ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪ್ಪ–ಅಮ್ಮನಿಗೆ ಇಷ್ಟದ ಕಾರು ನೀಡುತ್ತೇನೆ: ₹1.3 ಕೋಟಿ ಪಡೆದ ಕರ್ನಾಟಕದ ವೃಂದಾ

Published 10 ಡಿಸೆಂಬರ್ 2023, 12:42 IST
Last Updated 10 ಡಿಸೆಂಬರ್ 2023, 12:42 IST
ಅಕ್ಷರ ಗಾತ್ರ

ಮುಂಬೈ: ಬೆಂಗಳೂರಿನ ಯುವ ಬ್ಯಾಟರ್‌ ವೃಂದಾ ದಿನೇಶ್ ಅವರ ಪಾಲಿಗೆ ಶನಿವಾರ ಮಹಿಳಾ ಪ್ರೀಮಿಯರ್‌ ಲೀಗ್‌ ಬಿಡ್ಡಿಂಗ್  ಸ್ಮರಣೀಯ. ರಾಷ್ಟ್ರೀಯ ತಂಡಕ್ಕೆ ಇನ್ನೂ ಆಡುವ ಮೊದಲೇ ಅವರು ₹1.30 ಕೋಟಿಗೆ ಯು.ಪಿ ವಾರಿಯರ್ಸ್‌ ಪಾಲಾಗಿದ್ದಾರೆ. ಈಗ ತಂದೆ–ತಾಯಿಗೆ ಉಡುಗೊರೆಯಾಗಿ ಕಾರನ್ನು ನೀಡಲು ಅವರು ಬಯಸಿದ್ದಾರೆ.

ತಂದೆ–ತಾಯಿ ಮೇಲೆ ತುಂಬಾ ಅಕ್ಕರೆ ಹೊಂದಿರುವ ವೃಂದಾ, ಬೆಂಗಳೂರಿನಲ್ಲಿರುವ ತಾಯಿಗೆ ಭಾವನೆ ತುಂಬಿ ಮಾತು ಹೊರಬರಲಿಕ್ಕಿಲ್ಲ ಎಂಬ ಕಾರಣದಿಂದ ವಿಡಿಯೊ ಕಾಲ್‌ ಮಾಡಲು ಹೋಗಿರಲಿಲ್ಲ.

‘ಅವರಿಗೆ (ತಾಯಿಗೆ) ಭಾವನೆ ತಡೆಯಲಾಗದೇ ಕಣ್ಣುತುಂಬಿ ಬರಬಹುದು ಎಂದೆನಿಸಿತು. ಅವರಿಗೆ ಭಾವನೆ ತಡೆಯಲಾಗದು ಎಂಬ ಕಾರಣದಿಂದ ವಿಡಿಯೊ ಕಾಲ್‌ ಮಾಡಲಿಲ್ಲ. ನಾನು ಮೊಬೈಲ್ ಕರೆಯಷ್ಟೇ ಮಾಡಿದೆ. ಅವರ ಗಂಟಲು ತುಂಬಿಬಂದು ಧ್ವನಿ ಕ್ಷೀಣವಾಗಿತ್ತು’ ಎಂದು 22 ವರ್ಷದ ಆಟಗಾರ್ತಿ ಹೇಳಿದರು. ಯುಪಿ ವಾರಿಯರ್ಸ್ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಬಲಗೈ ಬ್ಯಾಟರ್‌ ವೃಂದಾ ಅವರು ಮಹಿಳಾ 23 ವರ್ಷದೊಳಗಿನವರ ಟಿ20 ಟ್ರೋಫಿ ಟೂರ್ನಿಯಲ್ಲಿ ಆಡಲು ಕರ್ನಾಟಕ ತಂಡದ ಜೊತೆ ಛತ್ತೀಸಗಢದ ರಾಯಪುರದಲ್ಲಿ ಇದ್ದಾರೆ.

ಭಾರತದ ಆಟಗಾರ್ತಿಯರ ಪೈಕಿ ಕಾಶ್ವಿ ಗೌತಮ್ ಬಿಟ್ಟರೆ ಅತಿ ಹೆಚ್ಚು ಮೊತ್ತಕ್ಕೆ ಫ್ರಾಂಚೈಸಿ ಪಾಲಾದ ಎರಡನೇ ಆಟಗಾರ್ತಿ ಎಂಬ ಹಿರಿಮೆ ವೃಂದಾ ಅವರದಾಯಿತು. ಕಾಶ್ವಿ ₹2ಕೋಟಿ ಮೊತ್ತಕ್ಕೆ ಗುಜರಾತ್‌ ಜೈಂಟ್ಸ್‌ ಪಾಲಾಗಿದ್ದರು.

‘ಪೋಷಕರು ಏನೂ ನಿರೀಕ್ಷೆ ಇಟ್ಟುಕೊಳ್ಳದೇ ಮಕ್ಕಳಿಗಾಗಿ ಸಾಕಷ್ಟು ತ್ಯಾಗ ಮಾಡಿರುತ್ತಾರೆ. ಆದರೆ ಅವರ ಮೊಗದಲ್ಲಿ ಮೂಡುವ 1000 ವ್ಯಾಟ್‌ ನಗುವಿನ ಮೌಲ್ಯವನ್ನು ಅವರ ತ್ಯಾಗವನ್ನರಿತ ಮಕ್ಕಳು ತಿಳಿದೇ ಇರುತ್ತಾರೆ’ ಎಂದರು.

‘ಅವರಿಗೆ ನನ್ನಿಂದ ತುಂಬಾ ಖುಷಿಯಾಗಿದೆ. ಅವರಿಗೆ ಹೆಮ್ಮೆ ಮೂಡಿಸಬೇಕೆಂದು ಬಯಸಿದ್ದೇನೆ. ಅವರು ಕಂಡಿದ್ದ ಕನಸಿನ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ. ಈಗ ನನ್ನ ಮುಂದಿರುವ ಮೊದಲ ಗುರಿಯೇ ಅದು. ನಂತರದ್ದೆಲ್ಲಾ ಆಮೇಲೆ’ ಎಂದು ವೃಂದಾ ಹೇಳಿದರು.

ಒತ್ತಡವಿಲ್ಲ

ದೊಡ್ಡ ಮೊತ್ತಕ್ಕೆ ತಂಡವೊಂದರ ಪಾಲಾದಾಗ, ಆಟಗಾರ್ತಿಯರ ಮೇಲೆ ಒತ್ತಡ ಬಿದ್ದು, ಅದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿದ ನಿದರ್ಶನಗಳಿವೆ.

‘ಈ ಮೊತ್ತ ದೊಡ್ಡದು. ಆದರೆ ಅದು ನನ್ನ ಕೈಲಿರಲಿಲ್ಲ. ನಾನು ತಂಡಕ್ಕೆ ಆಯ್ಕೆಯಾಗಿದ್ದೇನೆ. ನನ್ನಿಂದಾದಷ್ಟು ಒಳ್ಳೆಯ ಆಟ ಆಡುವೆ. ಈ ಮೊತ್ತ ನನ್ನ ಆಟದ ಮೇಲೆ ಹೆಚ್ಚಿನ ವ್ಯತ್ಯಾಸ ಮಾಡಲಿಕ್ಕಿಲ್ಲ. ಆಡುವುದಷ್ಟೇ ನನ್ನ ಕೆಲಸ’ ಎಂದು ವೃಂದಾ ಹೇಳಿದರು.

ನಾಯಕಿ ಅಲಿಸಾ ಹೀಲಿ ಜೊತೆ ಇನಿಂಗ್ಸ್‌ ಆರಂಭಿಸಬೇಕೆಂದು ತಮ್ಮ ಆಸೆಗಳಲ್ಲೊಂದು ಎಂದು ಅವರು ಹೇಳಿದರು. ‘ತಂತ್ರಗಾರಿಕೆ ಮತ್ತು ನಾಯಕತ್ವದ ಕೌಶಲಗಳಿಗೆ ಹೆಸರಾಗಿರುವ ಅಲಿಸಾ ತಮ್ಮ ಮೆಚ್ಚಿನ ಆಟಗಾರ್ತಿ ಎಂದು ವೃಂದಾ ಹೇಳಿದರು. ‘ಅವರ ಜೊತೆ ಬ್ಯಾಟಿಂಗ್ ಆರಂಭಿಸುವುದು ಕನಸು ನನಸಾದ ಹಾಗೆ’ ಎಂದಿದ್ದಾರೆ.

ಆರ್‌ಸಿಬಿ

ಆದರೆ ತಾವು ಬೆಂಗಳೂರಿನವರಾಗಿರುವ ಕಾರಣ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಆಡಬೇಕೆಂಬ ಆಸೆ ಮನಸ್ಸಿನೊಳಗಿತ್ತು ಎಂದು ಅವರು ಒಪ್ಪಿಕೊಂಡರು. ಆದರೆ ಯುಪಿ ವಾರಿಯರ್ಸ್‌ ಕೊಂಡುಕೊಂಡಿದ್ದರಿಂದ ಸಂತಸವಾಗಿದೆ ಎಂದರು.

ತಿರುವು

‘2020ರಲ್ಲಿ ಕರ್ನಾಟಕ ಪರ ಸತತ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದೆ. ನಂತರ ಸೀನಿಯರ್ ಮಹಿಳಾ ಟೂರ್ನಿಯಲ್ಲಿ ಸತತವಾಗಿ ಶತಕಗಳನ್ನು ಗಳಿಸಿದ್ದು ತಮ್ಮ ವೃತ್ತಿಜೀವನದಲ್ಲಿ ತಿರುವು ನೀಡಿತು’ ಎಂದು ವೃಂದಾ ಹೇಳಿದರು.

‘ನಾನು 13ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆರಂಭಿಸಿದೆ. ಅದಕ್ಕಿಂತ ಮೊದಲು ಹುಡುಗರ ಜೊತೆ ಗಲ್ಲಿ ಕ್ರಿಕೆಟ್ ಆಡುತ್ತಿದ್ದೆ’ ಎಂದು ನೆನಪಿಸಿಕೊಂಡರು. ‘ಅದೊಂದು ದಿನ ನನ್ನ ತಂದೆ ನನ್ನನ್ನು ಬೇಸಿಗೆ ಶಿಬಿರಕ್ಕೆ ಸೇರಿಸಿದರು. ಮುಂದೆ ಹೇಗಾಗುತ್ತದೆ ನೋಡೋಣ ಎಂದರು. ಅಂದಿನಿಂದ ನಾನು ಆಟವನ್ನು ಖುಷಿಯಿಂದ ಆಡುತ್ತಿದ್ದೇನೆ’ ಎಂದು ಬಾಲ್ಯದ ಬಗ್ಗೆ ಹೇಳಿದರು.

‘ಸೀನಿಯರ್‌ ತಂಡಕ್ಕೆ 2018ರ ಡಿಸೆಂಬರ್‌ನಲ್ಲಿ ಮೊದಲ ಬಾರಿ ಆಡಿದೆ. ಎರಡು ಪಂದ್ಯದಲ್ಲಿ ಆಡಿದ್ದೆ. ನಂತರ ದೀರ್ಘಕಾಲ ಆಡಲಿಲ್ಲ. 22 ಪಂದ್ಯಗಳಿಗೆ ನಾನು ಬೆಂಚಿನಲ್ಲಿದ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT