ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ICC T20 World Cup: ಯುಗಾಂಡಕ್ಕೆ ಚೊಚ್ಚಲ ಜಯ

Published 6 ಜೂನ್ 2024, 14:09 IST
Last Updated 6 ಜೂನ್ 2024, 14:09 IST
ಅಕ್ಷರ ಗಾತ್ರ

ಗಯಾನ: ‘ಕ್ರಿಕೆಟ್‌ ಶಿಶು’ಗಳ ಸೆಣಸಾಟದಲ್ಲಿ ಯುಗಾಂಡ ತಂಡವು ಗುರುವಾರ ಪಾಪುವಾ ನ್ಯೂಗಿನಿ ತಂಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು. ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಿರುವ ಯುಗಾಂಡಗೆ ಇದು ಚೊಚ್ಚಲ ಗೆಲುವು.

ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ನ್ಯೂಗಿನಿ ತಂಡದ ಬ್ಯಾಟರ್‌ಗಳು ಎದುರಾಳಿ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ ಕೊನೆಯ ಓವರಿನ ಮೊದಲ ಎಸೆತದಲ್ಲಿ 77 ರನ್‌ಗಳಿಗೆ ಪತನಗೊಂಡಿತು. 15 ರನ್‌ ಗಳಿಸಿದ ಹಿರಿ ಹಿರಿ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಮೂವರು ಮಾತ್ರ ಎರಡಂಕಿ ದಾಟಿದರು. ಯುಗಾಂಡದ ಅಲ್ಪೇಶ್ ರಾಮ್ಜಾನಿ, ಕಾಸ್ಮಾಸ್ ಕ್ಯೆವುಟಾ, ಜುಮಾ ಮಿಯಾಗಿ ಮತ್ತು ಫ್ರಾಂಕ್ ನ್ಸುಬುಗಾ ತಲಾ ಎರಡು ವಿಕೆಟ್ ಪಡೆದರು.

ಅಲ್ಪ ಮೊತ್ತದ ಗುರಿ ತಲುಪಲು ಯುಗಾಂಡ ತಂಡವು ಪ್ರಯಾಸಪಟ್ಟಿತು. ರಿಯಾಜತ್ ಅಲಿ ಶಾ ಗಳಿಸಿದ 33 ರನ್‌ಗಳ ನೆರವಿನಿಂದ ತಂಡವು 10 ಎಸೆತ ಬಾಕಿ ಇರುವಂತೆ 7 ವಿಕೆಟ್‌ಗೆ 78 ರನ್‌ ಗಳಿಸಿತು. 6 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ರಿಯಾಜತ್‌ ಆಸರೆಯಾದರು. ಅಲಿ ನಾವೊ ಮತ್ತು ನಾರ್ಮನ್ ವನುವಾ ತಲಾ ಎರಡು ವಿಕೆಟ್‌ ಪಡೆದರು.

‘ವಿಶ್ವಕಪ್‌ನ ಮೊದಲ ಗೆಲುವು ನಮಗೆ ಅತ್ಯಂತ ವಿಶೇಷವಾಗಿದೆ. ಇಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಾಗಿರಲಿಲ್ಲ’ ಎಂದು ಪಂದ್ಯದ ಆಟಗಾರ ಗೌರವಕ್ಕೆ ಪಾತ್ರವಾದ ರಿಯಾಜತ್ ಪ್ರತಿಕ್ರಿಯಿಸಿದರು.

ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 5 ವಿಕೆಟ್‌ಗಳಿಂದ ಪರಾಭವಗೊಂಡಿದ್ದ ನ್ಯೂಗಿನಿ ತಂಡಕ್ಕೆ ಇದು ಸತತ ಎರಡನೇ ಸೋಲು. ಯುಗಾಂಡ ಆರಂಭದ ಪಂದ್ಯದಲ್ಲಿ ಅಫ್ಗಾನಿಸ್ತಾನಕ್ಕೆ 125 ರನ್‌ಗಳಿಂದ ಮಣಿದಿತ್ತು.

ಸಂಕ್ಷಿಪ್ತ ಸ್ಕೋರ್‌:

ಪಾಪುವಾ ನ್ಯೂಗಿನಿ: 19.1 ಓವರ್‌ಗಳಲ್ಲಿ 77 (ಹಿರಿ ಹಿರಿ 15; ಅಲ್ಪೇಶ್ ರಾಮ್ಜಾನಿ 17ಕ್ಕೆ 2, ಕಾಸ್ಮಾಸ್ ಕ್ಯೆವುಟಾ 17ಕ್ಕೆ 2, ಜುಮಾ ಮಿಯಾಗಿ 10ಕ್ಕೆ 2, ಫ್ರಾಂಕ್ ನ್ಸುಬುಗಾ 4ಕ್ಕೆ 2);

ಯುಗಾಂಡ: 18.2 ಓವರ್‌ಗಳಲ್ಲಿ 7 ವಿಕೆಟ್‌ಗೆ 78 (ರಿಯಾಜತ್ ಅಲಿ ಶಾ 33; ಅಲಿ ನಾವೊ 16ಕ್ಕೆ 2, ನಾರ್ಮನ್ ವನುವಾ 19ಕ್ಕೆ 2). ಪಂದ್ಯದ ಆಟಗಾರ: ರಿಯಾಜತ್ ಅಲಿ ಶಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT