ಶನಿವಾರ, ನವೆಂಬರ್ 28, 2020
26 °C

32ನೇ ವಸಂತಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿಗೆ ಶುಭಾಶಯಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್‌ ತಂಡ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಇಂದು 32ನೇ ಜನ್ಮದಿನಕ್ಕೆ ಕಾಲಿಟ್ಟರು. ಸದ್ಯ ಐಪಿಎಲ್‌–2020 ಸಲುವಾಗಿ ಯುಎಇಯಲ್ಲಿರುವ ಅವರು ಪತ್ನಿ ಅನುಷ್ಕಾ ಶರ್ಮಾ ಹಾಗೂ ಆರ್‌ಸಿಬಿ ತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು.

ಸಹ ಆಟಗಾರರು, ಮಾಜಿ ಕ್ರಿಕೆಟಿಗರು ಸೇರಿದಂತೆ ಸಾಕಷ್ಟು ಮಂದಿ ಟೀಂ ಇಂಡಿಯಾ ನಾಯಕನಿಗೆ ಶುಭ ಕೋರಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

‘ಶ್ರೇಷ್ಠ ಭಾರತೀಯ ಬ್ಯಾಟ್ಸ್‌ಮನ್‌ಗೆ ಜನ್ಮದಿನದ ಶುಭಾಶಯಗಳು’ ಎಂದು ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಶುಭಕೋರಿದ್ದಾರೆ.

‘ಜನ್ಮದಿನದ ಶುಭಾಶಯಗಳು ವಿರಾಟ್‌. ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ನಿಮ್ಮದಾಗಲಿ’ ಎಂದು ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.

‘ಜನ್ಮದಿನದ ಶುಭಾಶಯಗಳು ಬ್ರೋ’ ಎಂದು ಸಹ ಆಟಗಾರ ಶಿಖರ್ ಧವನ್ ಹಾರೈಸಿದ್ದಾರೆ.

ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ‘ನಿಮ್ಮ ಜನ್ಮದಿನ ಸಂತೋಷ ಮತ್ತು ನಗು ತರಲೆಂದು ಹಾರೈಸುತ್ತೇನೆ. ಪ್ಲೇ ಆಫ್‌ ಪಂದ್ಯಗಳಿಗೆ ಶುಭವಾಗಲಿ’ ಎಂದು ಟ್ವೀಟ್ ಮಾಡಿದ್ದಾರೆ.

246 ಏಕದಿನ, 82 ಟಿ20 ಮತ್ತು 86 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ವಿರಾಟ್‌, ಕ್ರಮವಾಗಿ 11,867 ರನ್, 2,794 ರನ್ ಮತ್ತು 7,240 ರನ್ ಗಳಿಸಿದ್ದಾರೆ. 70 ಶತಕಗಳು ಅವರ ಖಾತೆಯಲ್ಲಿವೆ. ಕೊಹ್ಲಿ ನಾಯಕತ್ವದ ಆರ್‌ಸಿಬಿ 5 ವರ್ಷಗಳ ಬಳಿಕ ಪ್ಲೇ ಆಫ್‌ ಹಂತಕ್ಕೇರಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಶುಕ್ರವಾರ ಎಲಿಮಿನೇಟರ್ ಪಂದ್ಯದಲ್ಲಿ ಆಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು