ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಚಿಗುರೊಡೆದ ಗೆಲುವಿನ ಆಸೆ

ಪೂಜಾರಗೆ ಮತ್ತೊಮ್ಮೆ ಬಲೆ ಹೆಣೆದ ವಿದರ್ಭದ ಫೈಜ್ ಫಜಲ್ ಬಳಗ
Last Updated 6 ಫೆಬ್ರುವರಿ 2019, 15:35 IST
ಅಕ್ಷರ ಗಾತ್ರ

ನಾಗಪುರ: ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಮಧ್ಯಾಹ್ನ ನಿರಾಸೆಗೆ ಒಳಗಾಗಿದ್ದ ವಿದರ್ಭ ತಂಡದಲ್ಲಿ ಸಂಜೆಯ ವೇಳೆ ಭರವಸೆಯ ಬೆಳ್ಳಿ ರೇಖೆ ಮೂಡಿತು. ಇಲ್ಲಿನ ಜಮ್ತಾದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನ ನಾಲ್ಕನೇ ದಿನ ಸೌರಾಷ್ಟ್ರ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಗೆ ಪೆಟ್ಟು ನೀಡಿದ ವಿದರ್ಭ, ಸತತ ಎರಡನೇ ಗೆಲುವಿನ ಹಾದಿಯಲ್ಲಿ ಹೆಜ್ಜೆ ಇರಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ಐದು ರನ್‌ಗಳ ಮುನ್ನಡೆ ಗಳಿಸಿದ್ದ ಸೌರಾಷ್ಟ್ರ, ವಿದರ್ಭವನ್ನು ಎರಡನೇ ಇನಿಂಗ್ಸ್‌ನಲ್ಲಿ 200 ರನ್‌ಗಳಿಗೆ ಕಟ್ಟಿ ಹಾಕಿತು. 206 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡವನ್ನು ವಿದರ್ಭ ಬೌಲರ್‌ಗಳು ನಿರಂತರವಾಗಿ ಕಾಡಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಎದುರಾಳಿಗಳ ಐದು ವಿಕೆಟ್‌ಗಳು ಉರುಳಿದ್ದು ಗೆಲುವಿಗೆ ಇನ್ನೂ 148 ರನ್‌ಗಳು ಬೇಕಾಗಿವೆ.

ಮೊದಲ ಇನಿಂಗ್ಸ್‌ನಲ್ಲಿ ಒಂದು ರನ್‌ ಗಳಿಸಿ ಎಡಗೈ ಸ್ಪಿನ್ನರ್‌ ಆದಿತ್ಯ ಸರವಟೆಗೆ ವಿಕೆಟ್ ಒಪ್ಪಿಸಿದ್ದ ಚೇತೇಶ್ವರ ಪೂಜಾರ ಎರಡನೇ ಇನಿಂಗ್ಸ್‌ನಲ್ಲೂ ಇದೇ ಬೌಲರ್‌ ಹೆಣೆದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿದರು. 19 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರವು ಪೂಜಾರ ಔಟಾದಾಗ ಮೂರು ವಿಕೆಟ್ ನಷ್ಟಕ್ಕೆ 22 ರನ್ ಎಂಬ ಶೋಚನೀಯ ಸ್ಥಿತಿಗೆ ಸಿಲುಕಿತು.

ಚೆಂಡು ತಿರುವು ಮತ್ತು ಬೌನ್ಸ್‌ ಪಡೆಯುತ್ತಿದ್ದ ಪಿಚ್‌ನ ಸದುಪಯೋಗ ಪಡೆದುಕೊಂಡ ಆದಿತ್ಯ ಸರವಟೆ ಅಗ್ರ ಕ್ರಮಾಂಕದ ಮೂವರ ವಿಕೆಟ್ ಕಬಳಿಸಿದರು. ವಸವದಾ ಮತ್ತು ಅಪಾಯಕಾರಿ ಶೆಲ್ಡನ್ ಜಾಕ್ಸನ್ ಅವರನ್ನು ಕ್ರಮವಾಗಿ ಉಮೇಶ್ ಯಾದವ್ ಮತ್ತು ಅಕ್ಷಯ್ ವಾಖರೆ ಔಟ್ ಮಾಡಿದಾಗ ತಂಡದ ಮೊತ್ತ ಕೇವಲ 55 ರನ್ ಆಗಿತ್ತು. ಹೀಗಾಗಿ ತಂಡ ತೀವ್ರ ಆತಂಕಕ್ಕೆ ಒಳಗಾಯಿತು. ಕ್ರೀಸ್‌ನಲ್ಲಿರುವ ವಿಶ್ವರಾಜ್ ಜಡೇಜ ಮತ್ತು ಕಮಲೇಶ್ ಮಕ್ವಾನ ಭರವಸೆಯಾಗಿ ಉಳಿದಿದ್ದಾರೆ.

ಧರ್ಮೇಂದ್ರ ಸಿಂಗ್ ಜಡೇಜ ಮಿಂಚು:ಎಡಗೈ ಸ್ಪಿನ್ನರ್ ಧರ್ಮೇಂದ್ರ ಸಿಂಗ್ ಜಡೇಜ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಸೌರಾಷ್ಟ್ರ, ಎದುರಾಳಿಗಳನ್ನು ಬೇಗನೇ ಆಲೌಟ್ ಮಾಡಿತು. ಆದಿತ್ಯ ಸರವಟೆ, ಮೋಹಿತ್ ಕಾಳೆ ಮತ್ತು ಗಣೇಶ್ ಸತೀಶ್‌ ಅವರನ್ನು ಹೊರತುಪಡಿಸಿದರೆ ಉಳಿದ ಯಾರಿಗೂ ಪ್ರತಿರೋಧ ಒಡ್ಡಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ವಿದರ್ಭ 312, ಸೌರಾಷ್ಟ್ರ: 307; ಎರಡನೇ ಇನಿಂಗ್ಸ್‌: ವಿದರ್ಭ (ಮಂಗಳವಾರದ ಅಂತ್ಯಕ್ಕೆ 31 ಓವರ್‌ಗಳಲ್ಲಿ 2ಕ್ಕೆ 55): 92.5 ಓವರ್‌ಗಳಲ್ಲಿ 200 (ಗಣೇಶ್‌ ಸತೀಶ್‌ 35, ಮೋಹಿತ್‌ ಕಾಳೆ 38, ಆದಿತ್ಯ ಸರವಟೆ 49; ಜಯದೇವ್ ಉನದ್ಕತ್‌ 30ಕ್ಕೆ1, ಚೇತನ್‌ ಸಕಾರಿಯಾ 19ಕ್ಕೆ1, ಕಮಲೇಶ್‌ ಮಕ್ವಾನ 51ಕ್ಕೆ2, ಧರ್ಮೇಂದ್ರ ಸಿಂಗ್‌ ಜಡೇಜ 96ಕ್ಕೆ6) ಎರಡನೇ ಇನಿಂಗ್ಸ್‌: ಸೌರಾಷ್ಟ್ರ: 28 ಓವರ್‌ಗಳಲ್ಲಿ 5ಕ್ಕೆ 58 (ಹರ್ವಿಕ್‌ ದೇಸಾಯಿ 8, ಸ್ನೆಲ್‌ ಪಟೇಲ್‌ 12, ವಿಶ್ವರಾಜ್‌ ಜಡೇಜ ಬ್ಯಾಟಿಂಗ್‌ 23, ಚೇತೇಶ್ವರ ಪೂಜಾರ 0, ಅರ್ಪಿತ್‌ ವಸವದಾ 5, ಶೆಲ್ಡನ್‌ ಜ್ಯಾಕ್ಸನ್‌ 7, ಕಮಲೇಶ್‌ ಮಕ್ವಾನ ಬ್ಯಾಟಿಂಗ್‌ 2; ಆದಿತ್ಯ ಸರವಟೆ 13ಕ್ಕೆ3, ಉಮೇಶ್‌ ಯಾದವ್‌ 27ಕ್ಕೆ1, ಅಕ್ಷಯ್‌ ವಾಖರೆ 18ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT