ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಶಸ್ವಿ ಕಥೆ’| ನಿರ್ವಸಿತನಿಂದ ಐಪಿಎಲ್‌ ಹೀರೊವರೆಗೆ....

Published 1 ಮೇ 2023, 19:01 IST
Last Updated 1 ಮೇ 2023, 19:01 IST
ಅಕ್ಷರ ಗಾತ್ರ

ನವದೆಹಲಿ (ಎಎಫ್‌ಪಿ): ಒಂದು ಕಾಲದಲ್ಲಿ ಕ್ರಿಕೆಟ್‌ ಖರ್ಚು ಭರಿಸಲು ಕತ್ತಲಾದ ಮೇಲೆ ಬೀದಿಬದಿ ಪಾನಿಪೂರಿ ಮಾರುತ್ತಿದ್ದ, ಟೆಂಟ್‌ನಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದ ಯಶಸ್ವಿ ಜೈಸ್ವಾಲ್‌ ಈಗ ಮನೆಮಾತಾಗಿರುವ ಬ್ಯಾಟರ್‌. ಐಪಿಎಲ್‌ನಲ್ಲಿ ಭಾನುವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ಹೊಡೆದ ಬಿರುಸಿನ ಶತಕ ಕ್ರಿಕೆಟ್‌ ಪರಿಣತರಿಂದ ಶ್ಲಾಘನೆಗೆ ಪಾತ್ರವಾಗಿದೆ.

ವಾಂಖೆಡೆಯಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರೆದುರು 21 ವರ್ಷದ ಜೈಸ್ವಾಲ್‌ 62 ಎಸೆತಗಳಲ್ಲಿ 124 ರನ್‌ಗಳ ಸ್ಫೋಟಕ (ಎಂಟು ಸಿಕ್ಸರ್‌, 16 ಬೌಂಡರಿ) ಇನಿಂಗ್ಸ್‌ ಆಡಿದ್ದರು. ಉತ್ತರ ಪ್ರದೇಶದ ಬಡ ಕುಟುಂಬವೊಂದಕ್ಕೆ ಸೇರಿದ ಜೈಸ್ವಾಲ್ ಕ್ರಿಕೆಟ್ ಆಡಬೇಕೆಂಬ ಉತ್ಕಟ ಬಯಕೆಯಿಂದ ಹಿಂದೆ ಇದೇ ಕನಸಿನ ನಗರಿಗೆ ಬಂದಿದ್ದರು.

‘ಎಂಥ ಕಥೆ. ಎಂಥ ವಿಶೇಷ ಪ್ರತಿಭೆ. ಯಶಸ್ವಿ ಜೈಸ್ವಾಲ್‌ ಸೂಪರ್‌ಸ್ಟಾರ್ ಹಾದಿಯಲ್ಲಿದ್ದಾರೆ’ ಎಂದು ಐಪಿಎಲ್‌ನ ಮಾಜಿ ಕೋಚ್‌ ಟಾಮ್‌ ಮೂಡಿ ಅವರು ಮನಸಾರೆ ಮೆಚ್ಚಿ ಟ್ವೀಟ್‌ ಮಾಡಿದ್ದಾರೆ.

‘ಅವನದು ನೈಜ ಪ್ರತಿಭೆ. ದೇಶೀಯ ಕ್ರಿಕೆಟ್‌ನಲ್ಲಿ ತೋರಿದ ಅಮೋಘ ಲಯವನ್ನೇ ಐಪಿಎಲ್‌ನಲ್ಲೂ ಮುಂದುವರಿಸಿದ್ದಾನೆ. ಅವನಿಗೂ, ಭಾರತೀಯ ಕ್ರಿಕೆಟ್‌ಗೂ, ರಾಜಸ್ತಾನ ರಾಯಲ್ಸ್‌ ತಂಡಕ್ಕೂ ಒಳಿತೇ ಆಗಿದೆ’ ಎನ್ನುವ ಮೆಚ್ಚುಗೆಯ ಮಾತು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರದು.

ಸಾಮಾಜಿಕ ಮಾಧ್ಯಮಗಳಲ್ಲೂ ಜೈಸ್ವಾಲ್ ಆಟಕ್ಕೆ ಹೊಗಳಿಕೆಯ ಸುರಿಮಳೆಯಾಗಿದೆ. 2008ರಲ್ಲಿ ಆರ್‌ಸಿಬಿ ಎದುರು ಕೆಕೆಆರ್ ತಂಡದ ಬ್ರೆಂಡನ್‌ ಮೆಕ್ಕಲಂ ಗಳಿಸಿದ 158 ರನ್‌ಗಳ ಆಟಕ್ಕೆ ಅವರ ಬ್ಯಾಟಿಂಗ್ ಹೋಲಿಸುತ್ತಿದ್ದಾರೆ.

ಈ ಎಡಗೈ ಆಟಗಾರ ಐಪಿಎಲ್‌ನಲ್ಲಿ ಗಳಿಸಿದ ಮೊದಲ ಶತಕ ಈ ಋತುವಿನ ಅತ್ಯಧಿಕ ವೈಯಕ್ತಿಕ ಮೊತ್ತ ಎನಿಸಿತು. ಮಾತ್ರವಲ್ಲ, 2023ರ ಲೀಗ್‌ನಲ್ಲಿ ಈಗ 428 ರನ್‌ಗಳೊಂದಿಗೆ ಯಶಸ್ವಿ ಅಗ್ರಸ್ಥಾನಕ್ಕೇರಿದ್ದಾರೆ. ಭಾನುವಾರದ ಕೊನೆಗೆ ಡುಪ್ಲೆಸಿ (422) ಅವರನ್ನು ಹಿಂದಕ್ಕೆ ಹಾಕಿದ್ದರು.

ಬಡಕುಟುಂಬ

ತಂದೆ–ತಾಯಿಯನ್ನು ಬಿಟ್ಟು ಬಂದು ಮುಂಬೈಗೆ ಬಂದಿಳಿದಾಗ ಜೈಸ್ವಾಲ್ ವಯಸ್ಸು ಆಗ ಬರೇ 11. ‘ನಾನು ಡೇರಿಯೊಂದರಲ್ಲಿ ಮಲಗುತ್ತಿದ್ದೆ. ಸಂಬಂಧಿಯೊಬ್ಬರ ಮನೆಯಲ್ಲಿ ದಿನ ಕಳೆಯುತ್ತಿದ್ದೆ. ಅದು ಇಕ್ಕಟ್ಟಾಗಿದ್ದ ಕಾರಣ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅವರು ಹೇಳಿದರು. ಆಜಾದ್‌ ಮೈದಾನದ ಬಳಿಯ ಟೆಂಟ್‌ ಒಂದರಲ್ಲಿ ರಾತ್ರಿ ಕಳೆದು, ಹಗಲಿನಲ್ಲಿ ಕ್ರಿಕೆಟ್‌ ಆಡುತ್ತಿದ್ದೆ’ ಎಂದು ಜೈಸ್ವಾಲ್‌ ಈ ಹಿಂದೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಕೋಚ್‌ ಜ್ವಾಲಾ ಸಿಂಗ್ ಅವರ ಕಣ್ಣಿಗೆ ಈ ಆಟಗಾರ ಬಿದ್ದ ನಂತರ ಅವರಿಗೆ ದುರ್ದೆಸೆ ಕರಗತೊಡಗಿತು. 2019 ರಲ್ಲಿ ಮುಂಬೈ ತಂಡದಲ್ಲಿ ಸ್ಥಾನ. ದೇಶಿ ಕ್ರಿಕೆಟ್‌ನಲ್ಲಿ ಶತಕ ಹೊಡೆದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಅವರದಾಯಿತು. ಆಗ ಅವರ ವಯಸ್ಸು 17 ವರ್ಷ 292 ದಿನ.

ಅವರ ಜೀವನಕ್ಕೆ ದೊಡ್ಡ ತಿರುವು ದೊರಕಿದ್ದು 2019ರಲ್ಲಿ. ಆ ಸಾಲಿನ ಐಪಿಎಲ್‌ ಹರಾಜಿನಲ್ಲಿ ಅವರನ್ನು ಆರ್‌ಆರ್‌ ತಂಡ ₹2.76 ಕೋಟಿ ಮೊತ್ತಕ್ಕೆ ಖರೀದಿಸಿತ್ತು. 2020ರಲ್ಲಿ ಅವರು ಭಾರತ 19 ವರ್ಷದೊಳಗಿನವರ ತಂಡದಲ್ಲಿ ಆಡಿ ಅತ್ಯಧಿಕ ರನ್ ಕಲೆಹಾಕಿದರು. ಟೂರ್ನಿಯ ಶ್ರೇಷ್ಠ ಆಟಗಾರ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದರು. ಅವರ ಮೊದಲ ಮೂರು ಐಪಿಎಲ್‌ ಋತುಗಳು ಸಾಧಾರಣ ಆಗಿದ್ದವು. ಆದರೆ ಈ ಬಾರಿ ಅವರು ಜೋಸ್‌ ಬಟ್ಲರ್ ಜೊತೆಗೂಡಿ ರಾಯಲ್ಸ್ ತಂಡಕ್ಕೆ ಒಳ್ಳೆಯ ಆರಂಭ ನೀಡುತ್ತಿದ್ದಾರೆ.

ರಾಯಲ್ಸ್ ತಂಡ ಭಾನುವಾರ ಮುಂಬೈ ಎದುರು ಸೋತರೂ ಅವರಿಗೆ ಪಂದ್ಯದ ಆಟಗಾರ ಗೌರವ ಒಲಿದುಬಂತು. ಟಿಮ್ ಡೇವಿಡ್ ಅವರು ಕೊನೆಯ ಕ್ಷಣಗಳಲ್ಲಿ ಮುಂಬೈ ತಂಡ ಗೆಲ್ಲಿಸಿದ್ದರು.

‘ನನ್ನ ಕನಸಿನ ಹಿಂದೆಬಿದ್ದಿದ್ದೇನೆ. ಅದಕ್ಕೆ ಪರಿಶ್ರಮ ಹಾಖುಯತ್ತಿದ್ದೇನೆ. ನಾನು ಶ್ರಮಪಟ್ಟರೆ ಫಲಿತಾಂಶ ಸಿಕ್ಕೇಸಿಗುತ್ತದೆ’ ಎಂದು ಪಂದ್ಯದ ನಂತರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT