ಶುಕ್ರವಾರ, ಆಗಸ್ಟ್ 19, 2022
22 °C
ಹೊಸ ಪ್ರತಿಭೆಗಳ ಬ್ಯಾಟಿಂಗ್‌ಗೆ ತಲೆದೂಗಿದ ಜನ

14 ವರ್ಷದ ಒಳಗಿನವರ ಕ್ರಿಕೆಟ್‌: ಮೊದಲ ವಿಕೆಟ್‌ಗೆ 416 ರನ್‌ ಜೊತೆಯಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ತಂಡದ ಭರವಸೆಯ ಬ್ಯಾಟ್ಸ್‌ಮನ್‌ಗಳಾದ ಅಬ್ದುಲ್‌ಸಮಿ ದಿವಾನ್‌ಅಲಿ ಮತ್ತು ರೋಹಿತ್‌ ಎಂ.ಯರೇಶೀಮಿ ಅವರು ‘ಸ್ಕೈ 360’ 14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ಗಳ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ 416 ರನ್‌ಗಳನ್ನು ಕಲೆಹಾಕಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.

ಧಾರವಾಡದ ಫಸ್ಟ್‌ ಕ್ರಿಕೆಟ್ ಅಕಾಡೆಮಿ ಮೊದಲ ಬಾರಿಗೆ ಇಲ್ಲಿನ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯ ಮೊದಲ ದಿನವಾದ ಭಾನುವಾರ ನಡೆದ ಹುಬ್ಬಳ್ಳಿಯ ಚೈತನ್ಯ ಸ್ಪೋರ್ಟ್ಸ್ ಅಕಾಡೆಮಿ ವಿರುದ್ಧದ ಪಂದ್ಯದಲ್ಲಿ ರನ್ ಹೊಳೆ ಹರಿಯಿತು.

ಮೊದಲು ಬ್ಯಾಟ್‌ ಮಾಡಿದ ಬಿಡಿಕೆ ತಂಡ ನಿಗದಿತ 30 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 416 ರನ್ ಕಲೆಹಾಕಿತು. ಆರಂಭಿಕ ಜೋಡಿಯ ಅಮೋಘ ಬ್ಯಾಟಿಂಗ್‌ನಿಂದ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಬಲಗೈ ಬ್ಯಾಟ್ಸ್‌ಮನ್‌ಗಳಾದ ಅಬ್ದುಲ್‌ ಕೇವಲ 77 ಎಸೆತಗಳಲ್ಲಿ 157 ರನ್ ಗಳಿಸಿದರು. ಬೌಂಡರಿಗಳು (26) ಮತ್ತು ಸಿಕ್ಸರ್‌ಗಳ (4) ಮೂಲಕವೇ 128 ರನ್‌ಗಳು ಬಂದವು. ರೋಹಿತ್‌ 108 ಎಸೆತಗಳಲ್ಲಿ 202 ರನ್‌ ಗಳಿಸಿದರು. ಬೌಂಡರಿಗಳ (33) ಮೂಲಕವೇ 132 ರನ್‌ ಗಳಿಸಿದ್ದು ಅವರ ಬ್ಯಾಟಿಂಗ್‌ ಅಬ್ಬರಕ್ಕೆ ಸಾಕ್ಷಿಯಾಗಿದೆ. ಹೊಸ ಪ್ರತಿಭೆಗಳ ಈ ಸೊಗಸಾದ ಆಟದ ಕೌಶಲಕ್ಕೆ ಜನ ಚಪ್ಪಾಳೆಯ ಬಹುಮಾನ ನೀಡಿದರು.

ರೋಹಿತ್‌ ಇಲ್ಲಿನ ಆದರ್ಶ ನಗರದಲ್ಲಿರುವ ರೋಟರಿ ಶಾಲೆಯಲ್ಲಿ, ಅಬ್ದುಲ್‌ಸಮಿ ಸ್ಟೇಷನ್‌ ರಸ್ತೆಯ ಸೇಂಟ್‌ ಆ್ಯಂಡ್ರ್ಯೂ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು