ಸೋಮವಾರ, ಜನವರಿ 27, 2020
22 °C
ಬಾರಾಬತಿಯ ಕಳಂಕ ತೊಡೆದ ಕೊಹ್ಲಿ; ರಾಹುಲ್, ರೋಹಿತ್ ಅಬ್ಬರ

‘ವಿರಾಟ್’ ಪಡೆಗೆ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಟಕ್ (ಪಿಟಿಐ): ಬಾರಾಬತಿ ಕ್ರೀಡಾಂಗಣವು ವಿರಾಟ್ ಕೊಹ್ಲಿ ಪಾಲಿಗೆ ಅದೃಷ್ಟದ ತಾಣವಾಯಿತು. ಈ ಮೈದಾನದಲ್ಲಿ ಅವರು ಇದೇ ಮೊದಲ ಬಾರಿಗೆ ಅಮೋಘ ಅರ್ಧಶತಕ ಗಳಿಸಿದರು. ಅದರೊಂದಿಗೆ ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಭಾರತದ ಜಯಭೇರಿಗೂ ಕಾರಣರಾದರು.

ಭಾನುವಾರ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳ ಆಟವೂ ಮನಗೆದ್ದಿತು. ಆದರೆ ಕೊನೆಗೆ ಆತಿಥೇಯರೇ ನಾಲ್ಕು ವಿಕೆಟ್‌ಗಳಿಂದ ಜಯಭೇರಿ ಬಾರಿಸಿದರು. ಇದರೊಂದಿಗೆ ಸರಣಿಯಲ್ಲಿ 2–1ರಿಂದ ಜಯಿಸಿತು. ವಿಂಡೀಸ್ ವಿರುದ್ಧ ಸತತ ಹತ್ತನೇ ಸರಣಿ ಜಯವಾಗಿದೆ. ಅಲ್ಲದೇ 13 ವರ್ಷಗಳ ಅಜೇಯ ಓಟವೂ ಮುಂದುವರಿಯಿತು.

ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದನ್ನು ಆರಂಭದಲ್ಲಿ ಬೌಲರ್‌ಗಳು ಸಮರ್ಥಿಸಿಕೊಂಡರು. ಇದರಿಂದಾಗಿ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆದರೆ, ಮಧ್ಯಮಕ್ರಮಾಂಕದಲ್ಲಿ ನಿಕೋಲಸ್ ಪೂರನ್ (89; 64ಎಸೆತ, 10ಬೌಂಡರಿ, 3ಸಿಕ್ಸರ್)ಮತ್ತು ಕೀರನ್ ಪೊಲಾರ್ಡ್ (ಔಟಾಗದೆ  74; 51ಎ,3ಬೌಂ, 7ಸಿ) ಅವರ ಅಬ್ಬರದ ಫಲವಾಗಿ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 315 ರನ್ ಗಳಿಸಿತು.

ಈ ಕಠಿಣ ಗುರಿಯನ್ನು ದಿಟ್ಟತನದಿಂದ ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಶರ್ಮಾ (63 ರನ್) ಮತ್ತು ಕೆ.ಎಲ್. ರಾಹುಲ್ (77 ರನ್) ಉತ್ತಮ ಅಡಿಪಾಯ ಹಾಕಿದರು. 21.2 ಓವರ್‌ಗಳಲ್ಲಿ ಇವರಿಬ್ಬರೂ ಸೇರಿ 122 ರನ್‌ಗಳನ್ನು ಕಲೆಹಾಕಿದರು. ಇವರಿಬ್ಬರು ಔಟಾದ ನಂತರ ವಿಂಡೀಸ್ ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ಹೆಜ್ಜೆ ಇಟ್ಟಿತ್ತು. ಎದುರಿಸಬೇಕಾದ ಎಸೆತಗಳಿಗಿಂತ ಗಳಿಸಬೇಕಿದ್ದ ರನ್‌ಗಳ ಪ್ರಮಾಣದ ಅಂತರವು ಹೆಚ್ಚಾಗುತ್ತಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ (85; 81ಎ, 9ಬೌಂ) ದಿಟ್ಟ ಆಟವು ರಂಗೇರಿತು.

ಆದರೆ ಅವರಿಗೆ ಶ್ರೇಯಸ್ ಅಯ್ಯರ್ (7ರನ್), ರಿಷಭ್ ಪಂತ್ (7ರನ್) ಮತ್ತು ಕೇದಾರ್ ಜಾಧವ್ (9 ರನ್) ಅವರಿಂದ ಬೆಂಬಲ ಸಿಗಲಿಲ್ಲ. ಆದರೂ ಏಕಾಂಗಿಯಾಗಿ ಆಡುತ್ತಿದ್ದ ಅವರಿಗೆ ತಕ್ಕ ಜೊತೆ ನೀಡಿದ್ದು ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ.

ಬಾರಾಬತಿ ಕ್ರೀಡಾಂಗಣದಲ್ಲಿ ಕೊಹ್ಲಿ ಯವರು ಈ ಹಿಂದೆ ಆಡಿದ್ದ ನಾಲ್ಕು ಪಂದ್ಯಗಳಲ್ಲಿಯೂ  ಸೇರಿ ಕೇವಲ 34 ರನ್‌ ಗಳಿಸಿದ್ದರು.  ಈ ಸರಣಿಯ ಮೊದಲ ಎರಡು ಪಂದ್ಯ
ಗಳಲ್ಲಿಯೂ ಅವರು ಎರಡಂಕಿ ಮೊತ್ತ ಗಳಿಸಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಅವರು ಆ ಎರಡೂ ಸಮಸ್ಯೆಗಳನ್ನು ಬೌಂಡರಿಯಾಚೆ ಹೊಡೆದಟ್ಟಿದರು.  ಅವರ ಸುಂದರ ಡ್ರೈವ್‌ಗಳ ಆಟಕ್ಕೆ ಅಭಿಮಾನಿಗಳು ಮಾರುಹೋದರು. ವಿರಾಟ್‌ ಇನಿಂಗ್ಸ್‌ನಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ದಾಖಲಾಗಲಿಲ್ಲ. ಆದರೆ, ಫೀಲ್ಡರ್‌ಗಳ ನಡುವಿನ ಗ್ಯಾಪ್ ಗಳಲ್ಲಿ ಚೆಂಡನ್ನು ಬೌಂಡರಿಗೆರೆ ದಾಟಿಸುತ್ತಿದ್ದ ಕೊಹ್ಲಿಯ ಕಲಾತ್ಮಕ ಶೈಲಿಗೆ ರನ್‌ಗಳು ತಂಡದ ಖಾತೆ ಸೇರಿದವು. 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 44ನೇ ಅರ್ಧಶತಕ.

ಕೊಹ್ಲಿ ಮತ್ತು ಜಡೇಜ 6ನೇ ವಿಕೆಟ್ ಜೊತೆಯಾಟದಲ್ಲಿ 58 ರನ್‌ ಗಳನ್ನು ಸೇರಿಸಿದರು. ಕೊಹ್ಲಿಯನ್ನೇ ಅನುಸರಿಸಿದ ಅವರು ಗ್ರೌಂಡ್‌ ಷಾಟ್‌ಗಳ ಮೂಲಕ ರನ್‌ ಗಳಿಸಿದರು. ಆದರೂ ಅವರು 31 ಎಸೆತಗಳಲ್ಲಿ 39 ರನ್‌ ಹೊಡೆದರು.

ಶತಕದತ್ತ ಹೆಜ್ಜೆ ಇಟ್ಟಿದ್ದ ವಿರಾಟ್ 47ನೇ ಓವರ್‌ನಲ್ಲಿ ಕಿಮೊ ಪಾಲ್ ಎಸೆತವನ್ನು ಆಫ್‌ ಡ್ರೈವ್ ಮಾಡುವಲ್ಲಿ ವಿಫಲರಾದರು. ಬ್ಯಾಟ್‌ ನ ಒಳ ಅಂಚು ತಗುಲಿ ಆಫ್‌ಸ್ಟಂಪ್‌ ಅನ್ನು ಎಗರಿಸಿತು. ಕ್ಷಣ ಆಘಾತಗೊಂಡ ಕೊಹ್ಲಿ ಬೇಸರದಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಬ್ಯಾಟಿಂಗ್‌ ಬರುತ್ತಿದ್ದ ಶಾರ್ದೂಲ್ ಠಾಕೂರ್‌ ಕಿವಿಯಲ್ಲಿ ‘ಸಲಹೆ’ ಕೊಟ್ಟು ನಿರ್ಗಮಿಸಿದರು.

ಜಡೇಜ ಜೊತೆಗೂಡಿದ ಶಾರ್ದೂಲ್ ತಮ್ಮ ನಾಯಕನ ಮಾತನ್ನು ಈಡೇರಿ ಸಿದರು. ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಹೊಡೆದ ಶಾರ್ದೂಲ್ ಭರವಸೆ ಮೂಡಿಸಿದರು. ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 30 ರನ್‌ ಸೇರಿಸಿದ ಇಬ್ಬರೂ ತಂಡಕ್ಕೆ ಜಯದ ಕಾಣಿಕೆ ನೀಡಿದರು. ಗೆಲುವಿಗೆ ಬೇಕಿದ್ದ ಕೊನೆಯ ಒಂದು ರನ್ ನೋಬಾಲ್ ರೂಪದಲ್ಲಿ ಬಂದಿತು!

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು