ಶುಕ್ರವಾರ, ಏಪ್ರಿಲ್ 3, 2020
19 °C
ಮಹಿಳಾ ಟಿ20 ವಿಶ್ವಕಪ್

3ನೇ ಸಲ ಹ್ಯಾಟ್ರಿಕ್ ಮಿಸ್ ಮಾಡಿಕೊಂಡರೂ, ಪ್ರದರ್ಶನ ಖುಷಿ ನೀಡಿದೆ: ಪೂನಂ ಯಾದವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ: ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಪೂನಂ ಯಾದವ್‌, ಪಂದ್ಯದಲ್ಲಿ ಹ್ಯಾಟ್ರಿಕ್‌ ಮಿಸ್‌ ಮಾಡಿಕೊಂಡರೂ ಪಂದ್ಯ ಗೆದ್ದದ್ದಕ್ಕೆ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ.

ಇಲ್ಲಿ ನಡೆದ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಿತ್ತು. ಸಾಧಾರಣ ಗುರಿ ಮುಟ್ಟಲು ವಿಫಲವಾದ ಆಸ್ಟ್ರೇಲಿಯಾ 19.5 ಓವರ್‌ಗಳಲ್ಲಿ 115 ರನ್‌ ಗಳಿಸಿ ಆಲೌಟ್‌ ಆಗಿತ್ತು.

ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದ ಪೂನಂ ಯಾದವ್‌, ನಾಲ್ಕು ಓವರ್‌ಗಳಲ್ಲಿ 19 ರನ್‌ ನೀಡಿ ಪ್ರಮುಖ 4 ವಿಕೆಟ್‌ ಕಬಳಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ವೇಗಿ ಶಿಖಾ ಪಾಂಡೆ 3.5 ಓವರ್‌ಗಳಲ್ಲಿ 14 ರನ್‌ ನೀಡಿ 3 ವಿಕೆಟ್‌ ಉರುಳಿಸಿ ಮಿಂಚಿದರು. ಹೀಗಾಗಿ ಭಾರತ ತಂಡವು 17 ರನ್‌ ಅಂತರದ ಜಯ ಸಾಧಿಸಲು ಸಾಧ್ಯವಾಯಿತು.

ಇದನ್ನೂ ಓದಿ: ಪೂನಂ ಸ್ಪಿನ್‌ಗೆ ಮರುಳಾದ ಚಾಂಪಿಯನ್ನರು: ಭಾರತಕ್ಕೆ 17 ರನ್ ಜಯ

ಪಂದ್ಯದ ದಿಕ್ಕು ಬದಲಿಸಿದ ಓವರ್‌
ಆಸ್ಟ್ರೇಲಿಯಾ ತಂಡ ಮೊದಲ 11 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು 71 ರನ್‌ ಗಳಿಸಿತ್ತು. 2 ರನ್‌ ಗಳಿಸಿದ್ದ ಆ್ಯಶ್ಲೆ ಗಾರ್ಡನರ್‌ ಮತ್ತು 6 ರನ್‌ ಗಳಿಸಿದ್ದ ಉಪನಾಯಕಿ ರಚೆಲ್‌ ಹೇಯ್ನ್ಸ್ ಕ್ರೀಸ್‌ನಲ್ಲಿದ್ದರು.

ಈ ವೇಳೆ ದಾಳಿಗಿಳಿದ ಪೂನಂರ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಗಾರ್ಡನರ್‌ ನಂತರದ ಎಸೆತದಲ್ಲಿ ಒಂದು ರನ್‌ ತೆಗೆದುಕೊಂಡರು. ನಂತರದ ಎರಡು ಎಸೆತಗಳಲ್ಲಿ ಕ್ರಮವಾಗಿ ರಚೆಲ್‌ ಮತ್ತು ಎಲಿಸ್‌ ಪೆರಿ ವಿಕೆಟ್‌ ಒಪ್ಪಿಸಿದರು.

ಮೂರನೇ ಎಸೆತವನ್ನು ಮುಂದೆ ಬಂದು ಆಡುವ ಯತ್ನದಲ್ಲಿ ವಿಫಲವಾದ ರಚೆಲ್‌ ಸ್ಟಂಪ್‌ ಔಟಾದರೆ, ನಾಲ್ಕನೇ ಎಸೆತದಲ್ಲಿ ಪೆರಿ ಬೋಲ್ಡ್‌ ಆದರು. ನಂತರ ಕ್ರೀಸ್‌ಗೆ ಬಂದ ಜೆಸ್‌ ಜೊನಾಸ್ಸೆನ್‌ ಐದನೇ ಎಸೆತದಲ್ಲಿ ನೀಡಿದ ಕ್ಯಾಚ್‌ಅನ್ನು ವಿಕೆಟ್‌ ಕೀಪರ್‌ ತಾನಿಯಾ ಭಾಟಿಯಾ ಕೈ ಚೆಲ್ಲಿದರು. ಹೀಗಾಗಿ ಹ್ಯಾಟ್ರಿಕ್‌ ವಿಕೆಟ್‌ ಸಂಪಾದಿಸುವ ಅವಕಾಶ ತಪ್ಪಿತು. ಆದರೆ, ಈ ಓವರ್‌ ಪಂದ್ಯದ ದಿಕ್ಕು ಬದಲಿಸಿತು.

ಇದನ್ನೂ ಓದಿ: ಮಿಂಚಬೇಕಿದೆ ಶಫಾಲಿ–ಮಂದಾನ | ಭಾರತಕ್ಕೆ ಚೊಚ್ಚಲ ವಿಶ್ವಕಪ್ ಕನಸು

ಹ್ಯಾಟ್ರಿಕ್‌ ತಪ್ಪಿದ್ದು ಮೂರನೇ ಸಲ
ಪಂದ್ಯದ ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂನಂ, ‘ನಾನು ಗಾಯಗೊಂಡಿದ್ದ ವೇಳೆ ನನ್ನ ಫಿಸಿಯೊ ಮತ್ತು ಸಹ ಆಟಗಾರರು ಸಾಕಷ್ಟು ಬೆಂಬಲ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಚೆನ್ನಾಗಿ ಬೌಲ್‌ ಮಾಡಿದ್ದೇನೆ. ಅದನ್ನೇ ಮುಂದುವರಿಸಲು ಇಚ್ಛಿಸುತ್ತೇನೆ. ಗಾಯಗೊಂಡ ಬಳಿಕ ತಂಡದಲ್ಲಿ ಯಶಸ್ಸು ಸಾಧಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ನನ್ನ ತಂಡದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ನಾನು ಹ್ಯಾಟ್ರಿಕ್‌ ಮಿಸ್‌ಮಾಡಿಕೊಂಡದ್ದು ಇದು ಮೂರನೇ ಸಲ. ಮುಂದಿನ ದಿನಗಳಲ್ಲಿ ಖಂಡಿತಾ ಹ್ಯಾಟ್ರಿಕ್‌ ಕಬಳಿಸಲಿದ್ದೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು