ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI | ವೆಸ್ಟ್ ಇಂಡೀಸ್ ಜಯಭೇರಿ

ಕ್ರಿಕೆಟ್: ಭಾರತ–ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ20; ಶಿವಂ ದುಬೆ ಅರ್ಧ ಶತಕ
Last Updated 8 ಡಿಸೆಂಬರ್ 2019, 18:21 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ‌ಎಡಗೈ ಬ್ಯಾಟ್ಸ್‌ಮನ್ ಶಿವಂ ದುಬೆ ಭಾನುವಾರ ರಾತ್ರಿ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಆದರೆ, ಭಾರತಕ್ಕೆ ಜಯ ಒಲಿಯಲಿಲ್ಲ. ವೆಸ್ಟ್ ಇಂಡೀಸ್ ತಂಡವು ಎಂಟು ವಿಕೆಟ್‌ಗಳಿಂದ ಜಯ ದಾಖಲಿಸಿತು.

ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್‌ಗೆ ವಿರಾಟ್ ಕೊಹ್ಲಿ ಬಳಗವು ದಂಡ ತೆತ್ತಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು ದುಬೆ ಮಿಂಚಿನ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 170 ರನ್ ಗಳಿಸಿತು. ಪ್ರವಾಸಿ ಬಳಗವು 18.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 173 ರನ್‌ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಲೆಂಡ್ಲ್ ಸಿಮನ್ಸ್‌ ( ಔಟಾಗದೆ 67) ಮತ್ತು ನಿಕೊಲಸ್ ಪೂರನ್ (ಔಟಾಗದೆ 38) ಮತ್ತು ಎವಿನ್ ಲೂಯಿಸ್ (40 ರನ್) ಮಿಂಚಿದರು.

ಈ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಮಿಂಚಲಿಲ್ಲ. ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಕೆ.ಎಲ್. ರಾಹುಲ್ ಇಲ್ಲಿ ಕೇವಲ 11 (11ಎಸೆತ, 1ಬೌಂಡರಿ) ರನ್‌ ಗಳಿಸಿ, ನಾಲ್ಕನೇ ಓವರ್‌ನಲ್ಲಿ ಔಟಾದರು. ಇನ್ನೊಂದೆಡೆ ರೋಹಿತ್ ಶರ್ಮಾ ಲಯ ಕಂಡುಕೊಳ್ಳಲು ಪರದಾಡುತ್ತಿದ್ದರು. ಆಗ ಕ್ರೀಸ್‌ಗೆ ಬಂದಿದ್ದು ಶಿವಂ ದುಬೆ!

ನಾಯಕ ವಿರಾಟ್ ಕೊಹ್ಲಿ ಆಗಮನದ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರು ಕ್ಷಣಕಾಲ ಅಚ್ಚರಿಗೊಂಡರು. ಕೆಲವು ಎಸೆತಗಳನ್ನು ಎದುರಿಸಿದ ನಂತರ ಶಿವಂ ತಮ್ಮ ಭುಜಬಲ ಪರಾಕ್ರಮ ಮೆರೆಯಲು ಆರಂಭಿಸಿದರು. ಆಗ ಜನ ಸಂಭ್ರಮದಲ್ಲಿ ಕುಣಿದಾಡಿದರು. ಆರಡಿ ಎತ್ತರದ ‘ಹ್ಯಾಂಡ್‌ಸಮ್ ಬಾಯ್’ ಶಿವಂ ಸಿಡಿಸಿದ ನಾಲ್ಕು ಸಿಕ್ಸರ್‌ಗಳು ಯುವರಾಜ್ ಸಿಂಗ್ ಅವರ ‘ಪವರ್ ಹಿಟ್‌’ಗಳನ್ನು ನೆನಪಿಗೆ ತಂದವು. ಅದರಲ್ಲಿ ಅವರು ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಅವರು ಹಾಕಿದ ಒಂಬತ್ತನೇ ಓವರ್‌ನಲ್ಲಿ ಸತತ ಮೂರು ಸಿಕ್ಸರ್‌ ಎತ್ತಿದರು. ಬ್ಯಾಟ್ಸ್‌ಮನ್ ಏಕಾಗ್ರತೆ ತಪ್ಪಿಸುವ ಪ್ರಯತ್ನದಲ್ಲಿ ಎರಡು ವೈಡ್ ಬಾಲ್ ಹಾಕಿದೆ ಪೊಲಾರ್ಡ್‌ ತಾವೇ ಲಯ ತಪ್ಪಿದರು. 27 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು.

ಆದರೆ ಇನ್ನೊಬ್ಬ ಮುಂಬೈಕರ್ ರೋಹಿತ್ ಮಾತ್ರ ಮಂಕಾದರು. ಹೋದ ಪಂದ್ಯದ ಹೀರೊ ವಿರಾಟ್ ಕೊಹ್ಲಿ (19 ರನ್) ಅವರನ್ನು ಈ ಸಲ ಬೌಲರ್‌ಗಳು ಕೆಣಕುವ ತಪ್ಪು ಮಾಡಲಿಲ್ಲ. ಕೊಹ್ಲಿ ಕೂಡ ಎರಡು ಸುಂದರ ಬೌಂಡರಿಗಳನ್ನು ಬಾರಿಸಿ ಲಯದಲ್ಲಿದ್ದರು. 11ನೇ ಓವರ್‌ನಲ್ಲಿ ಶಿವಂ ದುಗಬೆ ಔಟಾದ ನಂತರ, ಕೊಹ್ಲಿ ಮತ್ತು ರಿಷಭ್ ಪಂತ್ ರನ್‌ಗಳನ್ನು ವೇಗವಾಗಿ ಗಳಿಸುವ ಪ್ರಯತ್ನ ಮಾಡಿದರು. ಆದರೆ, 14ನೇ ಓವರ್‌ನಲ್ಲಿ ಕೆಸ್ರಿಕ್ ವಿಲಿಯಮ್ಸ್‌ ಎಸೆತವನ್ನು ಮುನ್ನುಗಿ ಹೊಡೆಯಲು ಹೋದ ವಿರಾಟ್ ಕೊನೆಯ ಕ್ಷಣದಲ್ಲಿ ಬೌನ್ಸ್‌ ಆದ ಎಸೆತವನ್ನು ಲಾಬ್ ಕಟ್ ಮಾಡಿದರು. ಆದರೆ ಅದು ಶಕ್ತಿಯುತವಾಗಿರಲಿಲ್ಲ. ಶಾರ್ಟ್‌ ಥರ್ಡ್‌ಮ್ಯಾನ್‌ನಲ್ಲಿದ್ದ ಸಿಮನ್ಸ್‌ ಸುಲಭ ಕ್ಯಾಚ್ ಪಡೆದರು. ಕೆಸ್ರಿಕ್ ಸಂಭ್ರಮಿಸಲಿಲ್ಲ. ತಮ್ಮ ಬಾಯಿ ಮೇಲೆ ಬೆರಳಿಟ್ಟು ಉಳಿದ ಆಟಗಾರರಿಗೂ ಸುಮ್ಮನಿರುವಂತೆ ಸೂಚಿಸಿದರು!

ಹೋದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ರಿಷಭ್ (33; 22ಎ, 3ಬೌಂ, 1ಸಿ) ಇಲ್ಲಿ ಒಂದಿಷ್ಟು ಚೇತೋಹಾರಿ ಆಟವಾಡಿದರು. ರಿವರ್ಸ್ ಸ್ವೀಪ್, ಸ್ಕೂಪ್ ಶಾಟ್‌ಗಳನ್ನು ಆಡಿ ಗಮನ ಸೆಳೆದರು. ಇದರಿಂದಾಗಿ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.

ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದರು. ಅವರು ಒಟ್ಟು2563 ರನ್ ಗಳಿಸಿದರು. ಅವರಿಗಿಂತ ಒಂದು ರನ್ ಕಡಿಮೆ ಇರುವ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT