ಮಂಗಳವಾರ, ಅಕ್ಟೋಬರ್ 20, 2020
23 °C

ಇಂಗ್ಲೆಂಡ್‌ ವಿರುದ್ಧದ ಕ್ರಿಕೆಟ್ ಸರಣಿ ಭಾರತದಲ್ಲೇ ಆಯೋಜಿಸಲು ಪ್ರಯತ್ನ: ಗಂಗೂಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಇಂಗ್ಲೆಂಡ್‌ ತಂಡದ ವಿರುದ್ಧ ಭಾರತದಲ್ಲಿ ನಿಗದಿಯಾಗಿರುವ ಸರಣಿಯನ್ನು ದೇಶದಲ್ಲೇ ನಡೆಯುವಂತೆ ಮಾಡಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಕೋವಿಡ್‌–19 ಪಿಡುಗಿನಿಂದ ಉಂಟಾಗಿರುವ ವಿಷಮ ಸ್ಥಿತಿಯ ನಡುವೆಯೂ ದೇಶಿ ಕ್ರಿಕೆಟ್‌ ಟೂರ್ನಿಗಳನ್ನು ಒಂದು ಹಂತದಲ್ಲಿ ಆರಂಭಿಸಲಾಗುವುದು ಎಂದೂ ಅವರು ನುಡಿದರು.

ಭಾರತದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆ 60 ಲಕ್ಷವನ್ನು ದಾಟಿದೆ. ಸಾವಿನ ಸಂಖ್ಯೆ 95 ಸಾವಿರದ ಆಸುಪಾಸಿದೆ. ಇಂಗ್ಲೆಂಡ್‌ ತಂಡವು ಮುಂದಿನ ವರ್ಷದ ಜನವರಿಯಿಂದ ಮಾರ್ಚ್‌ ಅವಧಿಯಲ್ಲಿ ಭಾರತ ತಂಡದ ವಿರುದ್ಧ ಐದು ಟೆಸ್ಟ್‌, ಮೂರು ಏಕದಿನ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಬೇಕಿದೆ.

ಇದನ್ನೂ ಓದಿ: 

‘ಇಂಗ್ಲೆಂಡ್‌ ವಿರುದ್ಧದ ಸರಣಿಯನ್ನು ಭಾರತದಲ್ಲೇ ನಡೆಯುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಮೂರು ಕ್ರೀಡಾಂಗಣಗಳು (ಅಬುಧಾಬಿ, ಶಾರ್ಜಾ ಹಾಗೂ ದುಬೈ) ಇರುವುದು ಒಂದು ಅನುಕೂಲ‘ ಎಂದು ಮಾಧ್ಯಮ ಸಂವಾದವೊಂದರಲ್ಲಿ ಗಂಗೂಲಿ ನುಡಿದರು. ಭಾರತದಲ್ಲಿ ಸೋಂಕು ಪ್ರಕರಣಗಳು ಏರುಗತಿಯಲ್ಲೇ ಮುಂದುವರಿದರೆ ಸರಣಿಯನ್ನು ಯುಎಇಯಲ್ಲಿ ಆಯೋಜಿಸುವ ಊಹಾಪೋಹಗಳ ಕುರಿತು ಅವರು ರೀತಿ ಹೇಳಿದರು.

ಟೂರ್ನಿಗಳ ಆಯೋಜನೆ ಮತ್ತು ಪರಸ್ಪರ ಸಹಕಾರಕ್ಕೆ ಸಂಬಂಧಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಎಮಿರೇಟ್ಸ್‌ ಕ್ರಿಕೆಟ್ ಮಂಡಳಿಗಳು ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿವೆ.

‘ಮುಂಬೈನಲ್ಲಿಯೂ ಮೂರು ಕ್ರೀಡಾಂಗಣಗಳು (ಬ್ರೇಬೋರ್ನ್‌, ವಾಂಖೆಡೆ ಹಾಗೂ ಡಿ.ವೈ ಪಾಟೀಲ್) ಇವೆ. ಕೋಲ್ಕತ್ತದ ಈಡನ್‌ ಗಾರ್ಡನ್‌ ಕೂಡ ಇದೆ. ಜೀವಸುರಕ್ಷಾ ವಾತಾವರಣ ನಿರ್ಮಿಸಬೇಕು. ಭಾರತದಲ್ಲೇ ಕ್ರಿಕೆಟ್ ಸರಣಿಗಳನ್ನು‌ ನಡೆಸುವುದು ನಮ್ಮ ಬಯಕೆ. ಆದರೆ ಕೋವಿಡ್‌ನಿಂದ ಉಂಟಾಗುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ‘ ಎಂದು ಹೇಳಿದರು.

2019–20ರ ಋತುವಿನಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ವಿವಿಧ ವಯೋಮಾನದ 2036 ದೇಶಿ ಪಂದ್ಯಗಳು ಭಾರತದಲ್ಲಿ ನಡೆದಿದ್ದವು. ಆದರೆ ಕೋವಿಡ್‌ ಭೀತಿಯ ನಡುವೆ ದೇಶದಾದ್ಯಂತ ಹಲವು ತಂಡಗಳಿಗಾಗಿ ಜೀವಸುರಕ್ಷಾ ವಾತಾವರಣ ನಿರ್ಮಿಸುವುದು ಕಷ್ಟಸಾಧ್ಯ ಎನಿಸಿದೆ.

‘ದೇಶಿ ಟೂರ್ನಿಗಳನ್ನೂ ಆಯೋಜಿಸುವ ಬಯಕೆ ಇದೆ. ಇದಕ್ಕಾಗಿ ಪರಿಸ್ಥಿತಿಯ ಅವಲೋಕನ ನಡೆಸಿದ್ದೇವೆ‘ ಎಂದು ಗಂಗೂಲಿ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು