ಶುಕ್ರವಾರ, ಸೆಪ್ಟೆಂಬರ್ 25, 2020
23 °C
ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ವಿವರಣೆ

ಯುಎಇಯಲ್ಲಿ ಐಪಿಎಲ್‌: ಕೇಂದ್ರದ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಆಯೋಜಿಸಲು ಕೇಂದ್ರ ಸರ್ಕಾರ ಅಧಿಕೃತ ಒಪ್ಪಿಗೆ ನೀಡಿದೆ ಎಂದು ಐಪಿಎಲ್‌ ಆಡಳಿತ ಸಮಿತಿಯ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಸೋಮವಾರ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್‌–19 ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಕಾರಣ ವಿದೇಶದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಕೇಂದ್ರ ಸರ್ಕಾರ ಕಳೆದ ವಾರ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಾತ್ವಿಕ ಒಪ್ಪಿಗೆ ನೀಡಿತ್ತು. ಟೂರ್ನಿಯನ್ನು ದೇಶದಿಂದ ಹೊರಗೆ ಆಯೋಜಿಸಲು ಮುಂದಾದ ಬಿಸಿಸಿಐಗೆ ಗೃಹ, ವಿದೇಶಾಂಗ ಹಾಗೂ ಕ್ರೀಡಾ ಸಚಿವಾಲಯಗಳ ಅನುಮತಿಯೂ ಬೇಕಾಗಿತ್ತು. ಈ ಸಚಿವಾಲಯಗಳು ಟೂರ್ನಿಗೆ ಒಪ್ಪಿಗೆ ನೀಡಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ರಿಜೇಶ್ ಪಟೇಲ್ ‘ಸರ್ಕಾರದಿಂದ ನಾವು ಲಿಖಿತ ಒಪ್ಪಿಗೆ ಪಡೆದುಕೊಂಡಿದ್ದೇವೆ‘ ಎಂದಷ್ಟೇ ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ಟೂರ್ನಿಗೆ ಮೌಖಿಕ ಸಮ್ಮತಿ ನೀಡಿದಾಗಲೇ ನಾವು ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿಗೆ ಮಾಹಿತಿ ನೀಡಿದ್ದೆವು. ಈಗ ನಮ್ಮ ಬಳಿ ಲಿಖಿತ ದಾಖಲೆಗಳಿವೆ. ಹಾಗಾಗಿ ಎಲ್ಲ ಚಟುವಟಿಕೆ ಕ್ರಮವಾಗಿ ನಡೆಯುತ್ತಿವೆ ಎಂಬುದನ್ನು ಫ್ರ್ಯಾಂಚೈಸ್‌ಗಳಿಗೆ ತಿಳಿಸಬಹುದು‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಎರಡು ಕಡ್ಡಾಯ ಕೋವಿಡ್‌–19 ಪರೀಕ್ಷೆಗಳ ಬಳಿಕ, ಆಗಸ್ಟ್‌ 20ರ ನಂತರ ಬಹುತೇಕ ಫ್ರಾಂಚೈಸ್‌ಗಳು ಯುಎಇಗೆ ತೆರಳಲಿವೆ.

ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಒತ್ತಾಯದ ಮೇರೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರರು ಹಾಗೂ ಸಿಬ್ಬಂದಿ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಶಿಬಿರದಲ್ಲಿ ಪಾಲ್ಗೊಂಡು ಆಗಸ್ಟ್‌ 22ರಂದು ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.

ಗಾಲ್ವನ್ ಕಣಿವೆಯಲ್ಲಿ ಈಚೆಗೆ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಆಗ ದೇಶದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕು ಎಂಬ ಅಭಿಯಾನ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್‌ನಿಂದ ವಿವೊ ಕಂಪನಿಯ ಟೈಟಲ್‌ ಪ್ರಾಯೋಜಕತ್ವ ಕೈಬಿಡಲು ಒತ್ತಡ ಹೆಚ್ಚಿತ್ತು. ಆದರೆ ಈಚೆಗೆ ವಿವೊ ಕಂಪನಿಯೇ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಹೀಗಾಗಿ ಪ್ರಾಯೋಜಕತ್ವಕ್ಕೆ ಸಂಬಂಧಿಸಿ ಬಿಸಿಸಿಐ ಗೊಂದಲದಲ್ಲಿ ಸಿಲುಕಿದೆ.

’ಪ್ರಾಯೋಜಕತ್ವ ಸ್ಥಗಿತದಿಂದ ಹಿನ್ನಡೆಯಾಗಿಲ್ಲ. ಹಲವು ಕಂಪನಿಗಳು ಟೈಟಲ್‌ ಪ್ರಾಯೋಜಕತ್ವ ಪಡೆಯಲು ಆಸಕ್ತಿ ತೋರಿವೆ. ದೇಶಿ ಕಂಪನಿಯಯಾಗಲಿ ವಿದೇಶಿ ಕಂಪನಿಯಾಗಲಿ ಹೆಚ್ಚು ಮೊತ್ತದ ಬಿಡ್‌ ಮಾಡಿದವರಿಗೆ ಹಕ್ಕುಗಳನ್ನು ನೀಡಲಾಗುವುದು. ಆಗಸ್ಟ್‌ 18ರೊಳಗೆ ಈ ಕುರಿತ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಾಗುವುದು‘ ಎಂದು ಬ್ರಿಜೇಶ್‌ ತಿಳಿಸಿದ್ದಾರೆ.

ಬಾಬಾ ರಾಮದೇವ್‌ ಅವರ ಪತಂಜಲಿ ಕಂಪನಿಯು ಈ ಬಾರಿಯ ಟೈಟಲ್‌ ಪ್ರಾಯೋಜಕತ್ವ ವಹಿಸಿಕೊಳ್ಳಲು ಆಸಕ್ತಿ ತೋರಿದೆ. ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಟೂರ್ನಿ ನಡೆಯಲಿದೆ. ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು