ಶುಕ್ರವಾರ, ಜೂನ್ 25, 2021
30 °C

ಟಿಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಹೊಗಳಿದ ಟಿಮ್‌ ಪೇನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬೋರ್ನ್:‌ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಎದುರಾಳಿ ತಂಡದ ಆಟಗಾರರ ಚರ್ಮದ ಒಳನುಸುಳುವ (ಎದುರಾಳಿಗಳಲ್ಲಿ ಹತಾಶೆ ಮೂಡುವಂತೆ ಕಾಡಬಲ್ಲ) ಸಾಮರ್ಥ್ಯ ಹೊಂದಿದ್ದು, ಇದು ಆತನನ್ನು ಸವಾಲಿನ ಆಟಗಾರನನ್ನಾಗಿ ರೂಪಿಸಿದೆ ಎಂದು ಆಸ್ಟ್ರೇಲಿಯಾ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಟಿಮ್‌ ಪೇನ್ ಅಭಿಪ್ರಾಯಪಟ್ಟಿದ್ದಾರೆ.

ಗಿಲ್ಲಿ ಅಂಡ್‌ ಗಾಸ್‌ ಪಾಡ್‌ಕಾಸ್ಟ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಪೇನ್‌, ʼನೀವು ನಿಮ್ಮ ತಂಡದಲ್ಲಿ ಇರಬೇಕೆಂದು ಬಯಸುವಂತಹ ಆಟಗಾರ ಕೊಹ್ಲಿ ಎಂದು ನಾನು ಸಾಕಷ್ಟು ಸಲ ಹೇಳಿದ್ದೇನೆ. ಆತ ಸ್ಪರ್ಧಾತ್ಮಕ ಮನೋಭಾವದ ಆಟಗಾರ. ಆತ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ʼ ಎಂದು ಶ್ಲಾಘಿಸಿದ್ದಾರೆ.

ʼಕೊಹ್ಲಿ ವಿರುದ್ಧ ಆಡುವುದು ಸವಾಲು. ಆತ ಉತ್ತಮ ಮತ್ತು ಸ್ಪರ್ಧಾತ್ಮಕ ಆಟಗಾರನಾಗಿರುವುದರಿಂದ ಎದುರಾಳಿಗಳನ್ನು ಸಾಕಷ್ಟು ಕಾಡಬಲ್ಲ. ಹೌದು, ನಾಲ್ಕು ವರ್ಷಗಳ ಹಿಂದೆ ಕೊಹ್ಲಿ ಜೊತೆ ತೀವ್ರ ಜಿದ್ದಾಜಿದ್ದಿ ನಡೆದಿತ್ತು. ಆದರೆ, ಖಂಡಿತವಾಗಿಯೂ ಆತ ನಾನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವ ವ್ಯಕ್ತಿʼ ಎಂದು ಹೇಳಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ 2018ರಲ್ಲಿ ಆಸೀಸ್‌ ಪ್ರವಾಸ ಕೈಗೊಂಡಿದ್ದ ಭಾರತ ಕ್ರಿಕೆಟ್‌ ತಂಡವು, ಕಾಂಗರೂ ನಾಡಿನಲ್ಲಿ ಮೊದಲ ಸಲ ಟೆಸ್ಟ್‌ ಸರಣಿ (2-1) ಗೆದ್ದು ದಾಖಲೆ ಬರೆದಿತ್ತು. ಆ ಸರಣಿ ವೇಳೆ ಕೊಹ್ಲಿ ಮತ್ತು ಪೇನ್‌ ನಡುವೆ ಮಾತಿನ ಚಕಮಕಿ ನಡೆದಿತ್ತು.

ಆಸ್ಟ್ರೇಲಿಯಾ ತಂಡ ಈ ವರ್ಷಾರಂಭದಲ್ಲಿ (2020-21) ನಡೆದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿಯೂ ಭಾರತದ ಎದುರು (2-1) ಸೋಲು ಕಂಡಿತ್ತು. ಈ ಬಗ್ಗೆಯೂ ಮಾತನಾಡಿರುವ ಪೇನ್‌, ʼಸರಣಿ ಸೋಲಿನ ಬಳಿಕ ನನ್ನನ್ನು ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಯಿತು. ಭಾರತದ ವಿರುದ್ಧ ಆಡುವಾಗಿನ ಸವಾಲುಗಳ ಬಗ್ಗೆಯೂ ಕೇಳಲಾಯಿತು. ಎದುರಾಳಿಯನ್ನು ಅವರು ತಬ್ಬಿಬ್ಬುಗೊಳಿಸುವುದು ಪ್ರಮುಖ ಸವಾಲುʼ ಎಂದು ಪೇನ್‌ ಹೇಳಿದ್ದಾರೆ.

ಇದನ್ನೂ ಓದಿ: 

ನಾಲ್ಕು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ಸೋಲು ಕಂಡಿತ್ತು. ಆ ಪಂದ್ಯದ ಬಳಿಕ ಕೊಹ್ಲಿ ತವರಿಗೆ ವಾಪಸ್‌ ಆಗಿದ್ದರು. ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡ ಮುನ್ನಡೆಸಿದ್ದರು. ಎರಡು ಮತ್ತು ನಾಲ್ಕನೇ ಪಂದ್ಯದಲ್ಲಿ ಗೆಲುವು ಕಂಡ ಭಾರತ, ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು