ಸೋಮವಾರ, ಜನವರಿ 20, 2020
17 °C
ಐಸಿಸಿ ಟೆಸ್ಟ್‌ ತಂಡದಲ್ಲಿ ಮಯಂಕ್ ಅಗರವಾಲ್‌, ಏಕದಿನ ತಂಡದಲ್ಲಿ ಮೊಹಮ್ಮದ್ ಶಮಿಗೆ ಸ್ಥಾನ

ವಿರಾಟ್ ಕೊಹ್ಲಿ ವರ್ಷದ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ : ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ವರ್ಷದ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕ ಸ್ಥಾನ ಭಾರತದ ವಿರಾಟ್ ಕೊಹ್ಲಿ ಮುಡಿಗೆ ಏರಿದೆ. ಟೆಸ್ಟ್ ತಂಡದಲ್ಲಿ ಕರ್ನಾಟಕದ ಮಯಂಕ್ ಅಗರವಾಲ್‌, ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್‌ ಸ್ಥಾನ ಗಳಿಸಿದ್ದು ಏಕದಿನ ತಂಡದಲ್ಲಿ ಮಧ್ಯಮ ವೇಗಿ ಮೊಹಮ್ಮದ್ ಶಮಿ ಇದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2019ರಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. 31 ವರ್ಷದ ಅವರು ಟೆಸ್ಟ್‌ನಲ್ಲಿ ಏಳನೇ ದ್ವಿಶತಕ ಗಳಿಸಿದ್ದು ಇದೇ ವರ್ಷ. ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಪಂದ್ಯದಲ್ಲಿ ಅವರು ಜೀವನಶ್ರೇಷ್ಠ 254 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ಮಯಂಕ್ ಅಗರವಾಲ್ ಕೂಡ ಕಳೆದ ವರ್ಷ ಅಮೋಘ ಸಾಧನೆ ಮಾಡಿದ್ದರು. ಟೆಸ್ಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿದಿದ್ದ ಅವರು ಎರಡು ದ್ವಿಶತಕ, ಒಂದು ಶತಕ ಮತ್ತು ಎರಡು ಅರ್ಧಶತಕ ಸಿಡಿಸಿದ್ದರು. ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗರಿಷ್ಠ 243 ರನ್ ಕಲೆ ಹಾಕಿದ್ದರು.

ಭಾರತ ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ದಾಖಲೆಯ ಐದು ಶತಕ ಮತ್ತು ಒಂದು ಅರ್ಧಶತಕ ಅವರ ಬ್ಯಾಟಿನಿಂದ ಸಿಡಿದ್ದಿದ್ದವು. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಎರಡು ಹ್ಯಾಟ್ರಿಕ್‌ಗಳ ಮೂಲಕ ಗಮನ ಸೆಳೆದಿದ್ದರು. ‌

ಸ್ವಿಂಗ್ ಮತ್ತು ಬೌನ್ಸರ್‌ಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ಮೊಹಮ್ಮದ್ ಶಮಿ 12 ತಿಂಗಳ ಅವಧಿಯಲ್ಲಿ 21 ಏಕದಿನ ಪಂದ್ಯಗಳಲ್ಲಿ 42 ವಿಕೆಟ್ ಕಬಳಿಸಿದ್ದರು.

ಐಸಿಸಿ ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಾಯ್‌ ಹೋಪ್‌, ಬಾಬರ್ ಆಜಂ, ಕೇನ್ ವಿಲಿಯಮ್ಸನ್‌, ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್ (ವಿಕೆಟ್ ಕೀಪರ್‌), ಮಿಚೆಲ್ ಸ್ಟಾರ್ಕ್‌, ಟ್ರೆಂಟ್ ಬೌಲ್ಟ್‌, ಮೊಹಮ್ಮದ್ ಶಮಿ, ಕುಲದೀಪ್ ಯಾದವ್.

ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್‌, ಟಾಮ್ ಲಥಾಮ್‌, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್‌, ಬೆನ್‌ ಸ್ಟೋಕ್ಸ್‌, ಬಿ.ಜೆ ವಾಟ್ಲಿಂಗ್ (ವಿಕೆಟ್ ಕೀಪರ್‌), ಪ್ಯಾಟ್ ಕಮಿನ್ಸ್‌, ಮಿಷೆಲ್ ಸ್ಟಾರ್ಟ್‌, ನೀಲ್  ವ್ಯಾಗ್ನರ್, ನೇಥನ್ ಲಯನ್‌.

ರೋಹಿತ್ ಏಕದಿನ ಕ್ರಿಕೆಟಿಗ

 

ದುಬೈ (ಪಿಟಿಐ): ಭಾರತದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ‘ವರ್ಷದ ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್ ಗಳಿಸಿಕೊಟ್ಟ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ಗೆ ‘ವರ್ಷದ ಕ್ರಿಕೆಟಿಗ’ ಗೌರವ ಸಂದಿದೆ. ಅವರು ಸರ್ ಗ್ಯಾರ್ಫಿಲ್ಡ್‌ ಸೋಬರ್ಸ್ ಟ್ರೋಫಿ ಗಳಿಸಲಿದ್ದಾರೆ.   

32 ವರ್ಷದ ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಐದು ಶತಕಗಳು ಮತ್ತು ಒಂದು ಅರ್ಧಶತಕ ಸೇರಿದಂತೆ ಒಂಬತ್ತು ಪಂದ್ಯಗಳಲ್ಲಿ ಒಟ್ಟು 648 ರನ್ ಗಳಿಸಿದ್ದರು. ಒಂದೇ ವಿಶ್ವಕಪ್‌ನಲ್ಲಿ ಐದು ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಕಳೆದ ಋತುವಿನಲ್ಲಿ ಒಟ್ಟಾರೆ 28 ಪಂದ್ಯಗಳಿಂದ ಏಳು ಶತಕ ಒಳಗೊಂಡಂತೆ ಅವರು ಗಳಿಸಿದ್ದು 1409 ರನ್‌.

ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಕುಸಿತ ಕಂಡಿದ್ದ ಇಂಗ್ಲೆಂಡ್‌ ತಂಡಕ್ಕೆ ಅಜೇಯ 84 ರನ್‌ ಗಳಿಸಿ ಸ್ಟೋಕ್ಸ್‌ ಚೇತರಿಕೆ ತುಂಬಿದ್ದರು. ಪಂದ್ಯ ಟೈ ಆದ ಕಾರಣ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು.

‘ಕಳೆದ ವರ್ಷ ನನ್ನ ವೃತ್ತಿ ಬದುಕಿನ ಅತ್ಯಂತ ಖುಷಿಯ ಕಾಲ. ಈ ವರ್ಷ ಗಳಿಸಿದ್ದು ಮುಂದಿನ ಹಾದಿಯಲ್ಲಿ ಉತ್ತಮ ಸಾಧನೆ ಮಾಡಲು ಅನುಕೂಲ ಆಗಲಿದೆ’ ಎಂದು ಸ್ಟೋಕ್ಸ್
ಹೇಳಿದ್ದಾರೆ. ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್‌ ‘ವರ್ಷದ ಟೆಸ್ಟ್ ಆಟಗಾರ’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸ್ಟೀವ್ ಸ್ಮಿತ್‌ ಮತ್ತು ಮಾರ್ನಸ್ ಲಾಬುಶೇನ್ ಅವರನ್ನು ಕಮಿನ್ಸ್ ಹಿಂದಿಕ್ಕಿದ್ದಾರೆ. ಆದರೆ ಲಾಬುಶೇನ್ ‘ಉದಯೋನ್ಮುಖ ಆಟಗಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 7ಕ್ಕೆ6 ವಿಕೆಟ್ ಉರುಳಿಸಿದ ಭಾರತದ ಮಧ್ಯಮ ವೇಗಿ ದೀಪಕ್ ಚಾಹರ್ ‘ವರ್ಷದ ಉತ್ತಮ ಟ್ವೆಂಟಿ–20’ ಆಟಗಾರ ಎನಿಸಿಕೊಂಡಿದ್ದಾರೆ.

ಸ್ಟೋಕ್ಸ್ ಐಸಿಸಿ ವರ್ಷದ ಕ್ರಿಕೆಟಿಗ

ದುಬೈ (ರಾಯಿಟರ್ಸ್‌): ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್‌ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆನ್ ಸ್ಟೋಕ್ಸ್ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಕುಸಿತ ಕಂಡಿದ್ದ ಇಂಗ್ಲೆಂಡ್‌ ತಂಡಕ್ಕೆ ಅಜೇಯ 84 ರನ್‌ ಗಳಿಸಿ ಸ್ಟೋಕ್ಸ್‌ ಚೇತರಿಕೆ ತುಂಬಿದ್ದರು. ಪಂದ್ಯ ಟೈ ಆದ ಕಾರಣ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು.

‘ಕಳೆದ ವರ್ಷ ನನ್ನ ವೃತ್ತಿ ಬದುಕಿನ ಅತ್ಯಂತ ಖುಷಿಯ ಕಾಲವಾಗಿತ್ತು. ಈ ವರ್ಷ ಗಳಿಸಿದ್ದೆಲ್ಲವೂ ಮುಂದಿನ ಹಾದಿಯಲ್ಲಿ ಉತ್ತಮ ಸಾಧನೆ ಮಾಡಲು ಅನುಕೂಲ ಆಗಲಿದೆ’ ಎಂದು ಸ್ಟೋಕ್ಸ್ ಅಭಿಪ್ರಾಯಪಟ್ಟರು.ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್‌ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸ್ಟೀವ್ ಸ್ಮಿತ್‌ ಮತ್ತು ಮಾರ್ನಸ್ ಲಾಬುಶೇನ್ ಅವರನ್ನು ಕಮಿನ್ಸ್ ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 7ಕ್ಕೆ6 ವಿಕೆಟ್ ಉರುಳಿಸಿದ ಮಧ್ಯಮ ವೇಗಿ ದೀಪಕ್ ಚಾಹರ್ ವರ್ಷದ ಉತ್ತಮ ಟ್ವೆಂಟಿ–20 ಆಟಗಾರ ಎಂದೆನಿಸಿಕೊಂಡಿದ್ದಾರೆ.

ಕೊಹ್ಲಿಗೆ ಕ್ರೀಡಾಸ್ಫೂರ್ತಿ ಪ್ರಶಸ್ತಿ

ವಿರಾಟ್ ಕೊಹ್ಲಿಗೆ ಐಸಿಸಿ ವರ್ಷದ ಕ್ರೀಡಾಸ್ಫೂರ್ತಿಯ ಆಟಗಾರ ಪ್ರಶಸ್ತಿಯೂ ಸಂದಿದೆ. ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಸಂದರ್ಭದಲ್ಲಿ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಗೇಲಿ ಮಾಡದಂತೆ ಪ್ರೇಕ್ಷಕರನ್ನು ಕೊಹ್ಲಿ ಕೋರಿಕೊಂಡಿದ್ದರು. ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದ ಸ್ಮಿತ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರು ಪ್ರವೇಶ ಮಾಡಿದ ಸಂದರ್ಭವಾಗಿತ್ತು ಅದು. ಅವರನ್ನು ಇಂಗ್ಲೆಂಡ್‌ನ ಪ್ರೇಕ್ಷಕರು ಗೇಲಿ ಮಾಡುವ ಸಾಧ್ಯತೆಯನ್ನು ಮನಗಂಡಿದ್ದ ಕೊಹ್ಲಿ ಈ ಕೋರಿಕೆ ಮುಂದಿಟ್ಟು ಗಮನ ಸೆಳೆದಿದ್ದರು.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು