ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಶತಕದ ಹೊಸ್ತಿಲಲ್ಲಿ ರೂಟ್

Last Updated 29 ಜನವರಿ 2021, 15:28 IST
ಅಕ್ಷರ ಗಾತ್ರ

ಚೆನ್ನೈ: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್ತಾವು ಟೆಸ್ಟ್‌ ಪದಾರ್ಪಣೆ ಮಾಡಿದ್ದ ದೇಶದಲ್ಲಿಯೇ 100ನೇ ಪಂದ್ಯವನ್ನೂ ಆಡಲಿದ್ದಾರೆ.

ಫೆಬ್ರುವರಿ 5ರಿಂದ ಚೆಪಾಕ್‌ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೊದಲ ಟೆಸ್ಟ್‌ ಅವರಿಗೆ ಶತಕದ ಪಂದ್ಯವಾಗಲಿದೆ. 2012ರಲ್ಲಿ ಅವರು ನಾಗಪುರದಲ್ಲಿ ಭಾರತದ ಎದುರಿನ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಅವರ ಈ ಸಾಧನೆಯನ್ನು ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ ಕೋಚ್ ಗ್ರಹಾಂ ಥೋರ್ಪ್ ಅವರು ಶ್ಲಾಘಿಸಿದ್ದಾರೆ.

’ದೀರ್ಘ ವೃತ್ತಿಜೀವನದಲ್ಲಿ ಹಲವು ಏಳು–ಬೀಳುಗಳನ್ನು ಅನುಭವಿಸಿರುವ ಜೋ ರೂಟ್ ಈಗ ನೂರನೇ ಟೆಸ್ಟ್ ಪಂದ್ಯ ಆಡಲು ಸಿದ್ಧರಾಗಿದ್ದಾರೆ. ಸಕಾರಾತ್ಮಕ ಮತ್ತು ವಿನೋದ ಪ್ರವೃತ್ತಿಯವರಾದ ಕಾರಣ ಇಷ್ಟು ದೊಡ್ಡ ಸಾಧನೆ ಅವರಿಂದ ಸಾಧ್ಯವಾಗಿದೆ ಎಂದು ಗ್ರಹಾಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

’ದೀರ್ಘ ವೃತ್ತಿಜೀವನದ ಹಾದಿಯಲ್ಲಿ ಯಾವಾಗಲೂ ವೈಫಲ್ಯಗಳು ಕಾಡುತ್ತವೆ. ಆದರೆ ಅವುಗಳಿಂದ ಹೊರಬರಲು ಮತ್ತು ಸ್ವಯಂಪ್ರೇರಣೆಯಿಂದ ಮುನ್ನುಗ್ಗಲು ದಿಟ್ಟ ಸ್ವಭಾವ ಮತ್ತು ಮನೋಬಲ ಇರಬೇಕು. ಅದು ರೂಟ್‌ ಅವರಲ್ಲಿದೆ‘ ಎಂದು ಗ್ರಹಾಂ ಅಭಿಪ್ರಾಯಪಟ್ಟರು.

’ತಮಗೆದುರಾದ ಎಲ್ಲ ರೀತಿಯ ಸವಾಲುಗಳನ್ನೂ ದಿಟ್ಟವಾಗಿ ಎದುರಿಸಿದರು. ಆ ಅನುಭವಗಳಿಂದಲೇ ಅವರು ಉತ್ತಮ ಟೆಸ್ಟ್‌ ಕ್ರಿಕೆಟಿಗನಾಗಿ ಬೆಳೆದರು. ಕೆಲವೊಮ್ಮೆ ವೈಫಲ್ಯಗಳಿಂದಾಗಿ ಆತ್ಮವಿಶ್ವಾಸ ಕುಗ್ಗಿ ಕೌಶಲಗಳು ಮಂಕಾಗುತ್ತವೆ. ಅಂತಹ ಪರಿಸ್ಥಿತಿಯಿಂದ ಮೇಲೆದ್ದು ಬರುವುದು ದೊಡ್ಡ ಸವಾಲು. ಅಂತಹ ಎಲ್ಲ ಕಷ್ಟನಷ್ಟಗಳನ್ನೂ ದಾಟಿ ಅವರು ಬಂದಿದ್ದಾರೆ. ಈ ಸಾಧನೆಯಿಂದಾಗಿ ಅವರ ಮೇಲೆ ಎಲ್ಲರಿಗೂ ಹೆಮ್ಮೆಯಾಗಲಿದೆ. ಅದರಲ್ಲೂ ಅವರ ಕುಟುಂಬವು ಬಹಳ ಹೆಮ್ಮೆಪಡಲಿದೆ‘ ಎಂದು ಗ್ರಹಾಂ ಹೇಳಿದರು.

’ರೂಟ್ ಬಹಳ ಚಿಕ್ಕವರಿದ್ದಾಗಿನಿಂದಲೂ ಅವರ ಆಟ ನೋಡಿದ್ದೇನೆ. ಯಾರ್ಕ್‌ಶೈರ್‌ನಲ್ಲಿದ್ದಾಗ ಅವರ ಕೌಶಲ, ಏಕಾಗ್ರತೆ ಮತ್ತು ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿದ್ದೇನೆ. ಆಟದ ಕುರಿತ ಬದ್ಧತೆ ಮತ್ತು ಪರಿಶ್ರಮಗಳು ಅವರಿಗೆ ಇದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT