ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರ್‌ ಬದಲಿಗೆ ರಾಥೋಡ್‌ ಬ್ಯಾಟಿಂಗ್‌ ಕೋಚ್‌

ಶ್ರೀಧರ್‌, ಭರತ್ ಅರುಣ್‌ ಸ್ಥಾನ ಅಬಾಧಿತ
Last Updated 22 ಆಗಸ್ಟ್ 2019, 19:47 IST
ಅಕ್ಷರ ಗಾತ್ರ

‌ಮುಂಬೈ: ಮಾಜಿ ಆರಂಭ ಆಟಗಾರ ವಿಕ್ರಮ್‌ ರಾಥೋಡ್‌ ಆವರನ್ನು ಸಂಜಯ್‌ ಬಂಗಾರ್ ಸ್ಥಾನದಲ್ಲಿ ಭಾರತ ಕ್ರಿಕೆಟ್‌ ತಂಡದ ಬ್ಯಾಟಿಂಗ್ ಕೋಚ್‌ ಆಗಿ ನೇಮಕ ಮಾಡಲಾಗಿದೆ. ನಿರೀಕ್ಷೆಯಂತೆ ಭರತ್‌ ಅರುಣ್‌ ಮತ್ತು ಆರ್‌.ಶ್ರೀಧರ್ ಅವರು ಕ್ರಮವಾಗಿ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಕೋಚ್‌ ಆಗಿ ಮುಂದುವರಿಯಲಿದ್ದಾರೆ.

ಕೋಚ್‌ಗೆ ಬೆಂಬಲ ಸಿಬ್ಬಂದಿಯಾಗಿ ಮೂರು ವಿಭಾಗಗಳಲ್ಲಿ ತಲಾ ಮೂವರ ಹೆಸರನ್ನು ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು. ಇವರಲ್ಲಿ ಪ್ರತೀ ವಿಭಾಗಗಳಲ್ಲಿ ಮೊದಲ ಸ್ಥಾನದಲ್ಲಿದ್ದವರ ಹೆಸರನ್ನು ಪರಿಗಣಿಸಲಾಯಿತು. ಹಿತಾಸಕ್ತಿ ಸಂಘರ್ಷ ವ್ಯಾಪ್ತಿಯ ಪರಿಶೀಲನೆ ನಂತರ ಅಧಿಕೃತವಾಗಿ ಅವರ ಹೆಸರನ್ನು ಪ್ರಕಟಿಸಲಾಗುವುದು.

50 ವರ್ಷದ ರಾಥೋಡ್‌ 1996ರಲ್ಲಿ ಆರು ಟೆಸ್ಟ್ ಹಾಗೂ ಏಳು ಏಕದಿನ ಪಂದ್ಯಗಳನ್ನು ಆಡಿದ್ದರು. ಅಂಥ ಯಶಸ್ಸು ಕಂಡಿರಲಿಲ್ಲ. ಆದರೆ ದೇಶಿ ಕ್ರಿಕೆಟ್‌ನಲ್ಲಿ ಅವರು ಪಂಜಾಬ್‌ ಪರ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿದ್ದರು. ಸಂದೀಪ್‌ ಪಾಟೀಲ್‌ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾಗ (2016) ಅವರು ಸದಸ್ಯರಾಗಿದ್ದರು.

ಈ ಹಿಂದೆ ಎನ್‌ಸಿಎ ಬ್ಯಾಟಿಂಗ್‌ ಕನ್ಸಲ್ಟೆಂಟ್‌ ಹುದ್ದೆಗೆ ಅವರು ಪ್ರಯತ್ನಿಸಿದ್ದರು. ಅಲ್ಲದೇ 19 ವರ್ಷದೊಳಗಿನವರ ತಂಡದ ಕೋಚ್‌ ಸ್ಥಾನಕ್ಕೂ ಅರ್ಜಿ ಹಾಕಿದ್ದರು. ಆದರೆ ಅವರ ಭಾವ ಆಶಿಷ್‌ ಕಪೂರ್‌ ಅವರು ಜೂನಿಯರ್‌ ತಂಡದ ಆಯ್ಕೆ ಸಮಿತಿ ಚೇರ್ಮನ್‌ ಆಗಿದ್ದ ಕಾರಣ ಅವರ ಅರ್ಜಿ ತಡೆಹಿಡಿಯಲಾಗಿತ್ತು.

ಭಾರತ ತಂಡದ ಆಡಳಿತಾತ್ಮಕ ಮ್ಯಾನೇಜರ್ ಆಗಿದ್ದ ಸುನೀಲ್‌ ಸುಬ್ರಮಣಿಯಂ ಅವರನ್ನು ನಿರೀಕ್ಷೆಯಂತೆ ಬದಲಿಸಲಾಗಿದ್ದು, ಗಿರೀಶ್‌ ಡೊಂಗ್ರೆ ಅವರಿಗೆ ಆ ಸ್ಥಾನ ನೀಡಲಾಗಿದೆ. ಇತ್ತೀಚೆಗೆ ವೆಸ್ಟ್‌ ಇಂಡೀಸ್‌ನಲ್ಲಿ ಭಾರತ ರಾಜತಾಂತ್ರಿಕ ಅಧಿಕಾರಿಗಳ ಎದುರು ಸುನೀಲ್‌ ಅನುಚಿತವಾಗಿ ನಡೆದುಕೊಂಡಿದ್ದ ಪ್ರಕರಣದಿಂದಾಗಿ ಅವರನ್ನು ಬದಲಾಯಿಸುವುದು ಖಚಿತ ಎಂದು ಕೇಳಿಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT