ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ಪಾಂಡೆ ಪಡೆಗೆ ‘ವಿಜಯ’ ಕಿರೀಟ

ಕ್ರಿಕೆಟ್: ‘ಬರ್ತ್‌ಡೆ ಬಾಯ್’ ಮಿಥುನ್ ದಾಖಲೆ ಹ್ಯಾಟ್ರಿಕ್; ಮಯಂಕ್–ರಾಹುಲ್ ಅರ್ಧಶತಕ; ಮಳೆಗಿಂತ ಮುಂದಿದ್ದ ಕರ್ನಾಟಕ
Last Updated 25 ಅಕ್ಟೋಬರ್ 2019, 18:36 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಅಂಗಳದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಮಳೆಯ ನೀರಿನಲ್ಲಿ ಕರ್ನಾಟಕ ತಂಡದವರ ಆನಂದಭಾಷ್ಪ ಮತ್ತು ತಮಿಳುನಾಡು ಬಳಗದವರ ನಿರಾಸೆಯ ಹನಿಗಳೂ ಸೇರಿಕೊಂಡು ಹರಿದವು!

ತಮ್ಮ ಮೂವತ್ತನೇ ಜನ್ಮದಿನದಂದು ಹ್ಯಾಟ್ರಿಕ್ ಮಾಡಿದ ‘ಪೀಣ್ಯ ಎಕ್ಸ್‌ಪ್ರೆಸ್’ ಅಭಿಮನ್ಯು ಮಿಥುನ್ (34ಕ್ಕೆ5) ಕರ್ನಾಟಕ ತಂಡಕ್ಕೆ ವಿಜಯ್ ಹಜಾರೆ ಟ್ರೋಫಿಯ ಉಡುಗೊರೆ ನೀಡಿದರು. ದೇಶಿ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ 60 ರನ್‌ಗಳ (ವಿ.ಜಯದೇವನ್ ನಿಯಮ) ಜಯ ದಾಖಲಿಸಿತು. ಇದರೊಂದಿಗೆ ನಾಲ್ಕನೇ ಬಾರಿ ರಣಜಿ ಟ್ರೋಫಿ ಟೂರ್ನಿಯ ಏಕದಿನ ಮಾದರಿ ಕ್ರಿಕೆಟ್‌ನ ಕಿರೀಟ ಧರಿಸಿಕೊಂಡಿತು.

ಈ ಟೂರ್ನಿಯ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ 13ನೇ ಮತ್ತು ಕರ್ನಾಟಕದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯೂ ಮಿಥುನ್ ಅವರದ್ದಾಯಿತು.

ಕ್ರೀಡಾಂಗಣದಲ್ಲಿ ಸೇರಿದ್ದ ಮೂರು ಸಾವಿರಕ್ಕೂ ಹೆಚ್ಚು ಕ್ರಿಕೆಟ್‌ಪ್ರೇಮಿಗಳು ಸಂತಸದ ಹೊಳೆಯಲ್ಲಿ ತೇಲಾಡಿದರು. ಹನಿಯುತ್ತಿದ್ದ ಮಳೆಯಲ್ಲಿ ನೆಂದುಕೊಂಡೇ ಆತಿಥೇಯ ಅಟಗಾರರು ಟ್ರೋಫಿ ಸ್ವೀಕರಿಸಿ, ಪ್ರೇಕ್ಷಕರತ್ತ ಹೋಗಿ ಕೈಬೀಸಿ ಕೃತಜ್ಞತೆ ಸಲ್ಲಿಸಿದರು. ಜನರು ತಮ್ಮ ಮೊಬೈಲ್‌ಗಳಲ್ಲಿ ಈ ಕ್ಷಣವನ್ನು ದಾಖಲಿಸಿಕೊಂಡು ಕೇಕೆ ಹಾಕಿದರು.

2013–14 ಮತ್ತು 2014–15ರಲ್ಲಿ ಸತತ ಎರಡು ಸಲ ಪ್ರಶಸ್ತಿ ಗೆದ್ದಾಗ ಆರ್. ವಿನಯಕುಮಾರ್ ನಾಯಕರಾಗಿದ್ದರು. 2017–18ರಲ್ಲಿ ಜಯಿಸಿದ್ದಾಗ ಕರುಣ್ ನಾಯರ್ ಮುಂದಾಳತ್ವ ವಹಿಸಿದ್ದರು. ಆ ಮೂರು ಸಲವೂ ತಂಡದಲ್ಲಿ ಆಡಿದ್ದ ಮನೀಷ್ ಪಾಂಡೆ ಈ ಬಾರಿ ರನ್‌ಗಳ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಮನೀಷ್ ನಾಯಕತ್ವದಲ್ಲಿಯೂ ಸೈ ಎನಿಸಿಕೊಂಡರು.

ಬೆಳಿಗ್ಗೆ ಟಾಸ್ ಗೆದ್ದ ಮನೀಷ್ ತೆಗೆದುಕೊಂಡ ನಿರ್ಧಾರವು ತಂಡಕ್ಕೆ ಗೆಲುವಿನ ಬಾಗಿಲು ತೆರೆಯಿತು. ಮಿಥುನ್ ಪರಿಣಾಮಕಾರಿ ದಾಳಿ ಮತ್ತು ಕರ್ನಾಟಕದವರ ಚುರುಕಾದ ಫೀಲ್ಡಿಂಗ್‌ನಿಂದಾಗಿ ತಮಿಳುನಾಡು ತಂಡಕ್ಕೆ 49.5 ಓವರ್‌ಗಳಲ್ಲಿ 252 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ಅಭಿನವ್ ಮುಕುಂದ್ (85;110ಎಸೆತ, 9ಬೌಂಡರಿ) ಮತ್ತು ಬಾಬಾ ಅಪರಾಜಿತ್ (66;84ಎಸೆತ, 7ಬೌಂಡರಿ) ಅವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಗಳಿಸಿದ 124 ರನ್‌ಗಳು ತಂಡದ ಗೌರವಯುತ ಮೊತ್ತಕ್ಕೆ ನೆರವಾದವು.

ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು ಮಳೆಯಿಂದ ಅಡಚಣೆಯಾಗುವ ಮುನ್ನವೇ ಸುರಕ್ಷಿತವಾಗಿರುವಂತೆ ಕೆ.ಎಲ್. ರಾಹುಲ್ (ಔಟಾಗದೆ 52; 72ಎಸೆತ, 5ಬೌಂಡರಿ) ಮತ್ತು ಮಯಂಕ್ ಅಗರವಾಲ್ (ಬ್ಯಾಟಿಂಗ್ 69; 55ಎಸೆತ, 7ಬೌಂಡರಿ, 3 ಸಿಕ್ಸರ್) ನೋಡಿಕೋಂಡರು. ಅಶ್ವಿನ್ ನೇತೃತ್ವದ ಸ್ಪಿನ್‌ ಬೌಲಿಂಗ್‌ ಪಡೆಯು ತತ್ತರಿಸಿತು.

ಕರ್ನಾಟಕವು 23 ಓವರ್‌ಗಳಲ್ಲಿ 1 ವಿಕೆಟ್‌ಗೆ 146 ರನ್‌ ಗಳಿಸಿದ್ದಾಗ, ದಟ್ಟ ಕಾರ್ಮೋಡಗಳು ಆವರಿಸಿ ಬೆಳಕು ಮಂದವಾಯಿತು. ಆಟವನ್ನು ನಿಲ್ಲಿಸಲಾಯಿತು. ನಂತರ ಸುರಿದ ರಭಸದ ಮಳೆಯಿಂದಾಗಿ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಆದರೆ, ವಿಜೆಡಿ ನಿಯಮದ ಪ್ರಕಾರ ಈ ಹೊತ್ತಿಗೆ ಕರ್ನಾಟಕವು 87 ರನ್‌ ಗಳಿಸಿದ್ದರೆ ಸಾಕಿತ್ತು. ಮನೀಷ್ ಪಡೆಯು ನಿಗದಿಗಿಂತ 60 ರನ್‌ಗಳನ್ನು ಹೆಚ್ಚು ಸೇರಿಸಿದ್ದು ನಿರಾಯಾಸ ಜಯ ಲಭಿಸಿತು.

ಅಮೋಘ ಕ್ಯಾಚ್, ಕೀಪಿಂಗ್: ಕ್ವಾರ್ಟರ್‌ಫೈನಲ್‌ನಿಂದಲೂ ವಿಕೆಟ್‌ ಕೀಪಿಂಗ್ ಹೊಣೆ ನಿರ್ವಹಿಸಿದ ಕೆ.ಎಲ್. ರಾಹುಲ್ ತಮಿಳುನಾಡಿನ ಪಾಲಿಗೆ ಸಿಂಹಸ್ವಪ್ನರಾದರು.

ಮೊದಲ ಓವರ್‌ನಲ್ಲಿ ಮಿಥುನ್ ಎಸೆತದಲ್ಲಿ ಮುರಳಿ ವಿಜಯ್ ಆಫ್‌ಸ್ಟಂಪ್‌ನಿಂದ ಹೊರಗಿದ್ದ ಎಸೆತವನ್ನು ಕಟ್ ಮಾಡಿದರು. ತಮ್ಮ ಬಲಬದಿಗೆ ಹಾರಿ ರಾಹುಲ್ ಪಡೆದ ಕ್ಯಾಚ್ ಆಕರ್ಷಕವಾಗಿತ್ತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಆರ್. ಅಶ್ವಿನ್, ದಿನೇಶ್ ಕಾರ್ತಿಕ್ ಅವರ ಕ್ಯಾಚ್‌ಗಳನ್ನು ಕೈವಶಮಾಡಿಕೊಂಡ ರಾಹುಲ್, ಅಪರಾಜಿತ್ ಅವರ ರನ್‌ಔಟ್‌ಗೂ ಕಾರಣರಾದರು. ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ಅವರು ಮಯಂಕ್ ಜೊತೆಗೆ ಮುರಿಯದ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 112 ರನ್‌ ಸೇರಿಸಿದರು.

ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಿಥುನ್ ಅವರು ಶಾರೂಕ್ ಖಾನ್ (ಎಸೆತ; 49.3), ಮೊಹಮ್ಮದ್ (49.4) ಮತ್ತು ಮುರುಗನ್ ಅಶ್ವಿನ್ (49.5) ಅವರ ವಿಕೆಟ್‌ಗಳನ್ನು ಕಬಳಿಸಿದರು. ಕ್ರಮವಾಗಿ ಈ ಮೂರು ಕ್ಯಾಚ್‌ಗಳನ್ನು ಪಡೆದ ಪಾಂಡೆ, ಪಡಿಕ್ಕಲ್ ಮತ್ತು ಗೌತಮ್‌ ಮಿಂಚಿದರು.

ಹ್ಯಾಟ್ರಿಕ್ ಸಾಧಕ ಮಿಥುನ್ ಅಭಿಮನ್ಯು

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಕರ್ನಾಟಕದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಅಭಿಮನ್ಯು ಮಿಥುನ್ ಪಾತ್ರರಾದರು. ಫೈನಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್‌ ಎಂಬ ಗೌರವವೂ ಅವರದ್ದಾಯಿತು. ಒಟ್ಟಾರೆ 13ನೇ ಹ್ಯಾಟ್ರಿಕ್ ಬೌಲರ್‌ ಆದರು ಎಂದು ಕ್ರಿಕೆಟ್ ಅಂಕಿ ಸಂಖ್ಯೆ ತಜ್ಞ ಚನ್ನಗಿರಿ ಕೇಶವಮೂರ್ತಿ ತಿಳಿಸಿದ್ಧಾರೆ.

ತಮ್ಮ ಸಾಧನೆಯ ಕುರಿತು ಪಂದ್ಯದ ನಂತರ ಪ್ರತಿಕ್ರಿಯಿಸಿದ ಮಿಥುನ್, ‘ಹ್ಯಾಟ್ರಿಕ್ ಸಾಧನೆ ಮಾಡಿದ್ದು ಅರಿವಿಗೆ ಬರಲಿಲ್ಲ. ಆಗ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ವಿಕೆಟ್ ಕಬಳಿಸುವ ಗುರಿಯೊಂದೇ ಮನದಲ್ಲಿತ್ತು. ಆ ಮೇಲೆ ಹ್ಯಾಟ್ರಿಕ್ ಸಾಧನೆಯ ಕುರಿತು ತಿಳಿದಾಗ ಸಂತಸವಾಯಿತು’ ಎಂದರು.

ಆರ್. ವಿನಯಕುಮಾರ್ ಅವರು ಪುದುಚೇರಿ ತಂಡಕ್ಕೆ ವಲಸೆ ಹೋಗಿದ್ದರಿಂದ ಈ ವರ್ಷ ಕರ್ನಾಟಕದ ಬೌಲಿಂಗ್ ವಿಭಾಗದ ಹೊಣೆ ಮಿಥುನ್ ಮೇಲಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರಸಿದ್ಧ ಕೃಷ್ಣ, ರೋನಿತ್ ಮತ್ತು ಕೌಶಿಕ್ ಪ್ರತಿಭಾನ್ವಿತರು. ಹೋದ ಎರಡು ಪಂದ್ಯಗಳಲ್ಲಿ ಪ್ರಸಿದ್ಧ ಗಾಯಗೊಂಡು ಹೊರಗುಳಿದರು. ಆಗ ಕೌಶಿಕ್ ಚೆನ್ನಾಗಿ ಆಡಿದರು. ಫೈನಲ್‌ನಲ್ಲಿ ಪದಾರ್ಪಣೆ ಮಾಡಿದ ಪ್ರತೀಕ್ ಜೈನ್ ಕೂಡ ಭರವಸೆ ಮೂಡಿಸಿದ್ದಾರೆ. ಇದೊಂದು ಒಳ್ಳೆಯ ಅನುಭವ. ಅಂತಿಮವಾಗಿ ನಮ್ಮ ಶ್ರಮಕ್ಕೆ ತಕ್ಕ ಫಲ ಲಭಿಸಿರುವುದು ತೃಪ್ತಿದಾಯಕ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT