ಸೋಮವಾರ, ಜನವರಿ 17, 2022
20 °C

ಆ್ಯಷಸ್ | ಕೋಚ್‌ಗೆ ಕೋವಿಡ್; ಸೋಲಿನ ಸುಳಿಯಲ್ಲಿರುವ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಕುಟುಂಬದ ಜೊತೆ ಪ್ರತ್ಯೇಕವಾಸದಲ್ಲಿ ಉಳಿದಿರುವ ಇಂಗ್ಲೆಂಡ್ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್‌ ಅವರಿಗೆ ಕೋವಿಡ್–19 ದೃಢಪಟ್ಟಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಆ್ಯಷಸ್‌ ಟೆಸ್ಟ್‌ ಸರಣಿಯನ್ನು ಈಗಾಗಲೇ 3–0 ಅಂತರದಿಂದ ಸೋತಿರುವ ಆಂಗ್ಲ ಪಡೆಗೆ ಇದರಿಂದ ಹಿನ್ನಡೆಯಾದಂತಾಗಿದೆ.

ನಾಲ್ಕನೇ ಪಂದ್ಯಕ್ಕೆ ಸಹಾಯಕ ಕೋಚ್‌ ಗ್ರಹಂ ತೋರ್ಪೆ ಅವರು, ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಈ ಪಂದ್ಯವು ಜನವರಿ 5 ರಂದು ಸಿಡ್ನಿಯಲ್ಲಿ ನಡೆಯಲಿದೆ.

ಕುಟುಂಬದ ಒಬ್ಬರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಕ್ರಿಸ್‌ ಅವರು ತಂಡದಿಂದ ದೂರ ಉಳಿದಿದ್ದರು. ಹೋಬರ್ಟ್‌ನಲ್ಲಿ ನಡೆಯಲಿರುವ ಐದನೇ (ಹಗಲು–ರಾತ್ರಿ) ಪಂದ್ಯಕ್ಕೂ ಮುನ್ನ ಅವರು ತಂಡಕ್ಕೆ ವಾಪಸ್‌ ಆಗುವ ಸಾಧ್ಯತೆ ಇದೆ.


ಕ್ರಿಸ್ ಸಿಲ್ವರ್‌ವುಡ್‌

'ತಮ್ಮ ಕುಟುಂಬದ ಒಬ್ಬರಿಗೆ ಕೋವಿಡ್‌ ದೃಢಪಟ್ಟ ಬಳಿಕ, ಸಿಲ್ವರ್‌ವುಡ್ ಅವರು ಡಿಸೆಂಬರ್‌ 30ರಿಂದ ಮೆಲ್ಬರ್ನ್‌ನಲ್ಲೇ ಪ್ರತ್ಯೇಕವಾಸದಲ್ಲಿ ಉಳಿದಿದ್ದಾರೆ. ಎರಡೂ ಡೋಸ್‌ ಲಸಿಕೆ ಪಡೆದುಕೊಂಡಿರುವ ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಅವರು ಜನವರಿ 8ರ ವರೆಗೆ ಪ್ರತ್ಯೇಕವಾಸದಲ್ಲಿರಲಿದ್ದಾರೆ. ಹೋಬರ್ಟ್‌ನಲ್ಲಿ ನಡೆಯುವ ಐದನೇ ಪಂದ್ಯಕ್ಕೂ ಮುನ್ನ ವುಡ್ ಅವರು, ತಂಡ ಕೂಡಿಕೊಳ್ಳುವ ನಿರೀಕ್ಷೆ ಇದೆ' ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ತಿಳಿಸಿರುವುದಾಗಿ ಸ್ಕೈ ಸ್ಪೋರ್ಟ್ಸ್‌ ವರದಿ ಮಾಡಿದೆ.

ಮುಖ್ಯಕೋಚ್‌ ಅವರ ಅನುಪಸ್ಥಿತಿಯಷ್ಟೇ ಅಲ್ಲದೆ, ವೇಗದ ಬೌಲಿಂಗ್‌ ಕೋಚ್‌ ಜಾನ್ ಲೆವಿಸ್, ಸ್ಪಿನ್ ಮಾರ್ಗದರ್ಶಕ ಜೀತನ್‌ ಪಟೇಲ್ ಮತ್ತು ಫಿಟ್‌ನೆಸ್‌ ತಜ್ಞ ಡರೇನ್ ವೆನೆಸ್ ಅವರ ಸೇವೆಯೂ ಜೋ ರೂಟ್‌ ಬಳಗಕ್ಕೆ ಲಭ್ಯವಿರುವುದಿಲ್ಲ. ಅವರೂ ಪ್ರತ್ಯೇಕವಾಸದಲ್ಲಿ ಉಳಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು