ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್‌ಗೆ ತೆರೆ; ಡುಪ್ಲಾಂಟಿಸ್‌, ಟೋಬಿ ವಿಶ್ವದಾಖಲೆ

ಪದಕ ಗಳಿಕೆಯಲ್ಲಿ ಅಮೆರಿಕ ದಾಖಲೆ
Last Updated 26 ಜುಲೈ 2022, 3:10 IST
ಅಕ್ಷರ ಗಾತ್ರ

ಯೂಜಿನ್‌, ಅಮೆರಿಕ: ಸ್ವೀಡನ್‌ನ ಅರ್ಮಾಂಡ್‌ ಡುಪ್ಲಾಂಟಿಸ್‌ ಮತ್ತು ನೈಜೀರಿಯದ ಟೋಬಿ ಅಮ್ಯುಸನ್‌ ಅವರು ವಿಶ್ವ ಆಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಕೊನೆಯ ದಿನ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು.

ಭಾನುವಾರ ನಡೆದ ಪುರುಷರ ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ಡುಪ್ಲಾಂಟಿಸ್‌ 6.21 ಮೀ. ಎತ್ತರ ಜಿಗಿದು, ತಮ್ಮದೇ ಹೆಸರಿನಲ್ಲಿರುವ ದಾಖಲೆಯನ್ನು ಒಂದು ಸೆಂ.ಮೀ. ಅಂತರದಿಂದ ಉತ್ತಮಪಡಿಸಿಕೊಂಡರು. ಮಾರ್ಚ್ ತಿಂಗಳಲ್ಲಿ ನಡೆದಿದ್ದ ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ನಲ್ಲಿ ಅವರು 6.20 ಮೀ. ಸಾಧನೆ ಮಾಡಿದ್ದರು.

ಅಮೆರಿಕದ ಕ್ರಿಸ್‌ ನಿಲ್ಸೆನ್ (5.94 ಮೀ.) ಬೆಳ್ಳಿ ಜಯಿಸಿದರೆ, ಫಿಲಿಪ್ಪೀನ್ಸ್‌ನ ಅರ್ನೆಸ್ಟ್‌ ಜಾನ್ ಒಬೀನಾ (5.94 ಮೀ.) ಕಂಚು ಪಡೆದುಕೊಂಡರು.

ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಟೋಬಿ 12.06 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಸೆಮಿಫೈನಲ್‌ನಲ್ಲಿ ಅವರು 12.12 ಸೆ.ಗಳೊಂದಿಗೆ ವಿಶ್ವದಾಖಲೆ ಸ್ಥಾಪಿಸಿದ್ದರು. ಫೈನಲ್‌ನಲ್ಲಿ ಗಾಳಿಯ ನೆರವು ಕೂಡಾ ಇದ್ದ ಕಾರಣ ಆ ಸಮಯವನ್ನು ದಾಖಲೆಗೆ ಪರಿಗಣಿಸಲಿಲ್ಲ.

ಅಮೆರಿಕದ ಕೆನಿ ಹ್ಯಾರಿಸನ್ ಅವರು 2016 ರಲ್ಲಿ ಸ್ಥಾಪಿಸಿದ್ದ ವಿಶ್ವದಾಖಲೆಯನ್ನು (12.20 ಸೆ.) ಟೋಬಿ ಮುರಿದರು.

ಜಮೈಕದ ಬ್ರಿಟ್ನಿ ಆ್ಯಂಡರ್ಸನ್ (12.23 ಸೆ.) ಎರಡನೇ ಹಾಗೂ ಪೋರ್ಟೊರಿಕೊದ ಜಾಸ್ಮಿನ್ ಕಮಾಚೊ ಕ್ವಿನ್ (12.23 ಸೆ.) ಮೂರನೇ ಸ್ಥಾನ ಗಳಿಸಿದರು.

ಜರ್ಮನಿಯ ಒಲಿಂಪಿಕ್‌ ಚಾಂಪಿಯನ್‌ ಮಲೈಕಾ ಮಿಹಾಂಬೊ ಅವರು ಮಹಿಳೆಯರ ಲಾಂಗ್‌ಜಂಪ್‌ನಲ್ಲಿ 7.12 ಮೀ. ಸಾಧನೆಯೊಂದಿಗೆ ಅಗ್ರಸ್ಥಾನ ಪಡೆದುಕೊಂಡರು.

ಮೊದಲ ಎರಡು ಪ್ರಯತ್ನಗಳಲ್ಲಿ ಫೌಲ್‌ ಆದರೂ ಒತ್ತಡಕ್ಕೊಳಗಾಗದ ಮಿಹಾಂಬೊ ಬಳಿಕ ಚೇತರಿಕೆಯ ಪ್ರದರ್ಶನ ನೀಡಿ ಕೊನೆಯ ಅವಕಾಶದಲ್ಲಿ ಚಿನ್ನದೆಡೆಗೆ ಜಿಗಿದರು.

ನೈಜೀರಿಯದ ಇಸೆ ಬ್ರೂಮ್ (7.02 ಮೀ.) ಬೆಳ್ಳಿ ಹಾಗೂ ಬ್ರೆಜಿಲ್‌ನ ಲೆಟಿಸಿಯಾ ಮೆಲೊ (6.89 ಮೀ.) ಕಂಚು ಪಡೆದುಕೊಂಡರು.

ಅಮೆರಿಕಕ್ಕೆ ದಾಖಲೆಯ ಪದಕ: 10 ದಿನ ನಡೆದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಅತಿಥೇಯ ಅಮೆರಿಕ ಪೂರ್ಣ ಪ್ರಭುತ್ವ ಮೆರೆಯಿತು. 13 ಚಿನ್ನ ಸೇರಿದಂತೆ ಒಟ್ಟು 33 ಪದಕಗಳೊಂದಿಗೆ ಅಗ್ರಸ್ಥಾನ ಗಳಿಸಿತು. ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲಿ ತಂಡವೊಂದು ಪಡೆದ ಅತ್ಯಧಿಕ ಪದಕ ಇದಾಗಿದೆ.

ನಾಲ್ಕು ಚಿನ್ನ ಒಳಗೊಂಡಂತೆ 10 ಪದಕ ಜಯಿಸಿದ ಇಥಿಯೋಪಿಯ ಎರಡನೇ ಸ್ಥಾನ ಗಳಿಸಿದರೆ, ಜಮೈಕಾ ಮೂರನೇ ಸ್ಥಾನ ಪಡೆಯಿತು.

ಭಾರತಕ್ಕೆ 33ನೇ ಸ್ಥಾನ
ಕೂಟದಲ್ಲಿ ಏಕೈಕ ಬೆಳ್ಳಿ ಪದಕ ಗೆದ್ದಿರುವ ಭಾರತ, ಪಟ್ಟಿಯಲ್ಲಿ ಜಂಟಿ 33ನೇ ಸ್ಥಾನ ಪಡೆದುಕೊಂಡಿತು. ಭಾರತ ಅಲ್ಲದೆ ಇತರ ಐದು ದೇಶಗಳು ತಲಾ ಒಂದು ಬೆಳ್ಳಿ ಜಯಿಸಿವೆ. ನೀರಜ್‌ ಚೋಪ್ರಾ ಅವರು ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ಈ ಬಾರಿ ಒಟ್ಟು 45 ರಾಷ್ಟ್ರಗಳು ಪದಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT