ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಲ್ಕನ್ ಕ್ಲಬ್ ಸುವರ್ಣಮಹೋತ್ಸವ: ಕಣದಲ್ಲಿ ಖ್ಯಾತನಾಮ ಆಟಗಾರ್ತಿಯರು

ಜನವರಿ 4ರಿಂದ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ
Last Updated 2 ಜನವರಿ 2021, 18:28 IST
ಅಕ್ಷರ ಗಾತ್ರ

ಬೆಂಗಳೂರು: ಸುವರ್ಣಮಹೋತ್ಸವ ಆಚರಿಸುತ್ತಿರುವ ಫಾಲ್ಕನ್ ಕ್ರಿಕೆಟ್ ಕ್ಲಬ್ ಇದೇ 4 ರಿಂದ 12ರವರೆಗೆ ಬೆಂಗಳೂರಿನಲ್ಲಿ ಇಂಡಿಯನ್ ನಿಪ್ಪೋ ಕಪ್ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದೆ.

ಈ ಟೂರ್ನಿಯಲ್ಲಿ ಭಾರತ ತಂಡದ ಖ್ಯಾತನಾಮ ಆಟಗಾರ್ತಿಯರು ಕಣಕ್ಕಿಳಿಯುತ್ತಿದ್ದಾರೆ.

ಕರ್ನಾಟಕದ ವೇದಾ ಕೃಷ್ಣಮೂರ್ತಿ, ಜೆಮಿಮಾ ರಾಡ್ರಿಗಸ್, ಪೂನಮ್ ರಾವುತ್, ರಾಧಾ ಯಾದವ್, ದೀಪ್ತಿ ಶರ್ಮಾ ಅವರು ಈ ಟೂರ್ನಿಯಲ್ಲಿ ಆಡಲಿದ್ದಾರೆ.

ಈ ಕುರಿತು ಶನಿವಾರ ಮಾಹಿತಿ ನೀಡಿದ ಭಾರತ ಕ್ರಿಕೆಟ್ ತಂಡದ ಮೊದಲ ನಾಯಕಿ ಶಾಂತಾ ರಂಗಸ್ವಾಮಿ, ’1971ರಲ್ಲಿ ಕ್ಲಬ್‌ ಆರಂಭವಾಯಿತು. ನಾವೆಲ್ಲ ಬೆಳೆಯಲು ವೇದಿಕೆಯಾಯಿತು. ಇದೀಗ 50ನೇ ವರ್ಷಕ್ಕೆ ಕಾಲಿಟ್ಟಿದೆ. ಕೋವಿಡ್ ಕಾಲದಲ್ಲಿ ಎಲ್ಲ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಈ ಟೂರ್ನಿಯನ್ನು ಅಯೋಜಿಸುತ್ತಿದ್ದೇವೆ‘ ಎಂದರು.

’ಲೀಗ್ ಕಮ್ ನಾಕೌಟ್‌ ಮಾದರಿಯಲ್ಲಿ ಟೂರ್ನಿ ಆಯೋಜನೆಯಾಗಲಿದೆ. ಸಂಪ್ರಸಿದ್ಧಿ ಸ್ಪೋರ್ಟ್ಸ್‌ ಕ್ಲಬ್ ಮೈದಾನದಲ್ಲಿ ಟೂರ್ನಿ ನಡೆಯಲಿದೆ. ನಾಲ್ಕು ತಂಡಗಳು (ಫಾಲ್ಕನ್ ಹೆರಾನ್ಸ್‌, ಫಾಲ್ಕನ್ ಶೀನ್ ಸ್ಪೋರ್ಟ್ಸ್, ಫಾಲ್ಕನ್ ಕಿಣಿ ಆರ್‌ಆರ್ ಮತ್ತು ಫಾಲ್ಕನ್ ಅಮೆಯಾ ಸ್ಪೋರ್ಟ್ಸ್‌) ಆಡಲಿವೆ‘ ಎಂದು ಶಾಂತಾ ಹೇಳಿದರು.

’ಎಲ್ಲ ಪಂದ್ಯಗಳನ್ನೂ ಯೂಟ್ಯೂಬ್, ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲಾಗುವುದು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಕರ್ನಾಟಕದಿಂದ ಹೊರಗಿನ ಆಟಗಾರ್ತಿಯರು ಬರುವಾಗ ಆರ್‌ಟಿ ಪಿಸಿಆರ್ ಟೆಸ್ಟ್ ವರದಿಗಳನ್ನು ತರಲು ಸೂಚಿಸಲಾಗಿದೆ‘ ಎಂದು ಹೇಳಿದರು.

’ಫೈನಲ್ ಪಂದ್ಯದ ದಿನ ಭಾರತ ತಂಡದ ಆಟಗಾರ್ತಿ ಮಿಥಾಲಿ ರಾಜ್, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಿಥಾಲಿ ಅವರು ತಮ್ಮ ಪ್ರತಿಷ್ಟಾನದಿಂದ ಈ ಟೂರ್ನಿಯ ವಿಜೇತರಿಗೆ ₹ 50 ಸಾವಿರ ನಗದು ಪುರಸ್ಕಾರ ನೀಡಲಿದ್ದಾರೆ‘ ಎಂದು ಹೇಳಿದರು.

’ಆರು ಓವರ್‌ಗಳಲ್ಲಿ 42 ರನ್‌ ಗಳಿಸುವ ತಂಡಗಳಿಗೆ ಬೋನಸ್ ಪಾಯಿಂಟ್ ನೀಡಲಾಗುವುದು. ಇದರಿಂದಾಗಿ ಸ್ಪರ್ಧಾತ್ಮಕತೆ ಹೆಚ್ಚಲಿದೆ‘ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಕ್ರಿಕೆಟ್ ಆಟಗಾರ್ತಿ ಕಲ್ಪನಾ ತಿಳಿಸಿದರು.

ಈ ಸಂದರ್ಭದಲ್ಲಿ ನಾಲ್ಕು ತಂಡಗಳ ನಾಯಕಿಯರಾದ ವೇದಾ ಕೃಷ್ಣಮೂರ್ತಿ, ಜಿ. ದಿವ್ಯಾ, ರಕ್ಷಿತಾ ಕೃಷ್ಣಪ್ಪ ಮತ್ತು ಪ್ರತ್ಯುಷಾ ಅವರು ಟ್ರೋಫಿಯನ್ನು ಅನಾವರಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT