ಬುಧವಾರ, ಆಗಸ್ಟ್ 21, 2019
28 °C
19 ವರ್ಷದೊಳಗಿನವರ ಕ್ರಿಕೆಟ್‌: ಫೈನಲ್‌ನಲ್ಲಿ ಬಾಂಗ್ಲಾ ಎದುರು ಗೆದ್ದ ಭಾರತ

ಕಿರಿಯರ ಮುಡಿಗೆ ಕಿರೀಟ

Published:
Updated:
Prajavani

ಹೋವ್‌, ಇಂಗ್ಲೆಂಡ್‌: ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಸಿಡಿಸಿದ ಅರ್ಧಶತಕಗಳ ಬಲದಿಂದ ಭಾರತದ 19 ವರ್ಷದೊಳಗಿನವರ ತಂಡದವರು ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಕೌಂಟಿ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಅಕ್ಬಲ್‌ ಅಲಿ ಮುಂದಾಳತ್ವದ ಬಾಂಗ್ಲಾ 50 ಓವರ್‌ಗಳಲ್ಲಿ 261ರನ್‌ ದಾಖಲಿಸಿತು. ಈ ಗುರಿಯನ್ನು ಪ್ರಿಯಂ ಗರ್ಗ್‌ ಸಾರಥ್ಯದ ಭಾರತ 48.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಯಶಸ್ವಿ ಜೈಸ್ವಾಲ್‌ (50; 72ಎ, 6ಬೌಂ) ಮತ್ತು ದಿವ್ಯಾಂಶ್‌ ಸಕ್ಸೇನಾ (55; 65ಎ, 5ಬೌಂ) ಭಾರತ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 104ರನ್‌ ಸೇರಿಸಿ ಗರ್ಗ್‌ ಪಡೆಯ ಗೆಲುವಿನ ಹಾದಿ ಸುಗಮ ಮಾಡಿತು.

23 ಮತ್ತು 26ನೇ ಓವರ್‌ಗಳಲ್ಲಿ ಕ್ರಮವಾಗಿ ಸಕ್ಸೇನಾ ಮತ್ತು ಜೈಸ್ವಾಲ್‌ ವಿಕೆಟ್‌ ಉರುಳಿಸಿದ ರಕೀಬುಲ್‌ ಹಸನ್‌, ಬಾಂಗ್ಲಾ ಆಟಗಾರರು ನಿಟ್ಟುಸಿರು ಬಿಡುವಂತೆ ಮಾಡಿದರು. ಕೆ.ಪ್ರಜ್ಞೇಶ್‌ ಕೂಡ ಬೇಗನೆ ಪೆವಿಲಿಯನ್‌ ಸೇರಿದ್ದರಿಂದ ಬಾಂಗ್ಲಾ ತಂಡ ಜಯದ ಕನಸು ಕಂಡಿತ್ತು.

ಈ ಹಂತದಲ್ಲಿ ಒಂದಾದ ನಾಯಕ ಪ್ರಿಯಂ (73; 66ಎ, 4ಬೌಂ, 2ಸಿ) ಮತ್ತು ವಿಕೆಟ್‌ ಕೀಪರ್‌ ಧ್ರುವ ಜುರೆಲ್‌ (ಔಟಾಗದೆ 59; 73ಎ, 4ಬೌಂ, 1ಸಿ) ಬಾಂಗ್ಲಾ ಬೌಲರ್‌ಗಳನ್ನು ಕಾಡಿದರು. ಇವರು ನಾಲ್ಕನೇ ವಿಕೆಟ್‌ಗೆ 109ರನ್‌ ಸೇರಿಸಿ ತಂಡವನ್ನು ಜಯದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದರು.

46ನೇ ಓವರ್‌ನ ಕೊನೆಯ ಎಸೆತದಲ್ಲಿ ಪ್ರಿಯಂ ಔಟಾದರು. ಬಳಿಕ ಜುರೆಲ್‌ ಹಾಗೂ ತಿಲಕ್‌ ವರ್ಮಾ (ಔಟಾಗದೆ 16; 10ಎ, 3ಬೌಂ) ಗೆಲುವಿನ ಶಾಸ್ತ್ರ ಮುಗಿಸಿದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ: 50 ಓವರ್‌ಗಳಲ್ಲಿ 261 (ತಂಜಿದ್‌ ಹಸನ್‌ 26, ಪರ್ವೇಜ್‌ ಹೊಸೈನ್‌ ಎಮೊನ್‌ 60, ಮಹಮದುಲ್‌ ಹಸನ್‌ ರಾಯ್‌ 109, ಶಮೀಮ್‌ ಹೊಸೈನ್‌ 32; ಕಾರ್ತಿಕ್‌ ತ್ಯಾಗಿ 49ಕ್ಕೆ2, ಸುಶಾಂತ್‌ ಮಿಶ್ರಾ 33ಕ್ಕೆ2, ರವಿ ಬಿಷ್ಣೋಯಿ 50ಕ್ಕೆ1, ಶುಭಾಂಗ್‌ ಹೆಗ್ಡೆ 42ಕ್ಕೆ1).

ಭಾರತ: 48.4 ಓವರ್‌ಗಳಲ್ಲಿ 264 (ಯಶಸ್ವಿ ಜೈಸ್ವಾಲ್‌ 50, ದಿವ್ಯಾಂಶ್‌ ಸಕ್ಸೇನಾ 55, ಪ್ರಿಯಂ ಗರ್ಗ್‌ 73, ಧ್ರುವ ಜುರೆಲ್‌ ಔಟಾಗದೆ 59, ತಿಲಕ್‌ ವರ್ಮಾ ಔಟಾಗದೆ 16; ಶೋರಿಫುಲ್‌ ಇಸ್ಲಾಂ 42ಕ್ಕೆ1, ಮೃತ್ಯುಂಜಯ ಚೌಧರಿ 49ಕ್ಕೆ1, ರಕೀಬುಲ್‌ ಹಸನ್‌ 55ಕ್ಕೆ2).

ಫಲಿತಾಂಶ: ಭಾರತಕ್ಕೆ 6 ವಿಕೆಟ್‌ ಗೆಲುವು ಹಾಗೂ ಪ್ರಶಸ್ತಿ.

Post Comments (+)