 ಓವರ್‌ಗಳಲ್ಲಿ 265 ರನ್‌ ಗಳಿಸಿತು. ಜೇಸನ್ ಹೋಲ್ಡರ್ ನಾಲ್ಕು ವಿಕೆಟ್ ಪಡೆದರು. ಇದರಿಂದಾಗಿ ಭಾರತ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಪ್ರವಾಸಿ ಬಳಗದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಪಡೆ ಮತ್ತೆ ಎಡವಿತು. ತಲಾ ಮೂರು ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಬೌಲಿಂಗ್ ಮುಂದೆ ವಿಂಡೀಸ್ ತಂಡವು 37.1 ಓವರ್‌ಗಳಲ್ಲಿ 169 ರನ್‌ ಗಳಿಸಿ ಆಲೌಟ್ ಆಯಿತು.

ಕೆ.ಎಲ್. ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅದರಿಂದಾಗಿ ಶಿಖರ್ ಧವನ್ ಸ್ಥಾನ ಪಡೆದರು. ರೋಹಿತ್ ಜೊತೆಗೆ ಅವರು ಇನಿಂಗ್ಸ್ ಆರಂಭಿಸಿದರು. ಆದರೆ, ಅಲ್ಜರಿ ಜೋಸೆಫ್ ಮತ್ತು ಒಡಿಯನ್ ಸ್ಮಿತ್ ಅವರು ಆರಂಭದಲ್ಲಿಯೇ ಭಾರತ ತಂಡಕ್ಕೆ ಪೆಟ್ಟುಕೊಟ್ಟರು.

ಇದರಿಂದಾಗಿತಿ ತಂಡವು 42 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಳ್ಳಬೇಕಾಯಿತು. ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದರು.

ಆದರೆ ಈ ಹಂತದಲ್ಲಿ ಜೊತೆಗೂಡಿದ ಶ್ರೇಯಸ್ ಮತ್ತು ಪಂತ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 110 ರನ್‌ಗಳನ್ನು ಗಳಿಸಿದರು.

ಶ್ರೇಯಸ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ಆದರೆ ಪಂತ್ ಚುರುಕಿನ ಹೊಡೆತಗಳ ಮೂಲಕ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು.

30ನೇ ಓವರ್‌ನಲ್ಲಿ ಪಂತ್ ವಿಕೆಟ್ ಗಳಿಸಿದ ಹೇಡನ್ ವಾಲ್ಶ್ ಭಾರತ ತಂಡವನ್ನುಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವ ಭರವಸೆ ಮೂಡಿಸಿದರು. 33ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆದ ಫ್ಯಾಬಿಯನ್ ಅಲನ್ ಸಂಭ್ರಮಿಸಿದರು. ನಾಲ್ಕು ಓವರ್‌ಗಳ ನಂತರ ಅಯ್ಯರ್ ಕೂಡ ಹೇಡನ್‌ಗೆ ವಿಕೆಟ್‌ ಒಪ್ಪಿಸಿದರು.

ಆದರೆ ಮತ್ತೊಮ್ಮೆ ಭರವಸೆ ಉಳಿಸಿಕೊಂಡ ವಾಷಿಂಗ್ಟನ್ ಸುಂದರ್ ಹಾಗೂ ದೀಪಕ್ ಚಾಹರ್ ಮಿಂಚಿದರು. ತಂಡದ ಮೊತ್ತವನ್ನು 250ರ ಗಡಿ ದಾಟಲು ಕಾರಣರಾದರು. ಚಾಹರ್ ಎರಡು ಅಮೋಘ ಸಿಕ್ಸರ್ ಸಿಡಿಸಿದರು. ಇವರಿಬ್ಬರ ವಿಕೆಟ್‌ಗಳನ್ನೂ ಹೋಲ್ಡರ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT